Advertisement

Festival; ನಾಗರ ಪಂಚಮಿಯೂ ಪ್ರಕೃತಿ ಆರಾಧನೆಯೂ: ಹೀಗೂ ಆಚರಿಸೋಣ

10:55 PM Aug 08, 2024 | Team Udayavani |

ಪ್ರಕೃತಿ ಸಹಜ ನಿರ್ಮಾಣವಾದ, ಮಾನವ ಶ್ರದ್ಧೆಯಿಂದ ಕಾಪಿಟ್ಟ ಪುರಾತನ ನಾಗ ಬನ ಎಂದರೆ ಅದೊಂದು ದಟ್ಟವಾದ ಅರಣ್ಯದ ಸಣ್ಣ ಮಾದರಿ. ಇದೊಂದು ಸುರಕ್ಷಿತ ಪರಿಸರವೂ ಹೌದು. ಮಾನವ ಅಭಿಯೋಗವಾಗದ ಒಂದು ನಾಗ ಬನದಲ್ಲಿ ಕನಿಷ್ಠ 50-60 ವೃಕ್ಷ – ಗಿಡ – ಬಳ್ಳಿ – ಪೊದೆಗಳ ಪ್ರಭೇದ, 20-30 ಔಷಧೀಯ ಸಸ್ಯಗಳು ಇರುತ್ತವೆ ಎಂಬುದು ಸಂಶೋಧಕರ, ಪರಿಸರ ಆಸಕ್ತರ ಅಭಿಪ್ರಾಯ. ಇಲ್ಲಿ ಬೆಳೆದ ಮರ-ಗಿಡ-ಬಳ್ಳಿಗಳನ್ನು ಆಶ್ರಯಿಸಿ ಪಕ್ಷಿ ಸಂಕುಲ ನಿರ್ಭಯದಿಂದ ಬದುಕುತ್ತವೆ. ಕ್ರಿಮಿಕೀಟಗಳಿಗೂ ಇದು ಆಶ್ರಯಸ್ಥಾನ. ಹೀಗೆ ನಾಗಬನಗಳು ಜೀವ ವೈವಿಧ್ಯಗಳ ತಾಣವೂ ಹೌದು. ಇದುವೇ ನಿಜ ಅರ್ಥದ ವನ, ಬನ.

Advertisement

ಮರ ಗಿಡಗಳಿಲ್ಲದ “ನಾಗ ಬನ’ದಲ್ಲಿ ನಾಗ ವೇದಿಕೆ, ನಾಗ ಗುಡಿ, ನಾಗ ಮಂದಿರಗಳು ನಿರ್ಮಾಣವಾಗುತ್ತಿರುವುದನ್ನು ಇತ್ತೀಚೆಗಿನ ನಾಲ್ಕೈದು ದಶಕಗಳಿಂದ ಕಾಣುತ್ತಿದ್ದೇವೆ. ತಂಪನ್ನು ಬಯಸಿ ತಂಪನ್ನು ಆಶ್ರಯಿಸುವ ಪ್ರಾಣಿ ನಾಗ ಹುತ್ತದ ಆಳದಲ್ಲಿ, ವಿಶಾಲವಾದ ಮರಗಳ ಬುಡದಲ್ಲಿ , ಒತ್ತೂತ್ತಾಗಿ ಗಿಡ ಮರಗಳು ಬೆಳೆದಿರುವಲ್ಲಿ, ಮನುಷ್ಯ ಸಂಚಾರವಿಲ್ಲದೆ ತರಗೆಲೆಗಳು ಬಿದ್ದು ದಪ್ಪನೆಯ ಹಾಸು ನಿರ್ಮಾಣವಾದಲ್ಲಿ ಅದರಡಿಯಲ್ಲಿ ನಾಗನ ವಾಸಸ್ಥಾನ. ಇಂತಹ ಸಹಜವಾದ ವ್ಯವಸ್ಥೆ ಇದ್ದುದನ್ನು ಹಾಳುಗೆಡಹದೆ ರಕ್ಷಿಸಿದರೆ ಇದೂ ಒಂದು ರೀತಿಯ ನಾಗಾರಾಧನೆ.

ಹಿಂದೆ ಆಟಿ (ಕರ್ಕಾಟಕ ಮಾಸ) ತಿಂಗಳ ಅಮಾವಾಸ್ಯೆಯಂದು ಮಾತ್ರ ನಾಗಬನಗಳ ಅನಗತ್ಯ ಬೆಳವಣಿಗೆಗಳನ್ನು ಮಾತ್ರ ಕಡಿದು ಬನ ಪ್ರವೇಶಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದರು. ನಾಗಬನಗಳ ನಾಶ ಪ್ರಕ್ರಿಯೆ, ಆಶಯ ಮರೆತ ವೈಭವೀಕರಣ, ಜೀರ್ಣೋದ್ಧಾರ ಅವ್ಯಾಹತವಾಗಿ ನಡೆದರೆ ಮುಂದೊಂದು ದಿನ ಕಾಂಕ್ರೀಟ್‌ ಕಟ್ಟೆಯನ್ನೋ, ಗುಡಿಯನ್ನೋ ನಾಗಬನವೆಂದು ನಮ್ಮ ಮಕ್ಕಳಿಗೆ ತೋರಿಸ ಬೇಕಾಗಬಹುದು. ಆಗ ಮಾತ್ರ ಮಕ್ಕಳು ಬನ ಎನ್ನುತ್ತೀರಿ ಎಲ್ಲಿದೆ ವನ? ಎಂದು ಪ್ರಶ್ನಿಸಿದರೆ ನಮ್ಮಲ್ಲಿ ಉತ್ತರ ಇದೆಯಾ?.

ನಾಗ-ವೃಕ್ಷ ಅವಳಿ ಚೇತನ
ನಾಗ-ವೃಕ್ಷ ಸಂಬಂಧವನ್ನು ನಮ್ಮ ಸಂಸ್ಕೃತಿಯ ಮೂಲದಲ್ಲಿ ಗುರುತಿಸಬಹುದು. ಈ ಕಾರಣದಿಂದಲೇ ಮರಗಳ ಸಮೂಹವೇ ನಾಗಬನವಾಗಿದ್ದಿರಬಹುದು. ಪ್ರತೀ ವರ್ಷ ಕನಿಷ್ಠ ಒಂದೆರಡು ಬಾರಿಯಾದರೂ ನಾಗ ಮೂಲಸ್ಥಾನಕ್ಕೆ “ತನು ತಂಬಿಲ’ ಸೇವೆ ಸಲ್ಲಿಸಲು ಹೋಗುವ ನಾವು ನಾಗರ ಪಂಚಮಿಯ ಪರ್ವದಲ್ಲಿ ಮೂಲಕ್ಕೆ ಹೋಗುವಾಗ ಒಂದು ಗಿಡವನ್ನು ಕೊಂಡೊಯ್ಯುವ, ಬನದ ಪರಿಸರದಲ್ಲಿ ನೆಟ್ಟು ವನ ಮಹೋತ್ಸವ ಆಚರಿಸೋಣ, ಈ ವೇಳೆಯಲ್ಲಿ ಗಿಡ ನೆಡುವ ಅಭಿಯಾನ ಎಲ್ಲೆಡೆ ನೆರವೇರುತ್ತಿರುತ್ತವೆ, ನಾಗರ ಪಂಚಮಿ ದಿನದಂದು ನಾಗಪೂಜೆಯೊಂದಿಗೆ ವನಮಹೋತ್ಸವವೂ ಆಗಬಾರದೇ?

ಕೆ.ಎಲ್‌. ಕುಂಡಂತಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next