Advertisement

ಮಳೆ ಅಬ್ಬರದ ನಡುವೆ ಹಬ್ಬದ ಸಂಭ್ರಮ

10:40 PM Oct 26, 2019 | mahesh |

ಪುತ್ತೂರು: ಬೆಳಕಿನ ಹಬ್ಬ ದೀಪಾವಳಿಗೆ ಜನಮಾನಸದಲ್ಲಿ ಸಂಭ್ರಮ ಕಳೆಗಟ್ಟುತ್ತಿದೆ. ಆದರೆ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಎಲ್ಲಿ ಹಬ್ಬದ ಸಂಭ್ರಮವನ್ನು ಕಳೆ ಗುಂದಿ ಸುವುದೋ ಎನ್ನುವ ಆತಂಕವೂ ಇದೆ.

Advertisement

ಅ. 26ರಿಂದ ಆರಂಭಗೊಳ್ಳುವ ದೀಪಾವಳಿಯ ಹಬ್ಬದಲ್ಲಿ ನರಕ ಚತುರ್ದಶಿ, ಲಕ್ಷ್ಮೀಪೂಜೆ, ಬಲೀಂದ್ರ ಪೂಜೆ, ಗೋಪೂಜೆ, ಅಂಗಡಿ ಪೂಜೆ ಸಹಿತ ಹಲವು ಶುಭ ಕಾರ್ಯಕ್ರಮಗಳು ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಪೂಜೆ, ವ್ರತಾಚರಣೆಗಳೊಂದಿಗೆ ಬೆಳಕಿನ ಸೌಂದರ್ಯವನ್ನು ಒಟ್ಟುಗೂಡಿಸುವ ಚಿಂತನೆಯಲ್ಲಿ ಹಿಂದೂ ಬಾಂಧವರು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ನಗರದ ಅಂಗಡಿ ಮುಂಗಟ್ಟುಗಳಲ್ಲಿ ಶನಿವಾರದಿಂದಲೇ ವ್ಯಾಪಾರ, ಖರೀದಿ ಭರಾಟೆ ಜೋರಾಗಿದೆ. ಹೂವಿನ ವ್ಯಾಪಾರದ ತಾತ್ಕಾಲಿಕ ಮಾರುಕಟ್ಟೆಗಳು, ಪಟಾಕಿ, ಹಣತೆ, ಗೂಡುದೀಪಗಳ ಅಂಗಡಿ ತೆರೆದುಕೊಂಡಿವೆ. ಸ್ವರ್ಣ ಮಳಿಗೆಗಳು, ಎಲೆಕ್ಟ್ರಾನಿಕ್‌, ಮೊಬೈಲ್‌ ಶಾಪ್‌, ವಸ್ತ್ರ ಮಳಿಗೆಗಳಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜನರನ್ನು ಆಕರ್ಷಿಸಲು ಆಫರ್‌ ಘೋಷಿಸ ಲಾಗಿದ್ದು, ಗ್ರಾಹಕ ಸಂದಣಿ ಕಾಣಿಸಿಕೊಂಡಿದೆ.

ಮನೆ ಸೇರುವ ತವಕ
ಶಾಲಾ ಕಾಲೇಜು ಮಕ್ಕಳಿಗೆ ಮಳೆಯ ಅನಿರೀಕ್ಷಿತ ರಜೆಯ ಜತೆಗೆ ದೀಪಾವಳಿ ಹಬ್ಬದ ರಜೆ ಖುಷಿ ಕೊಟ್ಟಿದೆ. ವಿವಿಧ ರೀತಿಯ ಉದ್ಯೋಗಿಗಳಿಗೂ ಮಂಗಳವಾರ ತನಕ ರಜೆ ಇರುವುದರಿಂದ ಬೇರೆ ಊರುಗಳಲ್ಲಿ ಇರುವವರು ಮನೆ ಸೇರಿಕೊಳ್ಳುವ ಕಡೆಗೆ ಗಮನಹರಿಸಿದ್ದಾರೆ. ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಾರಿಗೆ ಇಲಾಖೆ, ರೈಲ್ವೇ ಇಲಾಖೆಯೂ ಹೆಚ್ಚುವರಿ ವ್ಯವಸ್ಥೆಗಳನ್ನು ಮಾಡಿಕೊಂಡಿದೆ.

ಶುಭಾರಂಭ
ನವರಾತ್ರಿಯಂತೆ ದೀಪಾ ವಳಿಯೂ ಶುಭಾರಂಭಗಳು, ಆರಾಧನೆಗಳಿಗೆ ವಿಶೇಷ ದಿನಗಳಾಗಿ ಗುರುತಿಸಿಕೊಂಡಿವೆ. ಹಲವು ಕಡೆಗಳಲ್ಲಿ ಹೊಸ ವ್ಯವಹಾರ ಮಳಿಗೆಗಳು ಪೂಜೆ ಪುನಸ್ಕಾರಗಳೊಂದಿಗೆ ದೀಪಾವಳಿ ಸಂದರ್ಭ ಶುಭಾರಂಭಗೊಳ್ಳುತ್ತವೆ. ಅಂಗಡಿಗಳಲ್ಲಿ ವ್ಯವಹಾರ ವೃದ್ಧಿಗಾಗಿ ಅಂಗಡಿ ಪೂಜೆಗಳು, ಲಕ್ಷ್ಮೀಪೂಜೆಗಳನ್ನು ನಡೆಸಲು ಸಿದ್ಧಗೊಳ್ಳುತ್ತಿವೆ.

Advertisement

ಪಟಾಕಿ ಕಷ್ಟ, ದೀಪ ಇಷ್ಟ
ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಮಳೆ ಮುಂದುವರೆದರೆ ಪಟಾಕಿ ಸಹಿತ ಸಿಡಿಮದ್ದಿನ ಆಕರ್ಷಣೆ ಕಡಿಮೆಯಾಗಬಹುದು. ಆದರೆ ಮನೆಯಲ್ಲಿ ಬೆಳಕಿನ ಸಂಭ್ರಮ ಹೆಚ್ಚಾಗಬಹುದು. ಮಳೆಯೊಳಗೆ ಗೂಡುದೀಪ, ಹಣತೆ ಬೆಳಗಲು ಆದ್ಯತೆ ಸಿಗಬಹುದು ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.

ಸೀಮೆಯ ದೇವಾಲಯದಲ್ಲಿ
ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ದೇವರ ಬಲಿ ಉತ್ಸವ, ಬಲಿಯೇಂದ್ರ ಪೂಜೆಯ ಮೂಲಕ ಸಾಂಪ್ರದಾಯಿಕ ಆಚರಣೆ ನಡೆಯುತ್ತದೆ. ದೇವಸ್ಥಾನದಲ್ಲಿ ಪ್ರಾರ್ಥನೆಯ ಬಳಿಕ ಗರ್ಭಗುಡಿ, ಗೋಪುರ, ಗುಡಿಗಳ ಸುತ್ತಲೂ ಹಣತೆಯನ್ನು ಉರಿಸಲಾಗುತ್ತದೆ. ಪೂಜೆಯ ಅನಂತರ ಶ್ರೀ ದೇವರ ಬಲಿ ಹೊರಟು ಉತ್ಸವ, ಧ್ವಜಸ್ತಂಭದ ಬಳಿ ಬಲಿಯೇಂದ್ರ ಪೂಜೆ, ವಸಂತಕಟ್ಟೆಯಲ್ಲಿ ಭಕ್ತರಿಗೆ ದೀಪಾವಳಿ ಪ್ರಸಾದವಾಗಿ ಅವಲಕ್ಕಿ, ತೆಂಗಿನಕಾಯಿ ಪ್ರಸಾದ ವಿತರಣೆ ನಡೆಯುತ್ತದೆ.

ಮಹಾಲಿಂಗೇಶ್ವರ ದೇಗುಲದಲ್ಲಿ ಉತ್ಸವಗಳಿಗೆ ಚಾಲನೆ
ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಉತ್ಸವ ಬಲಿ ಹೊರಡುವುದರೊಂದಿಗೆ ಸೀಮೆಯ ಎಲ್ಲ ಉತ್ಸವಗಳಿಗೆ ಚಾಲನೆ ದೊರೆಯುತ್ತದೆ. ಸೀಮೆಯ ದೇವಾಲಯ ದಲ್ಲಿ ಉತ್ಸವ ಆರಂಭವಾದ ಬಳಿಕ ಕಾಲಾವಧಿ, ವರ್ಷಾವಧಿ, ಹರಕೆಯ, ನೇಮ, ಆಯನ, ಕೋಲ, ತಂಬಿಲಗಳು ನಡೆಯುತ್ತವೆ. ಶ್ರೀ ಮಹಾಲಿಂಗೇಶ್ವರ ದೇವರು ಉತ್ಸವ ಹೊರಡದೆ ಯಾವುದೇ ಕಾರಣಕ್ಕೂ ಸೀಮೆಯ ದೇವ ಮತ್ತು ದೈವಸ್ಥಾನಗಳಲ್ಲಿ ಜಾತ್ರೆ, ಉತ್ಸವ ನಡೆಯುವುದಿಲ್ಲ ಎಂಬುದು ಸಂಪ್ರದಾಯ.

Advertisement

Udayavani is now on Telegram. Click here to join our channel and stay updated with the latest news.

Next