ಹೋಟೆಲ್‌ಗಳಲ್ಲಿ ಊಟ ಮಾಡಿದ ಬಳಿಕ ಜೀರಿಗೆಯಂಥ ಸೋಂಪು ಕಾಳುಗಳನ್ನು ಬಾಯಿಗೆ ಹಾಕಿಕೊಂಡು ಸಿಹಿಮಿಶ್ರಿತವಾದ ಅದರ ರುಚಿಗೆ, ಬಾಯ್ತುಂಬ ಹರಡುವ ಸುಗಂಧಕ್ಕೆ ಮಾರು ಹೋದವರಿಗೆ ಇದು ಅಪರಿಚಿತ ಹೆಸರೇನೂ ಅಲ್ಲ. ಇದನ್ನು ಬೆಳೆದರೆ ಎಷ್ಟೆಲ್ಲಾ ಲಾಭ ಸಿಗುತ್ತದೆ ಅನ್ನೋದಕ್ಕೆ ಇಲ್ಲಿದೆ ನೋಡಿ ಉದಾಹರಣೆ.
ಮಂಗಳೂರಿನ ಮರೊಳಿಯ ಮೀನಾಕ್ಷೀ ಕೆ. ಗೌಡ ಅವರು ಆರೋಗ್ಯ ಇಲಾಖೆಯ ಉದ್ಯೋಗಿ. ಬಿಡುವಿನಲ್ಲಿ ವೈವಿಧ್ಯಮಯ ಗಿಡಗಳನ್ನು ಬೆಳೆಯುವುದು ಅವರ ಹವ್ಯಾಸ. ಗೋಣಿಚೀಲಗಳೊಳಗೆ ಸುಡುಮಣ್ಣು ತುಂಬಿಸಿ, ತಾರಸಿಯ ಮೇಲಿರಿಸಿ ಜೋಳ, ಕಬ್ಬು, ತರಕಾರಿಗಳು, ಹೂಗಳ ಗಿಡಗಳು ಇದನ್ನೆಲ್ಲ ಸ್ವಸಂತೋಷಕ್ಕಾಗಿ ಬೆಳೆಯುತ್ತಿದ್ದಾರೆ. ಈಗ ಅವರು ದಕ್ಷಿಣ ಭಾರತದಲ್ಲಿ ಅಪರೂಪವಾಗಿರುವ ಸೋಂಪು ಅಥವಾ ಬಡೇಸೋಪ್ ಗಿಡಗಳನ್ನು ಬೆಳೆದಿದ್ದಾರೆ. ಕರಾವಳಿಯಲ್ಲಿ ಇದರ ಕೃಷಿ ಸಾಧ್ಯ ಎಂದು ತಿಳಿಸುವ ಮೂಲಕ ಆಸಕ್ತ ರೈತರಿಗೆ ಒಳ್ಳೆಯ ಸಂದೇಶ ನೀಡುತ್ತಿದ್ದಾರೆ.
ಹೋಟೆಲ್‌ಗಳಲ್ಲಿ ಊಟ ಮಾಡಿದ ಬಳಿಕ ಜೀರಿಗೆಯಂಥ ಸೋಂಪು ಕಾಳುಗಳನ್ನು ಬಾಯಿಗೆ ಹಾಕಿಕೊಂಡು ಸಿಹಿಮಿಶ್ರಿತವಾದ ಅದರ ರುಚಿಗೆ, ಬಾಯ್ತುಂಬ ಹರಡುವ ಸುಗಂಧಕ್ಕೆ ಮಾರು ಹೋದವರಿಗೆ ಇದು ಅಪರಿಚಿತ ಹೆಸರೇನೂ ಅಲ್ಲ. ವೈಜ್ಞಾನಿಕವಾಗಿ ಫೋನಿಕ್ಯುಲಮ್ ಕುಟುಂಬಕ್ಕೆ ಸೇರಿದ ಈ ಸಸ್ಯಕ್ಕೆ, ಕಡಲಿನ ತೀರದ ಒಣಮಣ್ಣು ತುಂಬ ಇಷ್ಟವಾಗುತ್ತದೆ ಎನ್ನುತ್ತಾರೆ ಮೀನಾಕ್ಷೀ ಗೌಡ. ಗಿಡ ಒಂದು ವರ್ಷ ಬದುಕುತ್ತದೆ. ಎಂಟು ಅಡಿಗಳ ವರೆಗೆ ಎತ್ತರವಾಗುತ್ತದೆ. ಸಬ್ಬಸಿಗೆಯಂತಿರುವ ಎಲೆ ಒಂದೂವರೆ ಅಡಿ ಉದ್ದವಾಗುತ್ತದೆ. ಹೂಗಳಿರುವ ಕೊಂಬೆಗಳು ಅರ್ಧ ಅಡಿ ಉದ್ದವಿರುತ್ತವೆ.
ಮೇ-ಜೂನ್ ತಿಂಗಳಲ್ಲಿ ಸೋಂಪಿನ ಬೀಜಗಳನ್ನು ಬಿತ್ತಿ, ಪ್ರತ್ಯೇಕವಾಗಿ ಗಿಡ ತಯಾರಿಸಬೇಕು. ಇಪ್ಪತ್ತು ದಿನದ ಗಿಡವನ್ನು, ಫಲವತ್ತಾದ ಮಣ್ಣು ತುಂಬಿಸಿದ ಚೀಲದಲ್ಲಿ ನೆಡಬೇಕು. ಇದರ ಕೃಷಿಗೆ ಬುಡದಲ್ಲಿ ತಂಪು ಬೇಕು, ಮೇಲ್ಭಾಗದಲ್ಲಿ ಬಿಸಿಲಿರಬೇಕು. ಹೀಗಾಗಿ ಮಳೆ ಕಡಿಮೆ ಬೀಳುವಂತೆ ಚಾವಣಿಯ ನೆರಳಿನಲ್ಲಿದ್ದರೆ ಸೂಕ್ತವಾಗುತ್ತದೆ. ಕಪ್ಪು ಮಣ್ಣು, ಸುಣ್ಣದ ಅಂಶವಿರುವ ಮಣ್ಣು ಹೆಚ್ಚು ಇಷ್ಟ. ಅಧಿಕ ಆಳವಿರದ, ಮರಳಿಲ್ಲದ ಮಣ್ಣು ಅಗತ್ಯ.
ಸಗಣಿ, ಬೂದಿ, ಸುಡುಮಣ್ಣಿನಂಥ ಸಾವಯವದಲ್ಲೇ ಬೆಳೆಯಬಹುದು. ಗಿಡ ನೆಟ್ಟು 180 ದಿನಗಳಲ್ಲಿ ಕೊಯ್ಲಿಗೆ ಆರಂಭವಾಗುತ್ತದೆ. ಸಣ್ಣ ಕೊಂಬೆಗಳಲ್ಲಿ ಗೊಂಚಲಾಗಿ ಅರಳುವ ಅಚ್ಚ ಹಳದಿಯಾದ ಹೂಗಳು ಪತಂಗಗಳಿಗೆ ತುಂಬ ಪ್ರಿಯವಾಗುತ್ತವೆ ಎಂದು ವರ್ಣಿಸುತ್ತಾರೆ ಮೀನಾಕ್ಷೀ ಗೌಡ. ಒಂದು ಗಿಡದಲ್ಲಿ25ರ ತನಕ ಹೂಗೊಂಚಲುಗಳಿರುತ್ತವೆಯಂತೆ. ಬೀಜಗಳು ಯಾವ ಕೊಂಬೆಯಲ್ಲಿ ಕಂದು ವರ್ಣಕ್ಕೆ ತಿರುಗಿವೆ? ಎಂದು ನೋಡಿ ಕೊಯ್ಲು ಮಾಡಬೇಕು. ಹತ್ತು ದಿನಕ್ಕೊಮ್ಮೆ ಕೊಯ್ಯಬಹುದು. ಹೀಗೆ ಕೊಯಾÉದ ಕೊಂಬೆಯನ್ನು ಬಿಸಿಲಿನಲ್ಲಿ ಎರಡು ದಿನ, ನೆರಳಿನಲ್ಲಿ ಎಂಟು ದಿನ ಒಣಗಿಸಿ ಬಡಿದರೆ ಕಾಳುಗಳು ಉದುರುತ್ತವೆ. ಇದು ಬಳಕೆಗೆ ಸಿದ್ಧವಾಗಿದ್ದು ಸುವಾಸನೆಯಿಂದ ಸೆಳೆಯುತ್ತದೆ. ಇದರಲ್ಲಿ ಹಸಿರು ಮಿಶ್ರಿತವಾದುದನ್ನು ವರ್ಗೀಕರಿಸಿದರೆ ಅದಕ್ಕೆ ಬೆಲೆ ಹೆಚ್ಚು ಸಿಗುವುದಂತೆ. ಸೋಂಪಿನ ಎಲೆ ಮತ್ತು ಕಾಂಡಗಳನ್ನು ತರಕಾರಿಯಂತೆ ಹಸಿ ಅಥವಾ ಬೇಯಿಸಿ ಸಾಸ್, ಸಲಾಡ್, ಮೀನಿನ ಸಾಸ್ ಮುಂತಾದ ಹಲವು ಖಾದ್ಯಗಳಿಗೆ ಬಳಸಬಹುದು.
ಬೀಜದಲ್ಲಿ ಇರುವ ಅನಾತೊಲ್ ಅದರ ಘಮಘಮಿಸುವ ಕಂಪಿಗೆ ಕಾರಣ. ನೂರು ಗ್ರಾಮ್ ಬೀಜದಲ್ಲಿ 345 ಕ್ಯಾಲೊರಿಗಳಿವೆ. ಪ್ರೋಟೀನ್, ಜೀರ್ಣಕಾರಿ ನಾರು, ಬಿ ಜೀವಸಣ್ತೀ, ಸುಣ್ಣ, ಕಬ್ಬಿಣ, ಮೆಗ್ನಿಷಿಯಮ್, ಮ್ಯಾಂಗನೀಸ್, ಕೊಬ್ಬು, ಕಾರ್ಬೋಹೈಡ್ರೇಟ್ಸ್ ಮೊದಲಾದ ಹೇರಳ ಪೋಷಕಾಂಶಗಳಿವೆ. ಮಸಾಲೆ ಮತ್ತು ಸಿಹಿ ತಿಂಡಿಗಳಿಗೆ ಇದರ ಬಳಕೆ ಇದೆ. ಟೂತ್ ಪೇಸ್ಟ್ ತಯಾರಿಕೆಗೂ ಉಪಯೋಗಿಸುತ್ತಾರೆ. ಅದರ ಕಷಾಯ ಹಲವು ವ್ಯಾಧಿಗಳಿಗೆ ಔಷಧವಾಗುತ್ತದೆ.
ವಾಯುದೋಷ, ಮೂತ್ರ ಜನಕಾಂಗದ ಸಮಸ್ಯೆಗಳು, ರಕ್ತದೊತ್ತಡ ಶಮನಕ್ಕೆ ಸೋಂಪು ಬಳಸಬಹುದು. ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಗ್ಲೂಕೋಮಾ ಗುಣಪಡಿಸುತ್ತದೆ. ಹಸಿವನ್ನು ನಿಯಂತ್ರಿಸುತ್ತದೆ. ಬಾಣಂತಿಯರಿಗೆ ಎದೆಹಾಲು ವರ್ಧಿಸುತ್ತದೆ.
ಸೋಂಪಿನಲ್ಲಿ ಗುಜರಾತ್ ಫೆನ್ನೆಲ್, ಸಹಾ, ಆರ್‌ಎಫ್ ಮುಂತಾದ ತಳಿಗಳಿವೆ. ಜಗತ್ತಿನಲ್ಲೇ ಇದರ ಪ್ರಮುಖ ಕೃಷಿಯ ದೇಶ ಭಾರತವೇ. ಬೆಳೆಗೆ ಕಳೆ ಮತ್ತು ಕೀಟಗಳ ಹಾವಳಿ ಅಧಿಕ. ಎಚ್ಚರಿಕೆಯಿಂದ ನಿಯಂತ್ರಿಸಬೇಕು ಎನ್ನುವ ಮೀನಾಕ್ಷಿ$ ಗೌಡರ ಸಾವಯವ ಕೀಟನಾಶಕ ಈ ಸಮಸ್ಯೆ ನಿವಾರಿಸಿದೆಯಂತೆ. ಅವರ ಕೃಷಿಯ ಹವ್ಯಾಸ ಸೋಂಪು ಬೆಳೆಯುವ ಆಸಕ್ತರಿಗೆ ಮಾರ್ಗದರ್ಶಕವೂ ಹೌದು. ಇವರ ಕೃಷಿ ಸಾಧನೆಗೆ ಮಗ ಅಮೋದ್‌ಕುಮಾರ್, ಮಗಳು ಗಹನ, ಪತಿ ಕೃಷ್ಣಪ್ಪ ಗೌಡರ ಸಹಕಾರ ಸಾಕಷ್ಟಿದೆ ಎಂದು ಹೇಳುತ್ತಾರೆ.
ಪ. ರಾಮಕೃಷ್ಣ ಶಾಸ್ತ್ರೀ