ಜಮ್ಮು-ಕಾಶ್ಮೀರ ವಿಧಾನಸಭೆಗೆ ದಶಕದ ಬಳಿಕ ನಡೆಯುತ್ತಿರುವ ಚುನಾವಣೆಯ ಮತದಾನ ಪ್ರಕ್ರಿಯೆಗೆ ಬುಧವಾರ ಚಾಲನೆ ಲಭಿಸಲಿದೆ. ಜಮ್ಮು - ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರಕಾರ ರದ್ದುಗೊಳಿಸಿ, ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬೆರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನು ರಚಿಸಿದ 5 ವರ್ಷಗಳ ಬಳಿಕ ಜಮ್ಮು-ಕಾಶ್ಮೀರ ವಿಧಾನಸಭೆಗೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಸ್ವಾತಂತ್ರ್ಯ ಲಭಿಸಿದಾಗಿನಿಂದಲೂ ಒಂದಲ್ಲ ಒಂದು ಕಾರಣದಿಂದಾಗಿ ಸದಾ ಪ್ರಕ್ಷುಬ್ಧತೆಯಿಂದ ಕೂಡಿದ್ದ ಕಣಿವೆ ರಾಜ್ಯದಲ್ಲೀಗ ಶಾಂತಿ ಮರುಕಳಿಸಿದೆ. ದಶಕದ ಹಿಂದೆಗೆ ಹೋಲಿಸಿದರೆ ಜಮ್ಮು-ಕಾಶ್ಮೀರದ ಕಾನೂನು-ಸುವ್ಯವಸ್ಥೆ ಗಮನಾರ್ಹ ಸುಧಾರಣೆ ಕಂಡಿದೆ. ಪ್ರತ್ಯೇಕತೆಯ ಕೂಗೆಬ್ಬಿಸಿದ್ದ ಸ್ಥಳೀಯ ಜನರು ಈಗ ಆಡಳಿತ ವ್ಯವಸ್ಥೆಯೊಂದಿಗೆ ಕೈಜೋಡಿಸಿ, ಹಿಂಸಾಕೃತ್ಯಗಳಿಂದ ದೂರವುಳಿದು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಪ್ರತ್ಯೇಕತಾವಾದಿಗಳು, ಪಾಕ್ ಪ್ರೇರಿತ ಉಗ್ರರ ಅಟ್ಟ ಹಾಸದಿಂದ ತಮ್ಮ ತವರೂರನ್ನೇ ತೊರೆಯಬೇಕಾಗಿ ಬಂದಿದ್ದ ಮೂಲ ಕಾಶ್ಮೀರಿ ಗರು ಮತ್ತೆ ತಮ್ಮ ತವರಲ್ಲಿ ನೆಲೆಯೂರಿದ್ದಾರೆ.
ಹಿಂಸಾಚಾರ, ಭಯೋತ್ಪಾದಕ ದಾಳಿ ಗಳು, ಪ್ರತ್ಯೇಕತಾವಾದಿಗಳ ಆರ್ಭಟ, ರಾಜಕೀಯ ಪಕ್ಷಗಳ ಓಲೈಕೆ ನೀತಿ… ಈ ಎಲ್ಲ ಕಾರಣಗಳಿಂದಾಗಿ ಅಕ್ಷರಶಃ ನಲುಗಿಹೋಗಿದ್ದ ಜಮ್ಮು-ಕಾಶ್ಮೀರದ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ. ಕೇಂದ್ರ ಸರಕಾರ ಕಳೆದ 5 ವರ್ಷಗಳಲ್ಲಿ ತಳೆದ ಕಠಿನ ನಿಲುವಿನ ಪರಿಣಾಮ ಜಮ್ಮು-ಕಾಶ್ಮೀರದ ಜನರ ಮೊಗದಲ್ಲಿ ಮಂದಹಾಸ ಕಾಣಲಾರಂಭಿಸಿದೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಪಂಚಾಯತ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ವೇಳೆ ಮತದಾನ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಇನ್ನು ಎಪ್ರಿಲ್, ಮೇಯಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಂತೂ ಕಣಿವೆ ರಾಜ್ಯದ ಜನರು ದಾಖಲೆ ಪ್ರಮಾಣದಲ್ಲಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೇಲಣ ತಮ್ಮ ನಂಬಿಕೆಯನ್ನು ಜಗಜ್ಜಾಹೀರುಗೊಳಿಸಿದ್ದರು. ಈ ಮೂಲಕ ಪ್ರತ್ಯೇಕತಾವಾದ, ಭಯೋತ್ಪಾದನೆ, ಹಿಂಸಾಚಾರಗಳಿಗೆ ಇನ್ನು ನಾವು ಆಸ್ಪದ ನೀಡಲಾರೆವು ಎಂಬುದನ್ನು ಘಂಟಾಘೋಷವಾಗಿ ಸಾರಿ ಹೇಳಿದ್ದರು.
ಇದರ ಫಲವಾಗಿಯೇ ಭಾರತೀಯ ಚುನಾವಣಾ ಆಯೋಗ ಜಮ್ಮು-ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸುವ ನಿರ್ಧಾರ ಕೈಗೊಂಡಿತ್ತು. ಒಟ್ಟು ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಮತದಾನ ಸೆ.18ರಂದು ನಡೆಯಲಿದೆ. ಈವರೆಗೆ ಚುನಾವಣೆಗೆ ಸಂಬಂಧಿಸಿದಂತೆ ಪ್ರಚಾರ ಸಹಿತ ಯಾವೊಂದೂ ಪ್ರಕ್ರಿಯೆಯಲ್ಲೂ ಅಂತಹ ಗಂಭೀರ ಪ್ರಮಾಣದ ಹಿಂಸಾಚಾರ ವಾಗಲಿ, ಘರ್ಷಣೆಯಾಗಲಿ ನಡೆಯದಂತೆ ಜಮ್ಮು-ಕಾಶ್ಮೀರದ ಜನತೆಯೂ ನೋಡಿಕೊಂಡಿರುವುದು ಚುನಾವಣೆ ಬಗೆಗೆ ಎಷ್ಟೊಂದು ಆಸಕ್ತಿ ಮತ್ತು ಬದ್ಧತೆ ಹೊಂದಿದ್ದಾರೆ ಎಂಬುದಕ್ಕೆ ನಿದರ್ಶನ. ಇವೆಲ್ಲದರ ಹೊರತಾಗಿ ಜಮ್ಮು-ಕಾಶ್ಮೀರದ ಸದ್ಯದ ಶಾಂತ ಪರಿಸ್ಥಿತಿಯನ್ನು ಅರಗಿಸಿಕೊಳ್ಳಲು ಪಾಕಿಸ್ಥಾನಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಕಳೆದ ಕೆಲವು ತಿಂಗಳುಗಳಿಂದ ಉಗ್ರರನ್ನು ಛೂ ಬಿಟ್ಟು ಗಡಿ ಯಾಚೆಯಿಂದ ಕಾಶ್ಮೀರದೊಳಕ್ಕೆ ನುಸುಳಿಸಿ, ದಾಳಿ ನಡೆಸುವ ಪ್ರಯತ್ನ ನಡೆಸುತ್ತಲೇ ಬಂದಿದೆ.
ಇದೇ ವೇಳೆ ಪಾಕ್ ಸೇನೆ ಗಡಿಯಲ್ಲಿ ಕದನವಿರಾಮ ಉಲ್ಲಂಘನೆಯಂತಹ ಕುತಂತ್ರವನ್ನೂ ನಡೆಸಲಾರಂಭಿಸಿದೆ. ಆದರೆ ಇವೆಲ್ಲವನ್ನೂ ಹಿಮ್ಮೆಟ್ಟಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಯಾವ ಬೆದರಿಕೆ, ಷಡ್ಯಂತ್ರಗಳಿಗೆ ಮಣಿಯದೆ, ನಿರ್ಭೀತಿಯಿಂದ ಜನರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು. ಆ ಮೂಲಕ ಜಮ್ಮು- ಕಾಶ್ಮೀರ ನೆಲದಿಂದ ಪ್ರತ್ಯೇಕತಾವಾದದ ಕೂಗು, ಭಯೋ ತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲು ಸರಕಾರದೊಂದಿಗೆ ಕೈಜೋಡಿಸಬೇಕು. ಇದಾದಲ್ಲಿ ಜಮ್ಮು- ಕಾಶ್ಮೀರ ಮತ್ತೆ ರಾಜ್ಯದ ಸ್ಥಾನಮಾನ ಪಡೆಯುವುದರ ಜತೆಯಲ್ಲಿ ಈಗ ಕೈಗೆತ್ತಿಕೊಳ್ಳಲಾಗಿರುವ ಅಭಿವೃದ್ಧಿ ಯೋಜನೆಗಳಿಗೆ ಮತ್ತಷ್ಟು ವೇಗ ಲಭಿಸಿ, ಮತ್ತೂಮ್ಮೆ ಭಾರತದ ಮುಕುಟಮಣಿಯಾಗಿ ಪ್ರಜ್ವಲಿಸುವುದು ಖಚಿತ.