Advertisement

ಜ್ವರ ನಿವಾರಕ ಮಹಾಲಿಂಗೇಶ್ವರ

05:02 PM Jun 24, 2017 | |

ಬೆಳ್ತಂಗಡಿಯಿಂದ ಉಡುಪಿಗೆ ಹೋಗುವ ಮಾರ್ಗದ ಏಳು ಕಿಲೋಮೀಟರ್‌ ದೂರದಲ್ಲಿ ಗುಂಡೇರಿ ನಿಲ್ದಾಣವಿದೆ. ಇಲ್ಲಿಂದ ಮೂರು ಕಿ.ಮೀ ದೂರದಲ್ಲಿ ಹಸಿರಿನ ಹಚ್ಚಡ ಹೊತ್ತ ನಿಸರ್ಗದ ರಮ್ಯ ತಾಣದಲ್ಲಿದೆ ಮಹಾಲಿಂಗೇಶ್ವರನ ದೇಗುಲ. ತಾಲೂಕಿನ ಕರಂಬಾರು ಗ್ರಾಮದ ಕೇಳ್ಕರದಲ್ಲಿರುವ ಈ ಮಹಾಲಿಂಗೇಶ್ವರ ದೇವರು ಜ್ವರ ನಿವಾರಕನೆಂಬ ಕೀರ್ತಿ ಪಡೆದಿದ್ದಾನೆ. ವೈದ್ಯರಿಗೂ ಮಣಿಯದ ಜ್ವರಗಳ ಪರಿಹಾರಕ್ಕೆ ಈ ದೇವರಿಗೆ ಹರಕೆ ಹೊತ್ತುಕೊಳ್ಳುವ ಕ್ರಮವಿದೆ. ಆಷಾಢದ ಅಮಾವಾಸ್ಯೆಯಂದು ಇಲ್ಲಿ ತೀರ್ಥ ಸ್ನಾನಕ್ಕೆ ಸಹಸ್ರಾರು ಭಕ್ತರು ಬರುತ್ತಾರೆ. ವಿವಿಧ ಜ್ವರಗಳಿಂದ ಹರಕೆ ಹೊತ್ತು ಮುಕ್ತರಾದವರು ಈ ತೀರ್ಥಸ್ನಾನ ಮಾಡಿ ಹರಕೆ ಸಲ್ಲಿಸುತ್ತಾರೆ. 

Advertisement

    ಇಲ್ಲಿರುವ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಿಲಾರೂಪಿಯಾದ ಶಂಕರನ ಶಿವಲಿಂಗವು ನಯನ ಮನೋಹರವಾಗಿ ಕಪ್ಪು ವರ್ಣದಿಂದ ಶೋಭಿಸುತ್ತಿದೆ. ಜೀರ್ಣವಾಗಿದ್ದ ಅಲ್ಲಿ ಸರಿಯಾದ ಗುಡಿ ಇಲ್ಲದಿದ್ದರೂ ಊರವರು ಶತಮಾನಗಳಿಂದ ಪೂಜೆ ನಡೆಯಲು ವ್ಯವಸ್ಥೆ ಕೈಗೊಂಡಿದ್ದರು. ಎರಡು ವರ್ಷಗಳ ಹಿಂದೆ ಅದನ್ನು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಸಲಾಗಿದೆ. ಸುಂದರವಾಗಿ ಶಿಲಾಮಯ ಮಂಟಪದ ಗರ್ಭಗೃಹ, ಸುತ್ತು ಪೌಳಿಗಳನ್ನು ಭಕ್ತರು ನಿರ್ಮಾಣ ಮಾಡಿ ಬ್ರಹ್ಮಕಲಶ ನೆರವೇರಿಸಿದರು. ನಿತ್ಯ ನೈಮಿತ್ತಿಕಗಳ ಏರ್ಪಾಟು ಮಾಡಿದರು. ಬಳಿಕ ಈ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಅಧಿಕವಾಗಿದೆ. ಇಲ್ಲಿ ಸದ್ಯಕ್ಕೆ ಬೆಳಗಿನ ವೇಳೆ ಮಾತ್ರ ಪೂಜೆ ನಡೆಯುತ್ತದೆ. ಮಹಾ ಶಿವರಾತ್ರಿಯಂದು ಅಖಂಡ ಭಜನೆ ನಡೆಯುತ್ತಿದ್ದು ಭಕ್ತರ ದೊಡ್ಡ ಸಮೂಹ ಶಿವನಾಮ ಸ್ಮರಣೆಯಲ್ಲಿ ಭಾಗವಹಿಸುತ್ತದೆ.

    ದೇವಾಲಯದ ಕೆಳಭಾಗದಲ್ಲಿ ಹರಿಯುವ ಫ‌ಲ್ಗುಣಿ ಪುಣ್ಯತೀರ್ಥವು ನದಿಯಾಗಿ ಹರಿದಿದೆ. ಈ ತೀರ್ಥದಲ್ಲಿ ದೇವಾಲಯದ ಪಕ್ಕದಲ್ಲಿ ಮಾತ್ರ ಪೆರುವೋಲ್‌ ಎಂಬ ವಿಶೇಷ ಮೀನುಗಳಿವೆ. ದೊಡ್ಡ ಗಾತ್ರದ ಈ ಮೀನುಗಳು ಕೊಕ್ಕಡದ ಶಿಶಿಲೇಶ್ವರ ದೇವಾಲಯದ ತೀರ್ಥದಲ್ಲಿ ಮಾತ್ರ ಕಂಡುಬಂದಿವೆ. ದೇವಾಲಯದ ಸನಿಹ ಹೊರತು ಬೇರೆ ಎಲ್ಲಿಯೂ ಪೆರುವೋಲ್‌ ಮೀನುಗಳಿಲ್ಲ. ಇಲ್ಲಿ ಮೀನುಗಳಿಗೆ ನೈವೇದ್ಯ ಸಮರ್ಪಿಸುವ ಹರಕೆಯಿಂದ ಚರ್ಮರೋಗಗಳು, ಕಜ್ಜಿ ಮುಂತಾದ ಸಮಸ್ಯೆಗಳು ಶಾಶ್ವತ ಶಮನವಾಗುತ್ತದೆಂಬ ನಂಬಿಕೆಯಿದೆ.

    ಕೇಳ್ಕರ ಕ್ಷೇತ್ರಕ್ಕೆ ದಕ್ಷಿಣ ಕಾಶಿಯೆಂದು ಜನ ಕರೆಯುತ್ತಾರೆ. ಶಿವನ ಸನ್ನಧಿ ಮೋಕ್ಷಪ್ರದವೆಂಬ ನಂಬಿಕೆಯ ಪ್ರತೀಕವಾಗಿ ಈ ನದಿಯಲ್ಲಿ ಅಪರ ಕರ್ಮ ಆಚರಿಸಲು ದೂರದ ಊರುಗಳಿಂದಲೂ ಜನ ಬರುತ್ತಾರೆ. ಇಲ್ಲಿ ಪುಣ್ಯ ಕರ್ಮಗಳನ್ನು ಮಾಡಿದರೆ ಮೋಕ್ಷ ಪ್ರದವೆಂದೂ ನಂಬಿಕೆ ಇದೆ. ಹಿಂದೆ ಇದು ಶಿವನು ಸ್ವರ್ಗದ ಅಪ್ಸರಾ ಸ್ತ್ರೀಯರೊಂದಿಗೆ ನೃತ್ಯವಾಡುತ್ತಿದ್ದ ಸ್ಥಳವೆಂಬ ನಂಬಿಕೆ ಇದೆ.     ದೇವಾಲಯದ ಪರಿಸರದಲ್ಲಿ ಶಿವನ ಬಂಟರಾದ ಹಲವು ದೈವಗಳಿಗೂ ಗುಡಿಗಳಿದ್ದು ಕಾಲಕಾಲಕ್ಕೆ ಅವುಗಳ ಆರಾಧನೆ ನಡೆಯುತ್ತದೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ದೇವರ ವೈಭವದ ಜಾತ್ರೆಯೂ ನೆರವೇರುತ್ತಿದೆ. ಉಡುಪಿಯಿಂದ ಧರ್ಮಸ್ಥಳಕ್ಕೆ ಬರುವ ಯಾತ್ರಿಕರಿಗೆ ಕೇಳ್ಕರದ ದೇವಾಲಯ ಸಂದರ್ಶನಕ್ಕೆ ಬರಲು ಅನುಕೂಲವಾಗಿದೆ.

ಪ. ರಾಮಕೃಷ್ಣ ಶಾಸ್ತ್ರಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next