Advertisement

ಶರಣರ ಆಶಯಕ್ಕೆ ಪೂರಕವಾಗಿ ಉತ್ಸವ ಆಚರಣೆ

01:01 PM Feb 12, 2018 | |

ಬಸವಕಲ್ಯಾಣ: ಸಮಾಜದಲ್ಲಿ ಸಾಮರಸ್ಯ, ಸಹೋದರತ್ವ, ಸೌಹಾರ್ದತೆ ನಿರ್ಮಾಣವಾಗಬೇಕು ಎನ್ನುವುದು ಶರಣರ ಆಶಯವಾಗಿತ್ತು. ಶರಣರ ಆಶಯಕ್ಕೆ ಪೂರಕವಾಗಿ ಕಲ್ಯಾಣದಲ್ಲಿ ರಚನಾತ್ಮಕವಾಗಿ, ಅರ್ಥಪೂರ್ಣವಾಗಿ ಮೂರುದಿನಗಳ ಕಾಲ ಬಸವ ಉತ್ಸವ ಆಚರಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ನಗರದಲ್ಲಿ ಮೂರು ದಿನಗಳ ಕಾಲ ನಡೆದ ಬಸವ ಉತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವ ಉತ್ಸವವನ್ನು ಪ್ರತಿ ವರ್ಷ ಕಡ್ಡಾಯವಾಗಿ ಆಚರಣೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವದು ಎಂದರು. ಆಧುನಿಕತೆಯ ಭರದಲ್ಲಿ ಸಂಸ್ಕೃತಿ ಮರೆಯಾಗಿ, ಮೌಲ್ಯಗಳು ಕುಸಿಯುತ್ತಿವೆ. ಪ್ರೀತಿ, ವಿಶ್ವಾಸ ಕೊರತೆ ಕಾಡುತ್ತಿದೆ. ಯುವ ಸಮೂಹ ದಾರಿ ತಪ್ಪುತಿದೆ. 

ಮೌಲ್ಯಗಳ ಪುನರ್‌ ಸ್ಥಾಪನೆಗಾಗಿ ಶರಣರ ತತ್ವಾದರ್ಶಗಳು ಅರ್ಯವಶ್ಯವಾಗಿವೆ. ಧರ್ಮದ ಬಗ್ಗೆ ಅಭಿಮಾನ ಎಲ್ಲ ಧರ್ಮದ ಬಗ್ಗೆ ಗೌರವ ಭಾವನೆ ಎಲ್ಲರಲ್ಲಿಯೂ ಬೆಳೆಯಬೇಕು. ಎಲ್ಲ ಧರ್ಮಕಿಂತ ರಾಷ್ಟ್ರ ಧರ್ಮ ದೊಡ್ಡದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಸಾಮಾಜಿಕ ಸಮಾನತೆಗಾಗಿ ನಡೆದ ಕಲ್ಯಾಣ ಕ್ರಾಂತಿಯಲ್ಲಿ ಹುತಾತ್ಮರಾದ ಶರಣ ಹರಳಯ್ಯ, ಮಧುವಯ್ಯ ಹಾಗೂ ಕಲ್ಯಾಣಮ್ಮನವರ ಸ್ಮಾರಕ ನಿರ್ಮಾಣ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ಬಸವ ಕಲ್ಯಾಣ ಸಮಗ್ರ ಅಭಿವೃದ್ಧಿಗೊಳಿಸಿ ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. 

ಸಂಸದ ಭಗವಂತ ಖೂಬಾ ಮಾತನಾಡಿ, ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕು. ಮೂಢನಂಬಿಕೆ, ಅಂಧಕಾರ, ಕಂದಾಚಾರ ತೊಡೆದು ಹಾಕಬೇಕು. ಕಾಯಕದಲ್ಲಿ ಮೇಲು ಕೀಳು ಎನ್ನುವ ಮನೊಭಾವ ದೂರ ಮಾಡಬೇಕು ಎನ್ನುವ ಉದ್ದೇಶದಿಂದ ಗುರು ಬಸವಣ್ಣನವರ ನೇತೃತ್ವದಲ್ಲಿ ಕ್ರಾಂತಿ ನಡೆಯಿತು. 900 ವರ್ಷಗಳ ಕಾಲ ಗತಿಸಿದರೂ ಶರಣರ ಆಶಯ ಇದುವರೆಗೂ ಈಡೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಸರ್ಕಾರ ಅಥವಾ ಜನ ಪ್ರತಿನಿಧಿಗಳ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮಗಳು ನಡೆಯದೇ, ಸರ್ಕಾರ ಹಾಗೂ ಜನ ಪ್ರತಿನಿಧಿಗಳನ್ನು ದೂರವಿಟ್ಟು ಉತ್ಸವ ಆಚರಣೆ ಮಾಡಬೇಕು. ಆಗ ಮಾತ್ರ ಇಂಥ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ. ಶರಣರು ರಚಿಸಿದ ವಚನ ಸಾಹಿತ್ಯದ ಆಶಯ ಸಾಕಾರವಾಗಿ, ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು. ರಶ್ಮಿ ನಿರೂಪಿಸಿದರು. ಜಿಲ್ಲಾಧಿಕಾರಿ ಡಾ| ಎಚ್‌.ಆರ್‌ ಮಹಾದೇವ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next