Advertisement

ಕಣ ಚಿತ್ರಣ: ಗಿರಿ ನಗರ ಯಾದಗಿರಿಯಲ್ಲಿ ಮತ ಶಿಖಾರಿ

09:04 PM Apr 30, 2023 | Team Udayavani |

ಗಿರಿ ಜಿಲ್ಲೆ ಯಾದಗಿರಿಯಲ್ಲಿ ನಾಲ್ಕು ಕ್ಷೇತ್ರಗಳಿದ್ದು, ಗುರುಮಠಕಲ್‌ ಮತ್ತು ಶಹಾಪೂರ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದ್ದರೆ, ಯಾದಗಿರಿ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಇದೆ. ಸುರಪುರ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದ್ದರೂ ಬಂಡಾಯದ ಬವಣೆಯಲ್ಲಿ ಬಿಜೆಪಿ ಬೇಯುತ್ತಿದ್ದು, ಕಾಂಗ್ರೆಸ್‌ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದೆ.

Advertisement

ಯಾದಗಿರಿ
ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿ ಹಲವು ದಿನಗಳವರೆಗೆ ಟಿಕೆಟ್‌ಗಾಗಿ ಹಾಲಿ ಶಾಸಕರಾದಿಯಾಗಿ ಹಲವರು ಪೈಪೋಟಿ ಇರುವುದರಿಂದ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಕೊನೆಯ ಕ್ಷಣದಲ್ಲಿ ಟಿಕೆಟ್‌ ಘೋಷಣೆಯಾಗಿದ್ದರಿಂದ ಜೆಡಿಎಸ್‌ನ ಟಿಕೆಟ್‌ ಆಕಾಂಕ್ಷಿ ಹನುಮೇಗೌಡ ಬೀರನಕಲ್‌ ಪಕ್ಷೇತರರಾಗಿ ಕಣಕ್ಕಿಳಿಯುವ ವಾತಾವರಣ ನಿರ್ಮಾಣವಾಯಿತು. ಬಿಜೆಪಿಯಿಂದ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜೆಡಿಎಸ್‌ನಿಂದ ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ, ಕಾಂಗ್ರೆಸ್‌ನಿಂದ ಚೆನ್ನಾರೆಡ್ಡಿ ತುನ್ನೂರ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ನಾಯಕರ ಅದಲು ಬದಲು ಆಟದಿಂದ ರಾಜಕೀಯ ಲೆಕ್ಕಾಚಾರ ತಲೆಕೆಳಗಾಗಿದೆ. ಪಕ್ಷದ ವರ್ಚಸ್ಸಿಗಿಂತ ವ್ಯಕ್ತಿಯ ವರ್ಚಸ್ಸು ಯಾದಗಿರಿ ಮತಕ್ಷೇತ್ರದಲ್ಲಿ ಹೆಚ್ಚಾಗಿ ನಡೆಯಲಿದ್ದು, ಕೊನೆ ಕ್ಷಣದಲ್ಲಿ ವ್ಯಕ್ತಿಗತ ಮತದಾನವಾಗುವ ಸಾಧ್ಯತೆ ಇದೆ. ಲಿಂಗಾಯತ, ವಾಲ್ಮೀಕಿ ನಾಯಕ, ಕುರುಬ, ಕಬ್ಬಲಿಗ, ಮಾದಿಗ ಸಮುದಾಯದ ಮತಗಳು ನಿರ್ಣಾಯಕ.

ಸುರಪುರ
ನಾಯಕರ ಕೋಟೆ ಎಂದೇ ಬಿಂಬಿತವಾದ ಸುರಪುರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ನರಸಿಂಹನಾಯಕ (ರಾಜುಗೌಡ), ಕಾಂಗ್ರೆಸ್‌ನಿಂದ ರಾಜಾ ವೆಂಕಟಪ್ಪ ನಾಯಕ ಸ್ಪ ರ್ಧಿಸುತ್ತಿದ್ದಾರೆ. ಜೆಡಿಎಸ್‌ ಇಲ್ಲಿ ಆಟಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದರೆ ಈ ಇಬ್ಬರು ನಾಯಕರ ಮಧ್ಯೆ ನೇರ ಪೈಪೋಟಿ ಇದೆ. ಇಬ್ಬರೂ ಸ್ಪರ್ಧಿಗಳು ನಾಯಕ(ವಾಲ್ಮೀಕಿ) ಸಮುದಾಯಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ಕುರುಬ ಸಮುದಾಯ ಮತ್ತು ನಾಯಕ ಸಮುದಾಯದ ಮತಗಳು ಹೆಚ್ಚಾಗಿರುವುದರಿಂದ ಆ ಸಮುದಾಯದ ಒಲವು ಗಳಿಸಿಕೊಂಡವರು ಗೆಲ್ಲುವುದು ಸುಲಭ.

ಗುರುಮಠಕಲ್‌
ಖರ್ಗೆ ಕೋಟೆ ಎಂಬ ಖ್ಯಾತಿಗೆ ಒಳಗಾಗಿದ್ದ ಗುರುಮಠಕಲ್‌ ಈಗ ಜೆಡಿಎಸ್‌ನ ಪಾಲಾಗಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಕಬ್ಬಲಿಗ(ಗಂಗಾಮತ) ಸಮುದಾಯದ ಓಲೈಕೆ ಹೆಚ್ಚಾಗಿದೆ. ಹಾಲಿ ಶಾಸಕ ನಾಗನಗೌಡ ಕಂದಕೂರ ತಮ್ಮ ಮಗನಿಗೆ ಜೆಡಿಎಸ್‌ ಟಿಕೆಟ್‌ ಕೊಡಿಸಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಶರಣಗೌಡ ಕಂದಕೂರ ರೆಡ್ಡಿ ಸಮುದಾಯಕ್ಕೆ ಸೇರಿದ್ದರೆ, ಬಿಜೆಪಿ ಅಭ್ಯರ್ಥಿ ಲಲಿತಾ ಮೌಲಾಲಿ ಅನಪೂರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್‌ ಚಿಂಚನಸೂರ ಕೋಲಿ ಕಬ್ಬಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇಲ್ಲಿ ಕೋಲಿ ಕಬ್ಬಲಿಗ, ಬಂಜಾರ, ಮಾದಿಗ, ಈಡಿಗ ಸಮುದಾಯದ ಮತಗಳು ಹೆಚ್ಚಾಗಿದ್ದು ಈ ಸಮುದಾಯಗಳ ಬೆಂಬಲ ಅತ್ಯಗತ್ಯವಾಗಿದೆ.

ಶಹಾಪುರ
ಸಗರನಾಡು ಎಂದೇ ಖ್ಯಾತಿಯಾದ ಶಹಾಪುರದಲ್ಲಿ ಇಲ್ಲಿಯವರೆಗೆ ದರ್ಶನಾಪೂರ ಮತ್ತು ಶಿರವಾಳ ಮನೆತನಗಳ ಪ್ರಾಬಲ್ಯ ಹೆಚ್ಚಾಗಿತ್ತು. ಈ ನಡುವೆ ಅಮಿನರೆಡ್ಡಿ ಯಾಳಗಿ ಬಿಜೆಪಿಯಿಂದ ಸ್ಪರ್ಧಿಸಿದ್ದರಿಂದ ಈಗ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪೂರ ಸ್ಪರ್ಧಿಸಿದ್ದು, ಜೆಡಿಎಸ್‌ನಿಂದ ಗುರುಪಾಟೀಲ ಶಿರವಾಳ ಸ್ಪರ್ಧಿಸಿದ್ದಾರೆ. ಲಿಂಗಾಯತ, ಕುರುಬ, ಬ್ರಾಹ್ಮಣ, ಕಬ್ಬಲಿಗ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಬಿಜೆಪಿ ಮಾಜಿ ಶಾಸಕ ಗುರುಪಾಟೀಲ ಶಿರವಾಳ ಕೈಬಿಟ್ಟು ಜೆಡಿಎಸ್‌ನಿಂದ ವಲಸೆ ಬಂದ ಅಮಿನರೆಡ್ಡಿ ಯಾಳಗಿಗೆ ಟಿಕೆಟ್‌ ಕೊಟ್ಟಿದ್ದರಿಂದ ಬಂಡಾಯವೆದ್ದ ಗುರುಪಾಟೀಲ ಶಿರವಾಳ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ.

Advertisement

ಕಳೆದ ಬಾರಿ ಫಲಿತಾಂಶ
ಬಿಜೆಪಿ-2
ಕಾಂಗ್ರೆಸ್‌-1
ಜೆಡಿಎಸ್‌-1

– ಮಹೇಶ ಕಲಾಲ

Advertisement

Udayavani is now on Telegram. Click here to join our channel and stay updated with the latest news.

Next