Advertisement

ದೀಪಾವಳಿಯಿಂದ ಲಕ್ಷ ದೀಪೋತ್ಸವಕ್ಕೆ ಎರಡು ಗ್ರಹಣಗಳು!

12:43 PM Oct 13, 2022 | Team Udayavani |

ಈ ವರ್ಷ ದೀಪಾವಳಿ ಅಮಾವಾಸ್ಯೆಯಂದು (ಅಕ್ಟೋಬರ್‌ 25 ) ಪಾರ್ಶ್ವ ಸೂರ್ಯ ಗ್ರಹಣ, ಕಾರ್ತೀಕದ ಹುಣ್ಣಿಮೆ ಯಂದು (ನವೆಂಬರ್‌ 8 ) ಪಾರ್ಶ್ವ ಚಂದ್ರ ಗ್ರಹಣ. ಈ ಗ್ರಹಣಗಳು ಭಾರತಕ್ಕೆ ಪಾರ್ಶ್ವ ಗ್ರಹಣಗಳಾದರೂ ಈ ಎರಡೂ ಗ್ರಹಣ ಗಳು ಬಲು ಅಪರೂಪ. ಏಕೆಂದರೆ ಸೂರ್ಯಗ್ರಹಣ ಸೂರ್ಯಾಸ್ತಕ್ಕೆ, ಚಂದ್ರ ಗ್ರಹಣ ಚಂದ್ರ ಉದಯಕ್ಕೆ. ಇದೇ ಈ ಗ್ರಹಣಗಳ ವಿಶೇಷ.

Advertisement

ಅಕ್ಟೋಬರ್‌ 25,
ಪಾರ್ಶ್ವ ಸೂರ್ಯ ಗ್ರಹಣ
ಸಂಜೆ ಗಂಟೆ 5.08ಕ್ಕೆ ಪ್ರಾರಂಭವಾಗಿ 6.29ಕ್ಕೆ ಅಂತ್ಯ. 5.50ಕ್ಕೆ ಅತ್ಯಂತ ಹೆಚ್ಚೆಂದರೆ 22 ಅಂಶ. ದಿಲ್ಲಿಯವರಿಗೆ ಪಾರ್ಶ್ವ ಗ್ರಹಣ 55 ಅಂಶ. ಉಡುಪಿ ಯಲ್ಲಿ ಆ ದಿನ ಸೂರ್ಯಾಸ್ತ 6.06ಕ್ಕೆ. ಆದ್ದರಿಂದ ಗ್ರಹಣದ ಸೂರ್ಯ, ಕಣ್ಣು ಮಿಟುಕಿ ಸುವಂತೆ ಗ್ರಹಣದೊಂದಿಗೆ ಅಸ್ತಂಗತನಾಗುವನು. ಅದೊಂದು ರೋಚಕ ಸನ್ನಿವೇಶ.

ಸೂರ್ಯ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಗ್ರಹಣದ ಕನ್ನಡಕಗಳ ಮೂಲಕ ನೋಡಬಹುದು.

ಈ ಗ್ರಹಣಗಳು, ಅವುಗಳ ಕಾಲ ನಿರ್ಣಯ ಅನಾದಿಕಾಲದಿಂದ ಖಗೋಳಾಸಕ್ತರಿಗೊಂದು ಸವಾಲೇ. ಅವರ ಸಿದ್ಧಾಂತಗಳ ಸತ್ಯಾಸತ್ಯತೆಗೆ ಮಾನದಂಡ.

ನವೆಂಬರ್‌ 8ರ ಚಂದ್ರ ಗ್ರಹಣ
ಹುಣ್ಣಿಮೆಯ ಚಂದ್ರ ಉದಯಿಸುವಾಗಲೇ ಸಂಜೆ ಗಂಟೆ 6.00ಕ್ಕೆ ಪಾರ್ಶ್ವ ಗ್ರಹಣ. ಅದೂ ಬರೇ 19 ನಿಮಿಷ ಮಾತ್ರ. ಸಂಜೆ 6.19ಕ್ಕೆ ಗ್ರಹಣ ಮುಗಿಯುತ್ತದೆ. ಕಣ್ಣು ಮಿಟುಕಿಸುವಂತೆ ಗ್ರಹಣದ ಚಂದ್ರನ ಉದಯ. ನೋಡಲು ಬಲು ಚೆಂದ. ಬರಿಗಣ್ಣಿಂದಲೇ ನೋಡ ಬಹುದು. ಮಧ್ಯಾಹ್ನ ಗಂಟೆ 2:39ಕ್ಕೆ ಪಾರ್ಶ್ವ ಗ್ರಹಣ ಪ್ರಾರಂಭ. ಖಗ್ರಾಸ 3:46ಕ್ಕೆ. ಖಗ್ರಾಸ ಅಂತ್ಯ 5:11ಕ್ಕೆ. ಪಾರ್ಶ್ವ ಅಂತ್ಯ 6:19.

Advertisement

ನಮಗೆ ಈ ಗ್ರಹಣದ ಅಂತ್ಯದಲ್ಲಿ ಬರೇ 19 ನಿಮಿಷ ಲಭ್ಯ. ಅದೂ ಚಂದ್ರೋದಯದಲ್ಲಿ ಮಾತ್ರ ಲಭ್ಯ.

ಗ್ರಹಣಗಳು ಅಪರೂಪವೇನಲ್ಲ. ಪ್ರತೀ ಆರು ತಿಂಗಳುಗಳಿಗೊಮ್ಮೆ ನಡೆಯುತ್ತಿರುತ್ತವೆ. ಆದರಲ್ಲಿ ಸೂರ್ಯ ಗ್ರಹಣ ವಾದರೆ ಭೂಮಿಯ ಕೆಲವೇ ಪ್ರದೇಶಕ್ಕೆ ಸೀಮಿತ. ಚಂದ್ರ ಗ್ರಹಣ ಅರ್ಧ ಭೂಮಿಗೆ ಗೋಚರಿಸಬಹುದು. ಪ್ರಖ್ಯಾತ ಖಗೋಳ ಶಾಸ್ತ್ರಜ್ಞ ಪ್ರೊ| ಜಯಂತ್‌ ವಿ ನಾಲೀಕರ್‌ ತಮ್ಮ “ಸೆವೆನ್‌ ವಂಡರ್ಸ್‌ ಆಫ್ ಕಾಸ್ಮಸ್‌’ ಪುಸ್ತಕದಲ್ಲಿ ಭೂಮಿಯಲ್ಲಿ ನಡೆಯುವ ಈ ಗ್ರಹಣಗಳು ಒಂದು ವಿಸ್ಮಯವೇ ಎನ್ನುತ್ತಾರೆ. ಈ ವಿಸ್ಮಯಗಳಿಗೆ ಅನೇಕ ಕಾರಣಗಳು. ಸೂರ್ಯನಿಂದ ಭೂಮಿ ಹಾಗೂ ಚಂದ್ರರ ದೂರಗಳ ಅನುಪಾತ ಹಾಗೂ ಚಂದ್ರ ಮತ್ತು ಸೂರ್ಯನ ವ್ಯಾಸಗಳ ಅನುಪಾತ. ಇವೆರಡೂ ಸಮವಾಗಿರುವುದರಿಂದ ನಮಗೆ ಸೂರ್ಯ ಚಂದ್ರರು ಒಂದೇ ಗಾತ್ರದಲ್ಲಿರು  ವಂತೆ ಭಾಸವಾಗು ವುದು. ಸೂರ್ಯ ಭೂಮಿಯ ಪಥಗಳ ಸಮತಲ ಸುಮಾರು 5 ಡಿಗ್ರಿ ಓರೆ ಯಾಗಿವೆ. ಈ ಸಮತಲಗಳು ಸಂಧಿಸು ವಲ್ಲಿ, ಪ್ರತೀ ಆರು ತಿಂಗಳುಗಳಿಗೊಮ್ಮೆ ಸೂರ್ಯ, ಚಂದ್ರ ಹಾಗೂ ಭೂಮಿ ನೇರ ಬರುವುದರಿಂದ ಈ ಗ್ರಹಣವೆಂಬ ನೆರಳು- ಬೆಳಕಿನ ಆಟ ನಡೆಯುತ್ತಿರುತ್ತದೆ.ಬೇರೆ ಗ್ರಹಗಳಲ್ಲಿ ಗ್ರಹಣಗಳ ಈ ವಿಸ್ಮಯ ನಡೆಯುವುದಿಲ್ಲ.

ಆಕಾಶದಲ್ಲಿ ನಡೆಯುವ ಈ ಖಗೋಳ ಪ್ರಯೋಗ ಅದೆಷ್ಟು ದೂರದಲ್ಲಿ ನಡೆಯುತ್ತದೆಂದರೆ ಆಶ್ಚರ್ಯವಾಗಬಹುದು. ಭೂಮಿ- ಚಂದ್ರರ ಸರಾಸರಿ ದೂರ 3 ಲಕ್ಷದ 84 ಸಾವಿರ ಕೀ. ಮೀ.ಗಳಾದರೆ, ಭೂಮಿ- ಸೂರ್ಯರ ಸರಾಸರಿ ದೂರ ಸುಮಾರು 15 ಕೋಟಿ ಕಿ.ಮೀ. ಅನಂತ ಆಕಾಶದಲ್ಲಿ ಗ್ರಹ ಸೂರ್ಯರ ನರ್ತನ. ಸೂರ್ಯ ನನ್ನು ಬರಿಗಣ್ಣಿನಿಂದ ಯಾವಾಗಲೂ ನೋಡಬಾರದು. ಗ್ರಹಣ ಕಾಲದಲ್ಲೂ ಬರಿಗಣ್ಣಿನಿಂದ ನೋಡಬಾರದು. ಆದರೆ ಚಂದ್ರ ಗ್ರಹಣವನ್ನು ಬರಿಗಣ್ಣುಗಳಿಂದ ನೋಡಿ ಆನಂದಿಸಬಹುದು.

– ಡಾ| ಎ.ಪಿ. ಭಟ್‌, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next