Advertisement

Congress Government ವಿರುದ್ಧ ಉಗ್ರ ಹೋರಾಟ: ಬಿಜೆಪಿ ಸಿದ್ಧತೆ

12:19 AM Jul 11, 2024 | Team Udayavani |

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಉಗ್ರ ಹೋರಾಟ ನಡೆಸಲು ಬಿಜೆಪಿ ನಿರ್ಧರಿಸಿದ್ದು ಸದನದಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚಿಸಲು ಕಲಾಪವನ್ನು ಮತ್ತೂ ಒಂದು ವಾರ ವಿಸ್ತರಿಸುವಂತೆ ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹಿಸಿದ್ದಾರೆ.

Advertisement

ಹೋರಾಟಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕರ ಜತೆಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾದ ಭ್ರಷ್ಟಾಚಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಭಾಗಿಯಾದ ಮುಡಾ ಹಗರಣದ ಬಗ್ಗೆ ಮಾತನಾಡಲು ಸದನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ ಮಂಡಿಸಲಾಗುವುದು ಎಂದರು.

ಝೀಕಾ ವೈರಸ್‌, ಡೆಂಗ್ಯೂ ರೋಗಗಳು ಹೆಚ್ಚಿದ್ದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಬೇಕೆಂದು ಆಗ್ರಹಿಸಿದ್ದರೂ ಸರಕಾರ ತಲೆಕೆಡಿಸಿಕೊಂಡಿಲ್ಲ. ದರಗಳ ಏರಿಕೆಯಿಂದಾಗಿ ರೈತರ ಆತ್ಮಹತ್ಯೆ ಹೆಚ್ಚಿದೆ. ಹಿಂದೂಗಳ ಮೇಲೆ ಹಲ್ಲೆಗಳು ನಡೆಯುತ್ತಿದೆ. ಇಲಾಖೆಗಳ ಅನುದಾನ ಕಡಿತ, 700 ಕೋಟಿ ರೂ. ಹಾಲು ಪೋ›ತ್ಸಾಹಧನ ಬಾಕಿ ಮೊದಲಾದ ಸಮಸ್ಯೆಗಳು ಕಂಡುಬಂದಿದೆ. ಒಂದೇ ವರ್ಷದಲ್ಲಿ ಕಾಂಗ್ರೆಸ್‌ ಶಿಶುಪಾಲನಂತೆ ನೂರು ತಪ್ಪುಗಳನ್ನು ಮಾಡಿದೆ ಎಂದು ದೂರಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಲೂಟಿಯಾದ 187 ಕೋಟಿ ರೂ. ಹಣ ದಲಿತ ಕಾಲನಿಗೆ ರಸ್ತೆ ನಿರ್ಮಿಸಲು, ಮನೆ ನಿರ್ಮಿಸಲು ಮೀಸಲಾಗಿತ್ತು. ಜತೆಗೆ, ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಬಳಸಿದ್ದು, ಇದು ದೊಡ್ಡ ಲೂಟಿಯ ಪ್ರಯತ್ನ. ಇದರ ವಿರುದ್ಧವೂ ಹೋರಾಟ ನಡೆಸಲಾಗುವುದು ಎಂದರು.

ರಾಮನಗರ ಜಿಲ್ಲೆಗೆ ಮಹಿಮೆ ಇದೆ
ರಾಮನಗರ ಜಿಲ್ಲೆಗೆ ಸ್ಥಳ ಮಹಿಮೆ ಇದೆ. ಈ ಹೆಸರನ್ನು ಕಾಂಗ್ರೆಸ್‌ ನಾಯಕರು ಇಟ್ಟಿಲ್ಲ ಅಂದ ಮೇಲೆ ಅದನ್ನು ತೆಗೆಯಲು ಅವರಿಗೆ ಯಾವುದೇ ಹಕ್ಕು ಇಲ್ಲ. ಕರ್ನಾಟಕದಲ್ಲಿ ರಾಮ-ಕೃಷ್ಣ ಎಂದಿರುವ ಊರುಗಳ ಹೆಸರುಗಳನ್ನು ಬದಲಾಯಿಸುತ್ತಾರಾ? ಶೋಲೆ ಸಿನಿಮಾ ಚಿತ್ರೀಕರಣವಾದಾಗಲೂ ಅಲ್ಲಿ ರಾಮಗಢ ಎಂಬ ಹೆಸರನ್ನೇ ಇಟ್ಟಿದ್ದರು. ಹೆಸರು ಬದಲಾಯಿಸುವ ಬದಲು ಬೆಂಗಳೂರು ನಗರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿ. ರಾಮನ ಮೇಲೆ ದ್ವೇಷ ಇದ್ದರೆ ಬೇರೆ ದಾರಿ ನೋಡಿಕೊಳ್ಳಲಿ. ಆಯಾಯ ಜಿಲ್ಲೆಗೆ ಅದರದ್ದೇ ಆದ ಘನತೆ ಇದೆ. ಹುಚ್ಚರಂತೆ, ತುಘಲಕ್‌ರಂತೆ ಎಲ್ಲವನ್ನೂ ಬೆಂಗಳೂರಿಗೆ ಸೇರಿಸಬಾರದು ಎಂದು ಎಚ್ಚರಿಕೆ ನೀಡಿದರು.

Advertisement

ಸಮನ್ವಯ ಸಭೆ
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದೇನೆ. ಜೆಡಿಎಸ್‌-ಬಿಜೆಪಿಯಲ್ಲಿ ಸಮನ್ವಯದ ಕೊರತೆ ಇಲ್ಲ. ಆದಾಗಿಯೂ ಜೆಡಿಎಸ್‌ ನಾಯಕರ ಜತೆ ಸಭೆ ನಡೆಸಿ ಸಮನ್ವಯತೆ ಸಾಧಿಸಲಾಗುವುದು ಎಂದು ಆರ್‌. ಅಶೋಕ್‌ ಹೇಳಿದರು.

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹಿರಿಯ ಶಾಸಕರಾದ ಡಾ| ಸಿ.ಎನ್‌. ಅಶ್ವತ್ಥನಾರಾಯಣ, ವಿ. ಸುನಿಲ್‌ ಕುಮಾರ್‌, ಆರಗ ಜ್ಞಾನೇಂದ್ರ, ದೊಡ್ಡನಗೌಡ ಎಚ್‌.ಪಾಟೀಲ್‌, ಅರವಿಂದ ಬೆಲ್ಲದ್‌, ವೇದವ್ಯಾಸ ಕಾಮತ್‌, ಬೈರತಿ ಬಸವರಾಜ್‌, ವಿಧಾನ ಪರಿಷತ್‌ ಸದಸ್ಯರಾದ ಸಿ.ಟಿ. ರವಿ, ಎನ್‌. ರವಿಕುಮಾರ್‌, ಭಾರತಿ ಶೆಟ್ಟಿ, ಛಲವಾದಿ ನಾರಾಯಣಸ್ವಾಮಿ, ಡಿ.ಎಸ್‌. ಅರುಣ್‌, ಶಶಿಲ್‌ ನಮೋಶಿ, ಎಸ್‌.ವಿ. ಸಂಕನೂರು, ಕೆ.ಎಸ್‌. ನವೀನ್‌ ಭಾಗವಹಿಸಿದ್ದರು.

ಪಟ್ಟಿಯಿಂದ ಕೈ ತಪ್ಪಿದ ರವಿ, ಯತ್ನಾಳ್‌ ಹೆಸರು!
ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಹೋರಾಟ ರೂಪಿಸಲು ಬಿಜೆಪಿ ಸಿದ್ಧಪಡಿಸಿರುವ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರ ಪಟ್ಟಿಯಲ್ಲಿ ಹಿರಿಯ ಮುಖಂಡರಾದ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೆಸರು ಕೈ ಬಿಡಲಾಗಿದೆ.

ವಿಪಕ್ಷ ನಾಯಕ ಆರ್‌. ಅಶೋಕ್‌, ಬಿ.ವೈ. ವಿಜಯೇಂದ್ರ, ಹಿರಿಯ ಶಾಸಕರಾದ ಡಾ| ಸಿ.ಎನ್‌.ಅಶ್ವತ್ಥನಾರಾಯಣ, ವಿ.ಸುನೀಲ್‌ ಕುಮಾರ್‌, ಆರಗ ಜ್ಞಾನೇಂದ್ರ, ದೊಡ್ಡನಗೌಡ ಎಚ್‌.ಪಾಟೀಲ್‌, ಅರವಿಂದ ಬೆಲ್ಲದ್‌, ವೇದವ್ಯಾಸ ಕಾಮತ್‌, ಭೈರತಿ ಬಸವರಾಜ್‌, ವಿಧಾನ ಪರಿಷತ್‌ ಸದಸ್ಯರಾದ ಎನ್‌.ರವಿಕುಮಾರ್‌, ಭಾರತಿ ಶೆಟ್ಟಿ, ಚಲವಾದಿ ನಾರಾಯಣಸ್ವಾಮಿ, ಡಿ.ಎಸ್‌.ಅರುಣ್‌, ಶಶಿಲ್‌ ನಮೋಶಿ, ಎಸ್‌.ವಿ. ಸಂಕನೂರು, ಕೆ.ಎಸ್‌. ನವೀನ್‌ ಅವರನ್ನು ಒಳಗೊಂಡ ಸಮಿತಿಯನ್ನು ಬಿಜೆಪಿ ರಚಿಸಿತ್ತು. ಆದರೆ ಇದು ವಿವಾದ ಸ್ವರೂಪ ಪಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಇಬ್ಬರಿಗೂ ಕರೆ ಮಾಡಿ ಕಣ್ತಪ್ಪಿನಿಂದ ಆಗಿದೆ ಎಂದು ಬಿಜೆಪಿ ಕಾರ್ಯಾಲಯದಿಂದ ಮಾಹಿತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next