Advertisement
ಇದು ಅವೈಜ್ಞಾನಿಕ ಡಂಪಿಂಗ್ ಯಾರ್ಡ್‌ನಿಂದ ಬಾಧಿತ ಬನ್ನೂರು ಗ್ರಾಮದ ನಿವಾಸಿಗಳು ನಗರಸಭೆ, ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ನೀಡಿದ ಎಚ್ಚರಿಕೆ. ರವಿವಾರ ಬನ್ನೂರು ಶಾಲೆಯಲ್ಲಿ ಡಂಪಿಂಗ್ ಯಾರ್ಡ್ ಸಮಸ್ಯೆ ಕುರಿತಂತೆ ನಡೆದ ಮಾಹಿತಿ ಹಾಗೂ ಸಮಾಲೋಚನ ಸಭೆ ಯಲ್ಲಿ 150ಕ್ಕೂ ಮಿಕ್ಕಿದ ಸ್ಥಳೀಯರು ಈ ಸಂದೇಶ ನೀಡಿದ್ದಾರೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಬನ್ನೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಪಾಟಾಳಿ, 27 ವರ್ಷಗಳ ಹಿಂದೆ ಆಗಿನ ಮಂಡಲ ಪಂಚಾಯತ್ ಅನುಮತಿ ನಿರಾಕರಿಸಿದ್ದರೂ, ಜನರ ಪ್ರತಿಭಟನೆಯನ್ನು ಲೆಕ್ಕಿಸದೆ ಪೊಲೀಸ್ ಬಲದೊಂದಿಗೆ ಡಂಪಿಂಗ್ ಯಾರ್ಡ್ ಆರಂಭಿಸಿದ್ದಾರೆ. ಅವೈಜ್ಞಾನಿಕ ಕ್ರಮದಿಂದ ಸಮಸ್ಯೆಗಳು ವಿಪರೀತವಾಗಿ ಬೆಳೆಯುತ್ತಿದ್ದರೂ ಜಿಲ್ಲಾಧಿಕಾರಿಗೂ ತಪ್ಪು ಮಾಹಿತಿ ನೀಡಿದ್ದಾರೆ. ಮಕ್ಕಳು ಊಟ ಮಾಡುವುದಿಲ್ಲ, ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ. ಜನ ಊರನ್ನೇ ಬಿಟ್ಟು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದು ನಗರಸಭೆಗೆ ಮುನ್ನೆಚ್ಚರಿಕಾ ಸಭೆಯಾಗಿದ್ದು, ನ್ಯಾಯಕ್ಕಾಗಿ ಪ್ರಾಣ ತ್ಯಾಗಕ್ಕೂ ಸಿದ್ಧವಿದ್ದೇವೆ ಎಂದರು. ಸಾರ್ವಜನಿಕ ಹಿತಾಸಕ್ತಿ ಮುಖ್ಯ
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದ ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ, ಮನುಷ್ಯನಿಗೋಸ್ಕರ ಕಾನೂನೇ ಹೊರತು, ಕಾನೂನಿಗಾಗಿ ಮನುಷ್ಯ ಅಲ್ಲ. ಯಾವುದೇ ಆಡಳಿತ ವ್ಯವಸ್ಥೆಯಲ್ಲೂ ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಆದರೆ ಇಲ್ಲಿ ಅದನ್ನು ಪಾಲಿಸಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಎಂಡೋಸಲ್ಫಾನ್ ಬಾಧಿತ ಪಾಣಾಜೆ, ಕೊಕ್ಕಡ, ನೆಲ್ಯಾಡಿಯ ಸ್ಥಿತಿ ಇಲ್ಲಿಯೂ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
Related Articles
ಪ್ಲಾಸ್ಟಿಕ್ ಸ್ಲೋ ಪಾಯಿಸನ್ ಇದ್ದಂತೆ. ಪಟಾಕಿಯ ಹೊಗೆಯ ಪರಿಣಾಮ ಪ್ಲಾಸ್ಟಿಕ್‌ನಲ್ಲೂ ಇದೆ. ಪ್ಲಾಸ್ಟಿಕ್, ತ್ಯಾಜ್ಯದ ಪರಿಣಾಮದಿಂದ ತುರಿಕೆ, ಚರ್ಮರೋಗ, ಅಂಗ ಊನತೆ, ಬುದ್ಧಿ ಮಾಂದ್ಯತೆ, ಕ್ಯಾನ್ಸರ್‌ನಂತಹ ರೋಗ ಕಾಣಿಸಿಕೊಳ್ಳಬಹುದು. ಒಂದು ನೊಣಕ್ಕೂ ಬದುಕುವ ಹಕ್ಕು ಭೂಮಿಯಲ್ಲಿ ಇದೆ. ಇದು ಈ ಭಾಗದ ಜನರ ಬದುಕಿನ ಪ್ರಶ್ನೆಯಾಗಿರುವುದರಿಂದ ರಾಜಕೀಯ ದವರನ್ನು ನಂಬದೆ ಆರೋಗ್ಯಪೂರ್ಣ, ಗೌರವಯುತ ಬದುಕಿಗಾಗಿ ಧ್ವನಿ ಎತ್ತಲೇ ಬೇಕು ಎಂದರು.
Advertisement
ಡಂಪಿಂಗ್ ಯಾರ್ಡ್ ವಿರುದ್ಧದ ಹೋರಾಟಗಾರ ರಾಮಚಂದ್ರ ಕೆ. ನೆಕ್ಕಿಲ, 1989 ರಿಂದ ಡಂಪಿಂಗ್ ಯಾರ್ಡ್ ವಿರುದ್ಧ ಸ್ಥಳೀಯರು, ಹೋರಾಟ ಸಮಿತಿ ಹಾಗೂ ತಾವು ವೈಯಕ್ತಿಕವಾಗಿ ನಡೆಸಿದ ಕಾನೂನು ಸಹಿತ ವಿವಿಧ ಹೋರಾಟಗಳ ಮಾಹಿತಿ ನೀಡಿದರು.
ಬದ್ಧತೆ ಪ್ರಶ್ನೆಡಂಪಿಂಗ್ ಯಾರ್ಡ್ ಸಮಸ್ಯೆ ಕುರಿತಂತೆ ಮಾಧ್ಯಮಗಳಲ್ಲಿ ಬಂದ ಸ್ಥಳೀಯಾಡಳಿತದ ಪ್ರತಿನಿಧಿಯೋರ್ವರ ಪ್ರತಿಕ್ರಿಯೆಗೆ ಉತ್ತರಿಸಿದ ರಾಜಮಣಿ, ಇದು 9 ತಿಂಗಳ ಅನುಭವ ಅಥವಾ 30 ವರ್ಷಗಳ ಸಮಸ್ಯೆಯ ಪ್ರಶ್ನೆಯಲ್ಲ. ಜನಪ್ರತಿಧಿಗಳ ಬದ್ಧತೆಯ ಪ್ರಶ್ನೆ. ಪರಿಹರಿಸುವ ಇಚ್ಛಾಶಕ್ತಿ ಇಲ್ಲದೆ ಜವಾಬ್ದಾರಿಯಿಂದ ಪಲಾಯನ ಮಾಡುವ ಹಕ್ಕೇ ಜನಪ್ರತಿನಿಧಿಯಾದ ವರಿಗೆ ಇಲ್ಲ ಎಂದು ಹೇಳಿದರು. ಊರಿನ ಶುದ್ಧಕ್ಕಾಗಿ
ಇಲ್ಲೇ ಹುಟ್ಟಿ ಬೆಳೆದಿದ್ದೇವೆ. ಕಲ್ಲಿನ ಕಲ್ಪಣೆಯಾಗಿದ್ದ, ಸುತ್ತಲೂ ಮರಗಳಿದ್ದ ಪ್ರದೇಶ ಇಂದು ಹೇಗೋ ಆಗಿದೆ. ದನಗಳು, ನಾಯಿಗಳಿಗೆ ತ್ಯಾಜ್ಯದ ಪರಿಣಾಮದಿಂದ ಹುಚ್ಚು ಹಿಡಿಯುತ್ತಿವೆ. ಊರಿನಲ್ಲಿ ಶುದ್ಧಕ್ಕಾಗಿ, ಬದುಕಿಗಾಗಿ ಒಗ್ಗಟ್ಟಾಗೋಣ.
– ಶ್ರೀಧರ ಭಂಡಾರಿ, ಪ್ರಶಸ್ತಿ ವಿಜೇತ ಹಿರಿಯ ಯಕ್ಷಗಾನ ಕಲಾವಿದ ಎಷ್ಟು ಮನವಿ ನೀಡಲಿ
ಬನ್ನೂರು ಗ್ರಾಮ ಕಸ ಹಾಕಲೇ ಇರುವುದು ಎಂದೇ ತಿಳಿದುಕೊಂಡಿದ್ದಾರೆ. ಡಂಪಿಂಗ್ ಯಾರ್ಡ್ ಬಿಟ್ಟು ಇಡೀ ಪರಿಸರದಲ್ಲಿ ಕಸ, ತ್ಯಾಜ್ಯ, ಮಾಂಸಗಳನ್ನು ರಾಶಿ ಹಾಕುತ್ತಿದ್ದಾರೆ. ಸಂಬಂಧಪಟ್ಟ ಎಲ್ಲರೂ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನು ಮನವಿಗಳನ್ನು ಮಾಡುವ ಅಗತ್ಯವೇ ಇಲ್ಲ.
– ಚಂದ್ರಶೇಖರ ಪಾಟಾಳಿ, ಡಂಪಿಂಗ್ ಯಾರ್ಡ್ ವಿರುದ್ಧದ ಹೋರಾಟಗಾರ ಬದುಕಲು ಬಿಡಿ
ಡಂಪಿಂಗ್ ಯಾರ್ಡ್‌ನಲ್ಲಿ ಸಂಭವಿಸಿದ ಬೆಂಕಿಯ ಪರಿಣಾಮ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ನಮ್ಮ ಮಕ್ಕಳಿಗೂ ಕಷ್ಟವಾಗುತ್ತಿದೆ. ಎದೆ ನೋವು ಸಹಿತ ಆರೋಗ್ಯ ಸಮಸ್ಯೆಗೆ ಎಲ್ಲರೂ ನಲುಗಿದ್ದೇವೆ. ಮಾನವೀಯ ನೆಲೆಯಿಂದಾದರೂ ನಮಗೆ ಬದುಕುವ ಅವಕಾಶ ನೀಡಬೇಕು.
-ರಾಧಾ ಚಂದ್ರ, ಸ್ಥಳೀಯ ಗೃಹಿಣಿ