ಕಟಪಾಡಿ: ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಲ್ಲಿ ಜರ್ಮನಿಯ ಹೊಶೆಲೆ (hochschule breman) ಬ್ರೆಮನ್ ಪ್ರಾಯೋಗಿಕ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ ಗಳು, ಇಂಡೋ ಜರ್ಮನ್ ಸೆಂಟರ್ ಫಾರ್ ಅಪ್ಲೈಡ್ ರೀಸರ್ಚ್ ಆಂಡ್ ಅಕಾಡೆಮಿಕ್ ಎಕ್ಸ್‌ಚೇಂಜ್, ಮಣಿಪಾಲ ಇನ್ಸ್‌ಸ್ಟಿಟ್ಯೂಷನ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಸೆಂಟರ್ ಫಾರ್ ಇಂಟರ್ ಕಲ್ಚರ್ ಸ್ಟಡೀಸ್, ಡಯಾಲಗ್, ಡಿಪಾರ್ಟ್‌ಮೆಂಟ್ ಆಫ್ ಯೂರೋಪ್ ಅನಂತರ ಸಂಸ್ಕೃತಿ ಮತ್ತು ಭಾಷೆ ವಿಭಾಗದ ಜಂಟಿ ಆಶ್ರಯದಲ್ಲಿ ಮಟ್ಟುಗುಳ್ಳ ಕ್ಷೇತ್ರ ಭೇಟಿ ನಡೆಸಿದರು.
ಕಾರ್ಯಕ್ರಮವನ್ನು ಸ್ಮಿತಾ ನಾಯಕ್ ಸಂಯೋಜಿಸಿದ್ದರು. ಸಾಮಾನ್ಯ ರೈತರು ಸಾಮೂಹಿಕವಾಗಿ ಕೃಷಿಯನ್ನು ಕೈಗೆತ್ತಿಕೊಳ್ಳುವ ರೀತಿ, ಭಾಗವಹಿಸುವಿಕೆ, ಮತ್ತು ಸಾಧಕ ಬಾಧಕಗಳ ವಿಚಾರ ವಿನಿಮಯಕ್ಕೆ ಕಟಪಾಡಿ ಬಳಿಯ ಮಟ್ಟು ಗ್ರಾಮಕ್ಕೆ ಮಾಹೆಯ ಸೆಂಟರ್ ಆಫ್ ಸೋಶಿಯಲ್ ಎಂಟರ್‌ಪ್ರಿನ್ಯೂರ್‌ಶಿಪ್ ಕೋ ಆರ್ಡಿನೇಟರ್ ಡಾ| ಹರೀಶ್ ಜೋಶಿಯವರ ನೇತೃತ್ವದಲ್ಲಿ ತೆರಳಿ ಮಟ್ಟುಗುಳ್ಳ ಬೆಳೆಗಾರರೊಂದಿಗೆ ಮುಖಾಮುಖೀ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಮಟ್ಟುಗುಳ್ಳ ಬೆಳೆಗಾರರ ಸಂಘಕ್ಕೂ ಭೇಟಿ ನೀಡಿ ಮಟ್ಟು ಗುಳ್ಳದ ರಕ್ಷಣೆ, ಉತ್ತಮವಾಗಿ ಪ್ಯಾಕ್ ಮಾಡುವುದು ಹಾಳಾಗದಂತೆ ರಕ್ಷಿಸುವುದು ಮತ್ತು ರಫ್ತು ಮಾಡುವ ನಿಟ್ಟಿನಲ್ಲಿ, ಗುಳ್ಳದ ಜೀವಿತ ಅವಧಿ ಯನ್ನು ಹೆಚ್ಚಿಸುವ ಬಗ್ಗೆ ವಿಚಾರ ವಿನಿಮಯ ನಡೆಸಿದರು.
ಭೇಟಿ ನೀಡಿದ ವಿದ್ಯಾರ್ಥಿಗಳ ತಂಡಕ್ಕೆ ಮಟ್ಟುಗುಳ್ಳದ ಸವಿಯನ್ನು ಉಣಬಡಿಸಲಾಯಿತು. ಈ ಸಂದರ್ಭ ಮಟ್ಟುಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ದಯಾನಂದ ಬಂಗೇರ ಮಟ್ಟು, ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ್ ಮಟ್ಟು ಮೊದಲಾದವರು ಉಪಸ್ಥಿತರಿದ್ದರು.