Advertisement
ಪ್ರವಾಸೋದ್ಯಮ ಇಲಾಖೆಯ ಎರಡನೇ ಆವೃತ್ತಿಯ “ನಮ್ಮ ಬೆಂಗಳೂರು ಹಬ್ಬ’ ಈ ಬಾರಿ ಹಲವು ವಿಶೇಷತೆಗಳಿಗೆ ಕಾರಣವಾಗಿತ್ತು. ಸಾಮಾನ್ಯವಾಗಿ ವೀಕೆಂಡ್ ಬಂದರೆ ಉದ್ಯಾನವನಗಳು, ರೆಸ್ಟೋರೆಂಟ್, ದೂರದ ಸ್ಥಳಗಳಿಗೆ ತೆರಳುತ್ತಿದ್ದ ಸಿಲಿಕಾನ್ ಸಿಟಿ ಮಂದಿ, ಭಾನುವಾರ ಬೆಂಗಳೂರು ಹಬ್ಬದ ಕಡೆ ಹೆಜ್ಜೆ ಹಾಕಿದರು. ಪರಿಣಾಮ ಅಂಬೇಡ್ಕರ್ ರಸ್ತೆ ಹಾಗೂ ವಿಧಾನಸೌಧದ ಆವರಣ ಜನರಿಂದ ತುಂಬಿ ತುಳುಕುತಿತ್ತು. ವಿದೇಶಿಗರು ವಿಸ್ಮಯದಿಂದ ಶಕ್ತಿಸೌಧ ಕಣ್ತುಂಬಿಕೊಂಡ ದೃಶ್ಯಗಳು ಸಾಮಾನ್ಯವಾಗಿದ್ದವು.
Related Articles
Advertisement
ಇನ್ನು ಅಂಬೇಡ್ಕರ್ ವೀದಿಯ ಎಡ ಭಾಗದಲ್ಲಿ ವಿವಿಧ ರೀತಿಯ ಅಂಗಡಿಗಳ ಸಾಲುಗಳಿಂದ ಕೂಡಿತ್ತು. ಸಾವಯವ ಧಾನ್ಯಗಳು, ಬಟ್ಟೆ, ಮಹಿಳೆಯರ ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿತ್ತು. ಫಾಸ್ಟ್ ಫುಡ್ ಮಳಿಗೆಗಳಲ್ಲಿ ಬಾಯಲ್ಲಿ ನೀರೂರಿಸುವ ಖಾದ್ಯಗಳು ಆಹಾರ ಪ್ರಿಯರನ್ನು ಆಕರ್ಷಿಸಿದವು. ಈ ನಡುವೆ ವಿಧಾನಸೌಧ ಸೇರಿ ಹಬ್ಬದಲ್ಲಿದ್ದ ವಿಶೇಷ ಆಕೃತಿ, ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ.
ಫ್ರೀ ಸೈಕಲ್ ರೈಡ್!: ಬೆಂಗಳೂರು ಹಬ್ಬದಲ್ಲಿ “ನಮ್ಮ ನಿಮ್ಮ ಫೌಂಡೇಶನ್’ ಪರಿಸರ ಸ್ನೇಹಿ ಸೈಕಲ್ ರೈಡ್‌ಗೆ ಅವಕಾಶ ಮಾಡಿಕೊಡಲು ಸ್ಟಾಲ್ ಹಾಕಿಕೊಂಡಿತ್ತು. ಸೈಕಲ್ ರೈಡ್ ಬಯಸುವವರು ಆಧಾರ್ ಕಾರ್ಡ್ ಅಥವಾ ಅಧಿಕೃತ ಗುರುತಿನ ಚೀಟಿ ನೀಡಿದರೆ 15 ನಿಮಿಷ ಸುತ್ತಾಡಲು ಸೈಕಲ್ ಸಿಗುತ್ತಿತ್ತು. ಮಕ್ಕಳೂ ಸೇರಿ ನೂರಾರು ಮಂದಿ ಉಚಿತ ಸೈಕಲ್ ರೈಢ್‌ನ ಮೋಜನುಭವಿಸಿದರು. ಹಾಗೇ ಆಸಕ್ತರಿಗೆ ಸ್ಕೇಟಿಂಗ್ ಮಾಡಲು ಅವಕಾಶವಿತ್ತು. ನಡು ರಸ್ತೆಯಲ್ಲಿ ಕೆಲವರು ಸ್ಕೇಟಿಂಗ್ ಮಾಡುತ್ತಾ ಸಂಭ್ರಮಿಸಿದರೆ, ಜನ ಚಪ್ಪಾಳೆ ಮೂಲಕ ಹುರಿದುಂಬಿಸುತ್ತಿದ್ದರು.
ಸಂಜೆಗೆಂಪಿಗೆ ರಂಗೆರೆದ ಲೇಸರ್ ಬೆಳಕು: ಮತ್ತೂಂದೆಡೆ ಸಂಜೆಯಾಗುತ್ತಿದ್ದಂತೆ ಬೆಂಗಳೂರು ಹಬ್ಬ ರಂಗೇರತೊಡಗಿತು. ವಿಧಾನಸೌಧದ ಎದುರಿನ ವೇದಿಕೆಯ ಪರದೆಯಲ್ಲಿ ಲೇಸರ್ ಮೂಲಕ ಇಡೀ ಬೆಂಗಳೂರಿನ ಚಿತ್ರಣ ಮೂಡಿಬಂತು. ಸಿಲಿಕಾನ್ ಸಿಟಿ ಎಂದಾಕ್ಷಣ ಕಣ್ಮುಂದೆ ಬರುವ ಬೆಂಗಳೂರು ಅರಮನೆ, ವಿಧಾನಸೌಧ, ಗಗನಚುಂಬಿ ಕಟ್ಟಡಗಳು, ನಮ್ಮ ಮೆಟ್ರೋ ಸೇರಿದಂತೆ ನಗರವನ್ನು ಪ್ರತಿಬಿಂಬಿಸುವ ಹೆಗ್ಗುರುತುಗಳನ್ನು ಲೇಸರ್‌ನಲ್ಲಿ ಕಟ್ಟಿಕೊಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬೆಂಗಳೂರಿನ ಐತಿಹಾಸಿಕ ಪ್ರತಿರೂಪವಾಗಿರುವ ಬೆಂಗಳೂರಿನ ಕರಗದ ಪ್ರತಿಬಿಂಬವೂ ಕಂಡುಬಂತು.
ಪ್ರತಿ ಮೂರು ತಿಂಗಳಿಗೊಮ್ಮೆ ಬೆಂಗಳೂರು ಹಬ್ಬ ನಡೆಸುವ ಆಲೋಚನೆಯಿದೆ. ಇದಕ್ಕೆ ನಗರದ ಜನರ ಸಹಕಾರವೂ ಮುಖ್ಯ. ಯಾವ್ಯಾವ ಭಾಗದಲ್ಲಿ ಜನರ ಸಹಕಾರ ಸಿಗಲಿದೆಯೋ ಅಲ್ಲಿ ಹಬ್ಬ ಆಯೋಜಿಸಲಾಗುತ್ತದೆ. ಮುಂದಿನ ಬಾರಿ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸುವ ಚಿಂತನೆಯಿದೆ. -ಪ್ರಿಯಾಂಕ್ ಖರ್ಗೆ, ಪ್ರವಾಸೋಧ್ಯಮ ಸಚಿವ ಕಬ್ಬನ್ ಪಾರ್ಕ್ ಹಾಗೂ ಲಾಲ್‌ಬಾಗ್ ತೋರಿಸುವ ಸಲುವಾಗಿ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದೆವು. ಆದರೆ, ಬೆಂಗಳೂರು ಹಬ್ಬ ನೋಡುವ ಅದೃಷ್ಟ ನಮ್ಮದಾಯಿತು. ಮುಖ್ಯವಾಗಿ ವಿಧಾನಸೌಧವನ್ನು ಹತ್ತಿರದಿಂದ ನೋಡಲು ಅವಕಾಶ ಸಿಕ್ಕಿದ್ದರಿಂದ ಮಕ್ಕಳು ಸಂತೋಷಪಟ್ಟರು.
-ಬಸವರಾಜು, ಸರ್ಕಾರಿ ಶಿಕ್ಷಕ, ಲಕ್ಷ್ಮೇಶ್ವರ, ಗದಗ ಜಿಲ್ಲೆ ಬ್ರ್ಯಾಂಡ್ ಬೆಂಗಳೂರು ಲೋಗೋ ಒಳ್ಳೆಯ ಯೋಜನೆ. ಲೋಗೋ ವಿನ್ಯಾಸ ಚೆನ್ನಾಗಿದ್ದು, ಜನರನ್ನು ಹೆಚ್ಚು ಆಕರ್ಷಿಸಲಿದೆ. ವೀಕೆಂಡ್ ಕಳೆಯಲು ಬೆಂಗಳೂರು ಹಬ್ಬ ತುಂಬಾ ಸಹಕಾರಿಯಾಯ್ತು. ವಾರವಿಡೀ ಕೆಲಸದಲ್ಲಿಯೇ ಮಗ್ನರಾಗಿರುವ ನಮಗೆ ಇಂತಹ ಕಾರ್ಯಕ್ರಮಗಳು ಹೆಚ್ಚು ಖುಶಿ ನೀಡಬಲ್ಲವು.
-ಹರ್ಬೀತ್, ಜೆ.ಪಿ.ನಗರ ನಿವಾಸಿ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಹೆಮ್ಮೆಯ ಪ್ರತೀಕ. ಜರ್ಮನಿಯಲ್ಲೂ ಈ ರೀತಿಯ ಹಬ್ಬಗಳು ನಡೆಯುತ್ತವೆ. ಆದರೆ, ನಮ್ಮೂರ ಹಬ್ಬವೇ ನಮಗೆ ಹೆಚ್ಚು ಆಪ್ತ. ಬೆಂಗಳೂರು ನೋಡಲು ಬಂದಿದ್ದ ನನ್ನ ಸ್ನೇಹಿತರು, ವಿಧಾನಸೌಧದ ವಿನ್ಯಾಸ ಹಾಗೂ ದೇಸಿ ಸೊಗಡನ್ನು ಹೆಚ್ಚು ಇಷ್ಟಪಟ್ಟರು.
-ಮೋಹನ, ಇಂದಿರಾನಗರ ನಿವಾಸಿ