Advertisement

ಬ್ಯಾಹಟ್ಟಿ ಗ್ರಾಮದೇವತೆಗಳ ಜಾತ್ರೆಗೆ ಚಾಲನೆ

09:44 AM May 06, 2022 | Team Udayavani |

ಹುಬ್ಬಳ್ಳಿ: ಬ್ಯಾಹಟ್ಟಿಯಲ್ಲಿ 480 ವರ್ಷಗಳ ನಂತರ ಅದ್ಧೂರಿ ಗ್ರಾಮ ದೇವತೆಗಳ ಜಾತ್ರಾ ಮಹೋತ್ಸವಕ್ಕೆ ಗುರುವಾರ ಚಾಲನೆ ದೊರೆತಿದ್ದು, 13ರ ವರೆಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಗ್ರಾಮದ ಹಿರಿಯ ಮೂಗಪ್ಪ ಬೆಟದೂರು ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವ ಸಮಿತಿಯಿಂದ ನೂತನವಾಗಿ ನಿರ್ಮಿಸಲಾದ ದುರ್ಗವ್ವ, ದ್ಯಾಮವ್ವ ಗ್ರಾಮದೇವತೆ ದೇವಸ್ಥಾನದ ಉದ್ಘಾಟನೆ ಹಾಗೂ ಗ್ರಾಮದೇವತೆಯರ ಜಾತ್ರಾ ಮಹೋತ್ಸವವನ್ನು ಆಯೋಜನೆ ಮಾಡಲಾಗಿದೆ. ಮೇ 6ರಿಂದ 10ರವರೆಗೆ ಪ್ರತಿದಿನ ಗ್ರಾಮದೇವತೆಗಳ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಪ್ರವಚನ ಹಾಗೂ ಧರ್ಮಸಭೆ ನಡೆಯಲಿದೆ ಎಂದರು.

ಮೇ 6 ರಂದು ಸಂಜೆ 6 ಗಂಟೆಗೆ ಧರ್ಮಸಭೆ ನಡೆಯಲಿದೆ. ಶಿರಕೋಳ ಹಿರೇಮಠದ ಶ್ರೀ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹಳೇಹುಬ್ಬಳ್ಳಿ ನೀಲಕಂಠ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ದೊಡ್ಡವಾಡ ಶ್ರೀ ಜಡಿಸಿದ್ದೇಶ್ವರ ಶಿವಾಚಾರ್ಯರು, ಕುಂದಗೋಳ ಶ್ರೀ ಬಸವಣ್ಣಜ್ಜನವರು ಉಪಸ್ಥಿರಿರಲಿದ್ದಾರೆ. ಇದೇ ಸಂದರ್ಭದಲ್ಲಿ ಹಲವರಿಗೆ ಸನ್ಮಾನ ನಡೆಯಲಿದೆ. ರಾತ್ರಿ 10 ಗಂಟೆಗೆ ಶಂಭಯ್ಯ ಹಿರೇಮಠ ಅವರಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಯಲಿದೆ.

7 ರಂದು ಸಂಜೆ 6 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಗದಗ ಶ್ರೀ ಕೈವಲ್ಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಡಾ| ಎ.ಸಿ. ವಾಲಿ ಮಹಾರಾಜರು, ಮನಗುಂಡಿ ಮಹಾರಾಜರು ಉಪಸ್ಥಿತರಿರಲಿದ್ದಾರೆ. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಮಿಸಲಿದ್ದಾರೆ. ಹಲವರಿಗೆ ಸನ್ಮಾನ ನಡೆಯಲಿದೆ. ರಾತ್ರಿ 10 ಗಂಟೆಗೆ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

8 ರಂದು ಸಂಜೆ 6 ಗಂಟೆಗೆ ನಡೆಯುವ ಧರ್ಮಸಭೆಯಲ್ಲಿ ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಡಾ| ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಅಭಿನವ ಸಿದ್ಧಾರೂಢ ಸ್ವಾಮೀಜಿ, ಅಭಿನವ ಮೃತ್ಯುಂಜಯ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌, ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಸಾಧಕರಿಗೆ ಸನ್ಮಾನ ನಡೆಯಲಿದೆ. ರಾತ್ರಿ 10 ಗಂಟೆಗೆ ಜಾನಪದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ.

Advertisement

9 ರಂದು ಸಂಜೆ 6 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹೊಸಳ್ಳಿ ಬೂದೀಶ್ವರ ಸ್ವಾಮೀಜಿ, ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಗಣ್ಯರಿಗೆ ಸನ್ಮಾನ ನಡೆಯಲಿದೆ. ರಾತ್ರಿ 10 ಗಂಟೆಗೆ ಜೋಗುತಿ ಕುಣಿತ, ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ.

10 ರಂದು ಸಂಜೆ 6 ಗಂಟೆಗೆ ನಡೆಯುವ ಧರ್ಮಸಭೆಯಲ್ಲಿ ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅಣ್ಣಿಗೇರಿ ಶ್ರೀ ಶಿವಕುಮಾರ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಗಣ್ಯರಿಗೆ ಸನ್ಮಾನ ನಡೆಯಲಿದೆ. ರಾತ್ರಿ 10 ಗಂಟೆಗೆ ಮಲ್ಲಕಂಬ ಪ್ರದರ್ಶನ ನಡೆಯಲಿದೆ. ರಾತ್ರಿ 11 ಗಂಟೆಗೆ ಗ್ರಾಮ ದೇವತೆಗಳ ಸೀಮೆ ಕಟ್ಟುವ ಕಾರ್ಯಕ್ರಮ ನಡೆಯಲಿದ್ದು, ಈ ಸಮಯದಲ್ಲಿ ಇಡೀ ಗ್ರಾಮದಲ್ಲಿ ವಿದ್ಯುತ್‌ ಸ್ಥಗಿತ ಮಾಡಲಾಗುತ್ತದೆ. ಗ್ರಾಮದಲ್ಲಿ ಯಾರೂ ಸಂಚಾರ ಮಾಡುವಂತಿಲ್ಲ. ಜೊತೆಗೆ ಗ್ರಾಮಕ್ಕೆ ಆಗಮಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗುತ್ತದೆ.

11 ರಂದು ಬೆಳಗ್ಗೆ ಸೂತಕ ಆಚರಣೆ ಇರುವುದರಿಂದ ದೇವಸ್ಥಾನ ಪ್ರವೇಶ, ದರ್ಶನ ಹಾಗೂ ಮಹಾಪ್ರಸಾದ ಇರುವುದಿಲ್ಲ. ಸಂಜೆ 6 ಗಂಟೆಗೆ ಧರ್ಮಸಭೆ ನಡೆಯಲಿದೆ. ಡಾ| ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಅಮರಸಿದ್ದೇಶ್ವರ ಸ್ವಾಮೀಜಿ, ಶ್ರೀ ಸಿದ್ದಲಿಂಗದೇವರು ಉಪಸ್ಥಿತರಿರಲಿದ್ದಾರೆ. ರಾತ್ರಿ 10 ಗಂಟೆಗೆ ನೃತ್ಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

12 ರಂದು ಬೆಳಗ್ಗೆಯಿಂದ ದ್ಯಾಮವ್ವ, ದುರ್ಗಮ್ಮ, ಉಡಚಮ್ಮ, ಗಾಳಿ ದುರ್ಗಮ್ಮ, ಸೀಮಿ ದ್ಯಾಮವ್ವ ದೇವಸ್ಥಾನಗಳಲ್ಲಿ ಹೋಮ-ಹವನ ಹಾಗೂ ಧಾರ್ಮಿಕ ವಿಧಿ-ವಿಧಾನಗಳು ನಡೆಯಲಿವೆ. ಸಂಜೆ 6 ಗಂಟೆಗೆ ಧರ್ಮಸಭೆ ನಡೆಯಲಿದೆ. ಡಾ|ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಗಣ್ಯರಿಗೆ ಸನ್ಮಾನ ನಡೆಯಲಿದೆ. ರಾತ್ರಿ 10 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

13 ರಂದು ಬೆಳಗ್ಗೆ ಜಗದ್ಗುರುಗಳ ಸಾನ್ನಿಧ್ಯದಲ್ಲಿ ದೇವತೆಗಳ ಪ್ರಾಣ ಪ್ರತಿಷ್ಠಾಪನಾ ಹೋಮ-ಹವನ, ಮಹಾಭಿಷೇಕ, ಗ್ರಾಮದೇವತೆಯರ ವಿವಾಹ ಕಾರ್ಯ, ಉಡಿ ತುಂಬುವ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಮೂರುಸಾವಿರ ಮಠದ ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಮಾಜಿ ಸಚಿವರಾದ ಸಂತೋಷ ಲಾಡ್‌, ಕೆ.ಎನ್‌. ಗಡ್ಡಿ, ವಿಧಾನ ಪರಿಷತ್ತು ಮಾಜಿ ಸದಸ್ಯ ನಾಗರಾಜ ಛಬ್ಬಿ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 10 ಗಂಟೆಗೆ ಇಂದುಮತಿ ಸಾಲಿಮಠ, ಮಲ್ಲಪ್ಪ ಹೊಂಗಲ, ಶರಣು ಯಮನೂರ, ಬಸಯ್ಯ, ದೇವು, ಕುಮಾರ ಸಂಜು ಅವರಿಂದ ಹಾಸ್ಯ ಸಂಜೆ ನಡೆಯಲಿದೆ.

ಮೇ 14 ರಂದು ಸಂಜೆ 6 ಗಂಟೆಗೆ ಹುಬ್ಬಳ್ಳಿ ಮೆಲೋಡಿಸ್‌ ಆರ್ಕೆಸ್ಟ್ರಾದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಜು ಶಾನವಾಡ, ಎಂ.ವಿ. ಹೈದರ್‌, ಹನುಮಪ್ಪಗೌಡ ಬೆಂಗೇರಿ, ಮಂಜು, ತುಳುಜಪ್ಪ ಹುಲಕೋಟಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next