ಹೈದರಾಬಾದ್ : ಟಾಲಿವುಡ್ ಹಾಗೂ ಬಾಲಿವುಡ್ ನಟ ಹರ್ಷವರ್ಧನ್ ರಾನೆ ಕೋವಿಡ್ ಸಂಕಷ್ಟದ ಸಮಯದಲ್ಲಿ ಪರೋಪಕಾರಿ ಕೆಲಸಕ್ಕೆ ಕೈ ಹಾಕಿದ್ದಾರೆ. ಅಗತ್ಯ ಇರುವವರಿಗೆ ಉಚಿತವಾಗಿ ಆಕ್ಸಿಜನ್ ಸಾಂಧ್ರಕಗಳನ್ನು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.
ಸೂಪರ್ ಡೂಪರ್ ತೆಲುಗು ಸಿನಿಮಾ ‘ಫಿದಾ’ದಲ್ಲಿ ನಟಿಸಿರುವ ಹರ್ಷವರ್ಧನ್, ಇದೀಗ ಕೋವಿಡ್ ರೋಗಿಗಳ ಪಾಲಿಗೆ ರಿಯಲ್ ಹೀರೋ ಆಗಿದ್ದಾರೆ. ಕೋವಿಡ್‍ನಿಂದಾಗಿ ಉಂಟಾಗಿರುವ ಆಮ್ಲಜನಕದ ಕೊರತೆ ನೀಗಿಸಲು ಮುಂದಾಗಿದ್ದಾರೆ. ಅದಕ್ಕಾಗಿ ತನ್ನ ನೆಚ್ಚಿನ ಬೈಕ್ ಮಾರಾಟ ಮಾಡಲು ಮುಂದಾಗಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರಿನಲ್ಲಿ ಬರೆದುಕೊಂಡಿರುವ ಹರ್ಷವರ್ಧನ್, ಆಕ್ಸಿಜನ್ ಖರೀದಿಗಾಗಿ ಫಂಡ್ ಕಲೆಕ್ಟ್ ಮಾಡಲಾಗುತ್ತಿದೆ. ಈ ಅಭಿಯಾನಕ್ಕಾಗಿ ನನ್ನ ಬೈಕ್ ಸೇಲ್ ಮಾಡುತ್ತಿದ್ದೆನೆ. ಇದರ ಮಾರಾಟದಿಂದ ಬರುವ ಹಣದಲ್ಲಿ ಆಕ್ಸಿಜನ್ ಸಾಂಧ್ರಕಗಳನ್ನು ಖರೀದಿಸಿ, ಅಗತ್ಯ ಇರುವವರಿಗೆ ನೀಡಲಾಗುತ್ತದೆ ಎಂದಿದ್ದಾರೆ.
ಇನ್ನು ದೇಶದಲ್ಲಿ ಪ್ರತಿ ನಿತ್ಯ 3 ಲಕ್ಷಕ್ಕೂ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳು ದಾಖಲಾಗುತ್ತಿವೆ. ತೆಲುಗು ರಾಜ್ಯಗಳಲ್ಲಿಯೂ ( ಆಂಧ್ರ-ತೆಲಂಗಾಣ) ಕೋವಿಡ್ ಸೋಂಕು ಉಲ್ಬಣಿಸುತ್ತಿದೆ. ಟಾಲಿವುಡ್ ಮೇಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಹಲವರು ತಮ್ಮ ಕೈಲಾದ ಮಟ್ಟಿಗೆ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಇದೀಗ ಅವರ ಸಾಲಿಗೆ ನಟ ಹರ್ಷವರ್ಧನ್ ಸೇರಿದ್ದಾರೆ.
ಕಳೆದ ವರ್ಷ ಕಾಣಿಸಿಕೊಂಡಿದ್ದ ಕೋವಿಡ್ ಸಮಯದಲ್ಲಿ ಚಿರಂಜೀವಿ ಅವರು ಎನ್‍ಜಿಒವೊಂದನ್ನು ಪ್ರಾರಂಭಿಸಿ, ಅದರ ಮೂಲಕ ಸಿನಿಮಾ ಕಾರ್ಮಿಕರಿಗೆ ನೆರವಿಗೆ ನಿಂತಿದ್ದರು. ಈ ಬಾರಿ ಅವರು ಚಿತ್ರರಂಗದ ಕಾರ್ಮಿಕರಿಗೆ ಉಚಿತವಾಗಿ ಕೋವಿಡ ಲಸಿಕೆ ನೀಡುವ ವ್ಯವಸ್ಥೆ ಮಾಡಿದ್ದಾರೆ.