ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಸಿಲಿಕಾನ್ ಸಿಟಿಯಲ್ಲಿ ಜೋರಾಗಿದ್ದು, ಮುಸ್ಸಂಜೆಯಾಗುತ್ತಿದ್ದಂತೆ ಎಲ್ಲೆಡೆ ದೀಪಗಳು ಕಂಗೊಳಿಸುತ್ತಿವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನ ದವರೂ ಹೊಸ ಬಟ್ಟೆ ಧರಿಸಿ ಕುಟುಂಬಸ್ಥರೊಂದಿಗೆ ಸಿಹಿ ಹಂಚಿಕೊಂಡು ಸಂಭ್ರಮಿಸಿದರೆ, ಮತ್ತೂಂದೆಡೆ ವಿವಿಧ ಬಣ್ಣದ ಪಟಾಕಿಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು.
ರಾಜ್ಯ ರಾಜಧಾನಿಯಲ್ಲಿ ಈ ವರ್ಷ ದೀಪಾವಳಿ ಆಚರಣೆ ವಿಶೇಷವಾಗಿತ್ತು. ಕೆಲವರು ಎಣ್ಣೆ ಸ್ನಾನದ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರೆ, ಸಂಜೆ ನಂತರ ಮನೆ, ಮನೆಗಳಲ್ಲಿ ಕಂಗೊಳಿಸಿದ ದೀಪಗಳು ಬೆಳಕಿನ ರಂಗಿನ ಲೋಕವನ್ನು ಸೃಷ್ಟಿಸಿ ಕಣ್ಮನಸೂರೆಗೊಳ್ಳುವಂತೆ ಮಾಡಿದವು. ಹೊಸ್ತಿಲು, ಕಿಟಕಿ, ಕಾಂಪೌಂಡ್ ಮೇಲೆ ಹೂವಿನ ಅಲಂಕಾರದ ಜೊತೆಗೆ ವಿವಿಧ ವಿನ್ಯಾಸದ ದೀಪಗಳನ್ನು ಹಚ್ಚಿ ಸಂಭ್ರಮಿಸಿದರು.
ಇನ್ನು ನಗರದ ಬಹುತೇಕ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಭಕ್ತರ ದಂಡೇ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿತು. ಇನ್ನು ಹಲವು ಮನೆಗಳಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಪ್ರತಿನಿತ್ಯ ಟ್ರಾಫಿಕ್ ಜಾಮ್‌ನಿಂದ ಕೂಡಿರುತ್ತಿದ್ದ ರಸ್ತೆಗಳೆಲ್ಲ ವಾಹನಗಳಿಲ್ಲದೇ ಬಿಕೋ ಎನ್ನುತ್ತಿದ್ದವು. ಬಹುತೇಕ ಅಂಗಡಿ-ಮುಂಗಟ್ಟುಗಳ ಬಾಗಿಲು ಮುಚ್ಚಿದ್ದವು. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆಯೂ ಜೋರಾಗಿತ್ತು. ಇನ್ನು ಲಕ್ಷ್ಮೀ ಪೂಜೆಗೂ ಕೆಲವರು ಸಜ್ಜಾಗುತ್ತಿದ್ದರು. ಶುಕ್ರವಾರ ಸಂಜೆ ಬಳಿಕ ಪಟಾಕಿ ಸದ್ದು ಕೂಡಾ ಅಲ್ಲಲ್ಲಿ ಕೇಳಿಬಂತು. ಮಾರುಕಟ್ಟೆಗಳಲ್ಲಿ ಮಣ್ಣಿನ ದೀಪಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದ್ದು, ಇದರ ಜೊತೆಗೆ ಬಾಳೆಕಂದು, ಬೂದುಗುಂಬಳ, ಹೂವು, ನಿಂಬೆ ಹಣ್ಣುಗಳ ಮಾರಾಟವೂ ಎಗ್ಗಿಲ್ಲದೇ ನಡೆಯುತ್ತಿತ್ತು.
ಪಟಾಕಿ ಮಳಿಗೆಗಳಲ್ಲಿ ಜನವೋ ಜನ: ನಗರದಲ್ಲಿರುವ ಬಹುತೇಕ ಪಟಾಕಿ ಮಳಿಗೆಗಳಲ್ಲಿ ಗ್ರಾಹಕರ ದಟ್ಟಣೆ ಅಧಿಕವಾಗಿತ್ತು. ಕೋಟ್ಯಂತರ ರೂ. ಪಟಾಕಿ ವಹಿವಾಟುಗಳು ನಡೆದವು. ಕುಟುಂಬ ಸಮೇತರಾಗಿ ಪಟಾಕಿ ಮಳಿಗೆಗಳಿಗೆ ತೆರಳಿ ಸಾವಿರಾರು ರೂ. ಮೌಲ್ಯದ ಪಟಾಕಿ ಖರೀದಿಸಿದ ನಾಗರಿಕರು, ಕತ್ತಲಾಗುತ್ತಿದ್ದಂತೆ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದು ಬೆಂಗಳೂರಿನ ದೀಪಾವಳಿಯ ಮೆರುಗನ್ನು ಇಮ್ಮಡಿಗೊಳಿಸುವಂತೆ ಮಾಡಿತು. ಪ್ಲವರ್ ಪಾಟ್‌ಗಳು ಹಕ್ಕಿಗಳಂತೆ ವಿಷಿಲ್ ಹೊಡೆಯುತ್ತಾ ಬಾನಂಗಳಕ್ಕೆ ಸಾಗಿ ಬಣ್ಣ-ಬಣ್ಣದ ಹೂವಿನಾಕಾರದಲ್ಲಿ ಸಿಡಿಯುವುದನ್ನು ಕಣ್ತುಂಬಿಕೊಳ್ಳುವುದು ಒಂದೆಡೆಯಾದರೆ, ಮತ್ತೂಂದೆಡೆ ಕೈಯಲ್ಲಿ ಸುರ್‌ಸುರ್ ಬತ್ತಿ ಹಿಡಿದು ಮಕ್ಕಳು ಖುಷಿಪಡುತ್ತಿರುವ ದೃಶ್ಯ ಕಂಡು ಬಂತು. ಒಟ್ಟಾರೆ ಈ ಬಾರಿಯ ದೀಪಾವಳಿಗೆ ಪಟಾಕಿಗಳ ಸದ್ದು ಹೆಚ್ಚಾಗಿತ್ತು.