Advertisement

ಭ್ರೂಣ ಶಾಸ್ತ್ರ –ಭ್ರೂಣ ಚಿಕಿತ್ಸೆ  

06:00 AM Jul 29, 2018 | |

ಇದು ಪ್ರಸೂತಿಶಾಸ್ತ್ರದ ಹೊಸ ಮತ್ತು ಬೆಳವಣಿಗೆ ಹಂತದಲ್ಲಿರುವ ಉಪವಿಭಾಗವಾಗಿದ್ದು ,ಇದರ ಬಗ್ಗೆ ನೀವು ತಿಳಿಯಬೇಕಾದ್ದು…

Advertisement

ತಾಯಿಯ ಒಡಲಿನಲ್ಲಿ ಬೆಳೆಯತ್ತಿರುವ ಅಜಾತ ಶಿಶುವಿಗೆ “ಭ್ರೂಣ’ ಎಂಬುದಾಗಿ ಕರೆಯುತ್ತೇವೆ. ತೀರಾ ಇತ್ತೀಚಿನ ತನಕ, ಭ್ರೂಣವು ಗರ್ಭಿಣಿ ಮಹಿಳೆಯ ಒಂದು ಅವಿಭಾಜ್ಯ ಅಂಗವಾಗಿದ್ದು, ಅದಕ್ಕೆ ಸ್ವಂತ ಅಸ್ತಿತ್ವವಿಲ್ಲ  ಎಂಬುದಾಗಿ ಪರಿಗಣಿಸಲಾಗಿತ್ತು. ತಾಯಿಯ ಯೋಗಕ್ಷೇಮವೇ ಭ್ರೂಣದ ಯೋಗಕ್ಷೇಮ ಎಂದು ತಿಳಿಯಲಾಗಿತ್ತು. ಅಂದರೆ ತಾಯಿಯ ಆರೈಕೆ ಸರಿಯಾಗಿ ಮಾಡಿದಲ್ಲಿ ಭ್ರೂಣ ಶಿಶುವೂ ಚೆನ್ನಾಗಿ ಬೆಳೆಯುತ್ತದೆ ಎಂದು ಅರ್ಥ. 

ಆದರೆ, ಕಳೆದ ಹಲವು ದಶಕಗಳಿಂದ ಪ್ರಸೂತಿ ಶಾಸ್ತ್ರದ ಈ ಉಪವಿಭಾಗದಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ. ನಮ್ಮ ದೇಶದಲ್ಲಿ ಭ್ರೂಣ ಚಿಕಿತ್ಸೆಯು ಪ್ರಸೂತಿ ಶಾಸ್ತ್ರದ ಒಂದು ಉಪವಿಭಾಗವಾಗಿದ್ದು, ಇದು ವೇಗವಾಗಿ ಮಹತ್ವ ಪಡೆಯುತ್ತಿದೆ. ಭ್ರೂಣವನ್ನು ಒಂದು ಪ್ರತ್ಯೇಕ ರೋಗಿಯಾಗಿ ಪರಿಗಣಿಸಬೇಕು ಎಂಬುದು ನಮಗೆ ಈಗ ತಿಳಿದಿದೆ. ಭ್ರೂಣ ಶಿಶುವಿನ ಕಾಯಿಲೆಯ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನಾವು ಉಪಕರಣಗಳನ್ನು/ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಾಗುತ್ತದೆ. 

ಈ ಕಾಯಿಲೆಗೆ ಕಾರಣವೇನು ಮತ್ತು ಸಮಸ್ಯೆ ಎಷ್ಟು ಗಂಭೀರವಾಗಿದೆ ಎಂಬುದನ್ನು ನಾವು ನಿರ್ಧರಿಸಬೇಕಾಗುತ್ತದೆ. ಈ ಕಾಯಿಲೆಗೆ ಕಾರಣವೇನು ಮತ್ತು ಸಮಸ್ಯೆ ಎಷ್ಟು ಗಂಭೀರವಾಗಿದೆ. ಎಂಬುದನ್ನು ನಾವು ನಿರ್ಧರಿಸಬೇಕಾಗುತ್ತದೆ. ಪರಿಸ್ಥಿತಿಯನ್ನಾಧರಿಸಿ, ನಿರೀಕ್ಷಿತ ಫ‌ಲಿತಾಂಶದ ಕುರಿತು ಹೆತ್ತವರಿಗೆ ನಾವು ಮಾಹಿತಿ ನೀಡಬೇಕಾಗುತ್ತದೆ. ಸಕಾಲದಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ನಾವು ಅವರಿಗೆ ನೆರವಾಗಬೇಕಾಗುತ್ತದೆ. ಉತ್ತಮ ಫ‌ಲಿತಾಂಶ ನೀಡುವುದಕ್ಕಾಗಿ, ಹೆರಿಗೆಯನ್ನು ಎಲ್ಲಿ ಮಾಡಿಸಬೇಕು ಎಂಬ ಬಗ್ಗೆ ಸಲಹೆ ನೀಡಬೇಕಾಗುತ್ತದೆ ಮತ್ತು ಹೆರಿಗೆಯ ಬಳಿಕ ಮಗುವಿನ ಉತ್ತಮ ನಿರ್ವಹಣೆ ಹೇಗೆ ಮಾಡುವುದೆಂದು ನಿರ್ಧರಿಸಬೇಕಾಗುತ್ತದೆ. ಈ ಎಲ್ಲಾ ಸಂಗತಿಗಳನ್ನು ಒಳಗೊಂಡಿರುವ ಅಧ್ಯಯನವನ್ನು ಭ್ರೂಣ ಶಾಸ್ತ್ರ ಎಂದು ಕರೆಯುತ್ತಾರೆ.

ಭ್ರೂಣದ ವಿಕಲತೆಗಳು ಎಷ್ಟು 
ಸಾಮಾನ್ಯ? ಗರ್ಭಧಾರಣೆಯ 
ಸಮಯದಲ್ಲಿ ಅವುಗಳನ್ನು ಎಷ್ಟರ 
ಮಟ್ಟಿಗೆ ಮತ್ತೆ ಪತ್ತೆ ಮಾಡಬಹುದು? 

ಹೆಚ್ಚಿನ ಶಿಶುಗಳು ಹುಟ್ಟುವಾಗ ಸಾಮಾನ್ಯವಾಗಿರುತ್ತವೆ ಮತ್ತು ಆರೋಗ್ಯವಾಗಿರುತ್ತವೆ. ಆದರೆ, ಸುಮಾರು 3-5% ಶಿಶುಗಳು ಜನ್ಮಜಾತ ವಿಕಲತೆಗಳನ್ನು ಹೊಂದಿರುತ್ತವೆ. ಹಾಗಾಗಿ ಗರ್ಭಾವಸ್ಥೆಯಲ್ಲೇ ಅವುಗಳ ಬಗ್ಗೆ ತಿಳಿದುಕೊಳ್ಳುವುದು ಪ್ರಯೋಜನಕಾರಿಯಾಗಬಲ್ಲದು. ಮಗು ವಿಕಲತೆಯೊಂದಿಗೆ ಹುಟ್ಟುವುದಕ್ಕೆ ಹಲವಾರು ಕಾರಣಗಳಿರಬಹುದು. ಹಲವು ಬಾರಿ ಯಾವುದೇ ಸ್ಪಷ್ಟ ಕಾರಣವಿಲ್ಲದೆ ಅಸಹಜ ಅಂಗ ಬೆಳವಣಿಗೆಯಿಂದ ಹೀಗೆ ಆಗಬಹುದು. ಯಾವುದೇ ಶಿಶುವಿನಲ್ಲಿ ಈ ರೀತಿ ಸಂಭವಿಸಬಹುದು. ಕೆಲವೊಮ್ಮೆ ಭ್ರೂಣ ಶಿಶುವಿನಲ್ಲಿನ ವಿಕಲತೆಗಳಿಗೆ ಗರ್ಭ ನಿಂತ ಆರಂಭದ ತಿಂಗಳುಗಳಲ್ಲಿ ತೆಗೆದುಕೊಂಡ ಟೆರಟೋಜೆನಿಕ್‌ (ಭ್ರೂಣದ ಬೆಳವಣಿಗೆಗೆ ಮಾರಕವಾಗುವ) ಔಷಧಗಳು, ತಾಯಿಯ ಸೋಂಕು ಕರುಳುಬಳ್ಳಿಯ (ಪ್ಲಾಸೆಂಟಾ) ಮೂಲಕ ಹೌದು ಮಗುವಿಗೆ ತಗಲುವುದು, ಆನುವಂಶೀಯ ಅಸಹಜತೆಯಿಂದಾಗಿ ಉಂಟಾಗುವ ಅನೇಕ ವೈಕಲ್ಯಗಳು ಅಥವಾ ಅನೇಕ ವಿವಿಧ ಅಂಶಗಳು ಸೇರಿ ಭ್ರೂಣದ ವಿಕಲತೆಗೆ ಕಾರಣವಾಗಬಹುದು.ಜನ್ಮಜಾತ ವಿಕಲತೆಗಳ ಬಗ್ಗೆ ನಾವು ಮಾತನಾಡುವಾಗ, ಅಜಾತ ಮಗುವಿನಲ್ಲಿನ 2 ಬಗೆಯ ವಿಕಲತೆಗಳನ್ನು ನಾವು ಸೇರಿಸಿಕೊಳ್ಳುತ್ತೇವೆ. ಮೊದಲಿನದು ದೇಹರಚನೆಯದು ಮತ್ತು ಎರಡನೆಯದು ಆನುವಂಶೀಯ ವಿಕಲತೆ. 

Advertisement

ದೇಹರಚನೆಯ ವಿಕಲತೆಯು ಬೆಳೆಯುತ್ತಿರುವ ಭ್ರೂಣದ ಯಾವುದೇ ಅಂಗದ ಮೇಲೆ ಪರಿಣಾಮ ಬೀರಬಹುದು. ಇದರಲ್ಲಿ ಮೆದುಳು, ಹೃದಯದಂಥ ಪ್ರಮುಖ ಅಂಗಗಳಿಂದ ಆರಂಭಿಸಿ ಮಗುವಿನ ಚಿಕ್ಕ ಬೆರಳೂ ಒಳಗೊಂಡಿರಬಹುದು. ಆನುವಂಶೀಯ ವಿಕಲತೆಗಳು ಭ್ರೂಣದಲ್ಲಿನ ಅಸಹಜ ಆನುವಂಶೀಯ ಅಂಶಗಳಿಂದಾಗಿರಬಹುದು, ಅಂದರೆ ಕ್ರೋಮೋಸೋಮುಗಳಲ್ಲಿನ ಅಸಹಜತೆ, ಅಥವಾ ಕ್ರೋಮೋಸೋಮ್‌ನೊಳಗಿನ ಜೀನ್‌ ಕೋಡಿಂಗ್‌ನಲ್ಲಿ ಸಣ್ಣ ವ್ಯತ್ಯಯ ಇರಬಹುದು.

ದೇಹರಚನೆಯ ವಿಕಲತೆಗಳ ಬಗ್ಗೆ ಹೇಳುವುದಾದಲ್ಲಿ, ಇವುಗಳಲ್ಲಿ ಹೆಚ್ಚಿನವುಗಳನ್ನು ಅಂದರೆ 80-90%ದಷ್ಟನ್ನು ಗರ್ಭಧಾರಣೆಯ ವಿವಿಧ ಹಂತಗಳಲ್ಲಿ ಮಾಡುವ ಅಲ್ಟ್ರಾಸೌಂಡ್‌ ಪರೀಕ್ಷೆಗಳ ಮೂಲಕ ಪತ್ತೆ ಮಾಡಬಹುದು. ಹೆಚ್ಚಿನ ಮಾರಕ ವಿಕಲತೆಗಳನ್ನು ಗರ್ಭ ಧರಿಸಿದ ನಾಲ್ಕೂವರೆ ತಿಂಗಳಲೊಳಗೆ ಪತ್ತೆ ಹಚ್ಚಬಹುದು. ಆದರೆ, ಕೆಲವೊಂದು ಪ್ರಮುಖ ಮತ್ತು ಅಷ್ಟೊಂದು ಪ್ರಮುಖವಲ್ಲದ ಸಣ್ಣ ಸಂಖ್ಯೆಯ ವೈಕಲ್ಯಗಳನ್ನು ಗರ್ಭಧಾರಣೆಯ 7-8ನೇ ತಿಂಗಳಲ್ಲಿ ಮಾತ್ರ ಪತ್ತೆ ಹಚ್ಚಬಹುದು. ದುರದೃಷ್ಟವಶಾತ್‌, ಇನ್ನೂ ಕೆಲವು ದೇಹರಚನೆ ಸಂಬಂಧಿ ವೈಕಲ್ಯಗಳನ್ನು ಗರ್ಭಧಾರಣೆಯ ಸಂದರ್ಭದಲ್ಲಿ ಪತ್ತೆ ಹಚ್ಚಲು ಸಾಧ್ಯವೇ ಆಗುವುದಿಲ್ಲ. ಅವು ಮಗು ಹುಟ್ಟಿದ ತಕ್ಷಣ ಅಥವಾ ಹುಟ್ಟಿದ ಕೆಲವು ವಾರಗಳಲ್ಲಿ ಬೆಳಕಿಗೆ ಬರುತ್ತವೆ. 

ಆನುವಂಶೀಯ ವೈಕಲ್ಯಗಳು ಅಥವಾ ವರ್ಣತಂತು ದೋಷದ ವೈಕಲ್ಯತೆ ಬಹಳ ಕುಖ್ಯಾತವಾಗಿದ್ದು, ಅವುಗಳಲ್ಲಿ ಕೆಲವು ದೊಡ್ಡ ಪ್ರಮಾಣದ ದೈಹಿಕ/ಮಾನಸಿಕ ವಿಕಲತೆಯನ್ನುಂಟು ಮಾಡುತ್ತವೆ ಮತ್ತು ಅವುಗಳಲ್ಲಿ ಕೆಲವೇ ಕೆಲವನ್ನು ಗರ್ಭದ ಸ್ಕ್ಯಾನಿಂಗ್‌ ಸಮಯಗಳಲ್ಲಿ ಪತ್ತೆ ಹಚ್ಚಬಹುದು. ಇನ್ನುಳಿದವು ಸ್ಕ್ಯಾನಿಂಗ್‌ ಸಮಯದಲ್ಲಿ ಯಾವುದೇ ಕುರುಹು ನೀಡುವುದಿಲ್ಲ. ಮಗು ಹುಟ್ಟಿದ ಬಳಿಕ ಅಥವಾ ಮಗು ಬೆಳೆಯುತ್ತಿರುವಾಗ ಸಮಸ್ಯೆ ಗೋಚರಿಸುತ್ತದೆ. ಹಾಗಾಗಿ ಗರ್ಭದ ಸ್ಕ್ಯಾನಿಂಗ್‌ಗಳ ಒಂದು ಪ್ರಮುಖ ಮಿತಿ ಎಂದರೆ ಆನುವಂಶೀಯ ಅಥವಾ ಜೆನೆಟಿಕ್‌ ದೋಷಗಳ ವಿಕಲತೆಗಳಿಗೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳನ್ನು ಪತ್ತೆಹಚ್ಚಲು ಅವುಗಳಿಗೆ ಸಾಧ್ಯವಾಗುವುದಿಲ್ಲ.

ಭ್ರೂಣ ಶಿಶುವಿನಲ್ಲಿನ ಸಮಸ್ಯೆಗಳನ್ನು 
ಪತ್ತೆ ಹಚ್ಚಲು ಗರ್ಭಾವಸ್ಥೆಯಲ್ಲಿ 
ಸಾಮಾನ್ಯವಾಗಿ ಯಾವ 
ತಪಾಸಣೆಗಳನ್ನು ಮಾಡುತ್ತಾರೆ?

ಅಜಾತ ಶಿಶುವಿನಲ್ಲಿನ ಸಮಸ್ಯೆಗಳನ್ನು ಪತ್ತೆ ಹಚ್ಚಲು ಎಲ್ಲಾ ಗರ್ಭಿಣಿಯರು ನಿರ್ಧರಿತವಾದ ತಪಾಸಣೆಗಳಿಗೆ ಒಳಗಾಗುತ್ತಾರೆ.
ಮೊದಲನೆಯದು ಗರ್ಭಾವಸ್ಥೆಯ 11-14 ವಾರಗಳಲ್ಲಿ ಅಂದರೆ ಗರ್ಭ ಧರಿಸಿದ ಸುಮಾರು 3 ತಿಂಗಳಲ್ಲಿ ಒಂದು ವಿವರವಾದ ಅಲ್ಟ್ರಾಸೌಂಡ್‌. ಈ ಅಲ್ಟ್ರಾಸೌಂಡ್‌ನಿಂದ ಸುಮಾರು 50-60%ರಷ್ಟು ಪ್ರಮುಖ ವಿಕಲತೆಗಳನ್ನು ಪತ್ತೆ ಹಚ್ಚಬಹುದು ಹಾಗೂ ಮುಂದೆ ಕಾಣಿಸಿಕೊಳ್ಳಬಹುದಾದ ಸಮಸ್ಯೆಗಳ ಬಗ್ಗೆ ಸುಳಿವು ಸಿಗಬಹುದು. ಇತ್ತೀಚಿನ ದಿನಗಳಲ್ಲಿ ಕ್ರೊಮೋಸೋಮ್‌/ಆನುವಂಶೀಯ ವಿಕಲತೆಗಳನ್ನು ಪತ್ತೆ ಹಚ್ಚಲು ಸಹ ಈ ಅಲ್ಟ್ರಾ ಸೌಂಡನ್ನು ಸ್ಕ್ರೀನಿಂಗ್‌ ಉಪಕರಣವಾಗಿ ಅಭಿವೃದ್ಧಿಗೊಳಿಸಲಾಗಿದೆ. 

ಅಲ್ಟ್ರಾಸೌಂಡ್‌ನಿಂದ ದೊರೆತ ಕೆಲವು ಸುಳಿವುಗಳನ್ನು ರಕ್ತ ಪರೀಕ್ಷೆಯೊಂದಿಗೆ ಸಮೀಕರಿಸಿದಾಗ ಭ್ರೂಣದ ಡೌನ್‌ಸಿಂಡ್ರೋಮ್‌ನಂಥ ಸಾಮಾನ್ಯ ಕ್ರೋಮೋಸೋಮ್‌ ಸಂಬಂಧಿತ ಅಪಾಯಗಳನ್ನು ನಿರ್ಧಾರಣೆ ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಇದನ್ನು ಅನೇಕ ಪ್ರಕರಣಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಈ ತಪಾಸಣೆಯಿಂದ 80-90% ಡೌನ್‌ ಸಿಂಡ್ರೋಮ್‌ ಹಾಗೂ ಅದಕ್ಕೆ ಸಂಬಂಧಿತ ಆನುವಂಶೀಯ ಸಮಸ್ಯೆಗಳನ್ನು ಪತ್ತೆ ಹಚ್ಚಬಹುದು. 

ಇದರೊಂದಿಗೆ, ಈ ಸಂಯೋಜಿತ ವಿಧಾನದಿಂದ ಗರ್ಭಧಾರಣೆಯ ಸಂದರ್ಭದಲ್ಲಿ ತಲೆದೋರುವ ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡ/ಮಗು ಬೆಳವಣಿಗೆಯ ತೊಂದರೆ, ಇಂಥ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯವನ್ನು ಸಹ ವಿಶ್ಲೇಷಿಸಲು ಸಾಧ್ಯ. ಇಂತಹ ಅಪಾಯಗಳು ಜಾಸ್ತಿ ಇದೆ ಎಂದಾದಲ್ಲಿ , ಸಕಾಲದಲ್ಲಿ ಹೆಚ್ಚುವರಿ ತಪಾಸಣೆಗಳು ಮತ್ತು ಚಿಕಿತ್ಸಾ, ವಿಧಾನಗಳನ್ನು ಕೈಗೊಳ್ಳಲಾಗುತ್ತದೆ, ಮತ್ತು ಆ ಮೂಲಕ ಗರ್ಭಧಾರಣೆಯ ಫ‌ಲಿತಾಂಶದಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗುತ್ತದೆ. ಆದರೂ , ಯಾವುದೇ ಪರೀಕ್ಷೆಯಿಂದ ಭ್ರೂಣಶಿಶುವಿನ ಎಲ್ಲಾ ತೊಂದರೆಗಳನ್ನು ಗುರುತಿಸಲು ಅಸಾಧ್ಯ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು.

– ಮುಂದಿನ ವಾರಕ್ಕೆ  

– ಡಾ| ಅಖೀಲಾ ವಾಸುದೇವ, 
ಪ್ರೊಫೆಸರ್‌ ಮತ್ತು ಯೂನಿಟ್‌ ಚೀಫ್
ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ
ಕೆಎಂಸಿ ಆಸ್ಪತ್ರೆ, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next