Advertisement
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಸೋಮವಾರ ನಡೆದ ಶಾಂತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜೀವ ಇದ್ದರೆ ಜೀವನ. ಆರೋಗ್ಯ ಚೆನ್ನಾಗಿದ್ದರೆ ಮುಂದೆ ಎಲ್ಲ ಹಬ್ಬ, ಉತ್ಸವಗಳನ್ನು ಅದ್ಧೂರಿಯಾಗಿಯೇ ಆಚರಿಸಬಹುದು. ಹೀಗಾಗಿ ಇಂದಿನ ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲರೂ ಮನೆಯಲ್ಲಿಯೇ ಹಬ್ಬಗಳನ್ನು ಆಚರಿಸಬೇಕು ಎಂದು ಸಭೆಯಲ್ಲಿದ್ದ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
Related Articles
Advertisement
ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ ಮಾತನಾಡಿ, ಪರಿಷತ್ ಚುನಾವಣಾ ನೀತಿಸಂಹಿತೆಜಾರಿಯಲ್ಲಿರುವುದರಿಂದ ಬಂಟಿಂಗ್ಸ್, ಫ್ಲೆಕ್ಸ್, ಬ್ಯಾನರ್‌ಕಟ್ಟಲು ನಿರ್ಬಂಧವಿದೆ. ಹಬ್ಬದ ದಿನಗಳಲ್ಲಿ ನೀರು ಹೆಚ್ಚು ಬೇಕಾಗುತ್ತದೆ. ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆಮಾಡಲಾಗುವುದು. ಯಾವುದಾದರೂ ಪ್ರದೇಶದಲ್ಲಿ ನೀರಿನ ತೊಂದರೆಯಾದರೆ ಕೂಡಲೇ ಪಾಲಿಕೆ ಗಮನಕ್ಕೆ ತರಬೇಕು. ಟ್ಯಾಂಕರ್ ಮೂಲಕವೂ ನೀರಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಹಬ್ಬದಾಚರಣೆ, ಧರ್ಮ ಎಂಬುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ಇದನ್ನು ನಮ್ಮ ಮನೆಯಲ್ಲಿಯೇ ಆಚರಿಸಿಕೊಳ್ಳಬೇಕು. ಹಬ್ಬಗಳಿಗಾಗಿ ಕೇಂದ್ರ, ರಾಜ್ಯ ಸರಕಾರದ ಜತೆಗೆ ಸ್ಥಳೀಯ ಜಿಲ್ಲಾಡಳಿತ ವಿಧಿಸುವ ಸೂಚನೆಗಳನ್ನೂ ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕ ಆರೋಗ್ಯ ಸುರಕ್ಷತೆಗೆ ಸಹಕರಿಸಬೇಕು ಎಂದರು.
ಹಬ್ಟಾಚರಣೆ ಹಿನ್ನೆಲೆಯಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪೊಲೀಸ್ ಉಪಾಧೀಕ್ಷ ಪ್ರಶಾಂತ್ ಸಭೆಯಲ್ಲಿ ಓದಿದರು. ವಿವಿಧ ಸಮುದಾಯ, ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು, ಸಾರ್ವಜನಿಕರು, ಪೊಲೀಸ್‌ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿ: ಡಿಸಿ ಬೀಳಗಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಡಿಮೆಯಾಗಿಲ್ಲ, ಹೆಚ್ಚುತ್ತಲೇ ಇದೆ. ಈ ಬಗ್ಗೆ ಯಾರೂ ಮೈಮರೆಯಬಾರದು. ಇತ್ತೀಚೆಗೆ ಕೋವಿಡ್ ತಪಾಸಣೆಗೆ ಜನರು ಮುಂದೆ ಬರುತ್ತಿಲ್ಲ. ಕಡಿಮೆ ಸಂಖ್ಯೆಯಲ್ಲಿ ತಪಾಸಣೆ ಆಗುತ್ತಿರುವುದರಿಂದ ಸೋಂಕಿತರ ಸಂಖ್ಯೆಯೂ ಕಡಿಮೆ ವರದಿಯಾಗುತ್ತಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಸಂಘ-ಸಂಸ್ಥೆಗಳು ತಾವು ಸಂಘಟಿಸುವ ಕಾರ್ಯಕ್ರಮ ಇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರಿಗೆ ಕೊರೊನಾ ನೆಗೆಟಿವ್ ವರದಿ ತರುವುದನ್ನು ಕಡ್ಡಾಯಗೊಳಿಸಿದರೆ ಆಗ ಹೆಚ್ಚು ಜನರುತಪಾಸಣೆಗೆ ಒಳಗಾಗಬಹುದು. ಯಾವುದೇ ಸಂಘಟನೆ ಸಾಮೂಹಿಕವಾಗಿ ತಪಾಸಣೆಗೆ ಮುಂದೆ ಬಂದರೆ ಅವರಿದ್ದಲ್ಲಿಗೇ ಸಂಚಾರಿ ತಪಾಸಣಾ ವಾಹನ ಕಳುಹಿಸಿ ಕೊಡಲಾಗುವುದು ಎಂದರು.
ಪಟಾಕಿ ಅಂಗಡಿಗಳಿಗೆ ಅನುಮತಿ : ನಗರದ ಹೈಸ್ಕೂಲ್ ಮೈದಾನದಲ್ಲಿ ಈಗಾಗಲೇ ಖಾಸಗಿ ಹಾಗೂ ಸರಕಾರಿ ತಾತ್ಕಾಲಿಕ ಬಸ್ ನಿಲ್ದಾಣಕ್ಕಾಗಿ ಜಾಗೆ ನೀಡಲಾಗಿದೆ. ಉಳಿದಿರುವ ಕಡಿಮೆ ಜಾಗದಲ್ಲಿ ಮೊದಲು ಬಂದವರಿಗೆ ಮೊದಲಆದ್ಯತೆಯಂತೆ ಪಟಾಕಿ ಅಂಗಡಿಗಳನ್ನು ಹಾಕಲು ಅನುಮತಿ ನೀಡಲಾಗುವುದು. ನ. 10 ರಿಂದ 17ವರೆಗೆ ಪಟಾಕಿ ಅಂಗಡಿ ಹಾಕಲು ಅವಕಾಶ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಅ. 31ವರಗೆ ಅವಕಾಶ ನೀಡಲಾಗುವುದು ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.
ಸಾಮಾಜಿಕ ಅಂತರ ಮಾಯ! :ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಎಸ್ಪಿ ಕಚೇರಿ ಸಭಾಭವನದಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲ ಹಿರಿಯ ಅಧಿಕಾರಿಗಳು ಮಾಸ್ಕ್, ಸಾಮಾಜಿಕ ಅಂತರದ ಬಗ್ಗೆಯೇ ಹೆಚ್ಚು ತಿಳಿವಳಿಕೆ ನೀಡಿದರು.ವಿಪರ್ಯಾಸವೆಂದರೆ ಈ ಸಭೆಯಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಿರಲಿಲ್ಲ. ಜನರು ಸಾಮಾಜಿಕ ಅಂತರವಿಲ್ಲದೆ ಸಭೆಯಲ್ಲಿ ಕುಳಿತು ಸಾಮಾಜಿಕ ಅಂತರ ಪಾಲನೆಯ ಪಾಠ ಕೇಳಿದ್ದು ವಿಪರ್ಯಾಸ.