ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿ ಸ್ತ್ರೀವಾದಿ ಚಿಂತನೆ ಪ್ರಬಲವಾಗಿದೆ ಎಂದು ಕುವೆಂಪು ಭಾಷಾಭಾರತಿ ಮಾಜಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಹೇಳಿದರು. ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಬುಧವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋ ಜಿಸಿದ್ದ ಪ್ರೊ.ಕಿ.ರಂ.ನಾಗರಾಜ ಸಂಸ್ಕೃತಿ ಪ್ರಶಸ್ತಿ ಪ್ರದಾನ ಮತ್ತು ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಮುಖ್ಯ ಘಟಕವಾದ ಕುಟುಂಬ ರಕ್ಷಣೆಯೇ ಹೆಣ್ಣಿನ ಗುರಿಯಾಗಿದ್ದು, ಸಾಹಿತ್ಯದಲ್ಲಿ ಸ್ತ್ರೀವಾದ ತನ್ನದೇ ಆದ ಛಾಪು ಮೂಡಿಸಿದೆ. ಡಾ. ಎಚ್.ಎಸ್. ಶ್ರೀಮತಿ ಅವರು ಸಹ ಸ್ತ್ರೀವಾದಿ ಚಿಂತನೆಗಳುಳ್ಳ ಸಾಹಿತ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಪ್ರಶಂಸಿಸಿದರು.
ಕಿ.ರಂ.ನಾಗರಾಜ್ ಅವರು ಕಾವ್ಯ ಪ್ರೇಮದ ಜತೆಗೆ ಸಾಂಪ್ರದಾಯಕ ಶಿಸ್ತಿಗೆ ಒಳಪಟ್ಟಿದ್ದರು. ಸಾಹಿತ್ಯ ಪ್ರೇಮದೊಂದಿಗೆ ಅದ್ಭುತ ಲೋಕಜ್ಞಾನ ಹೊಂದಿದ್ದರು. ಆದ್ದರಿಂದ ಅನೇಕರಿಗೆ ಬಹಳ ಹತ್ತಿರವಾಗಿ ದ್ದರು. ಕಿ.ರಂ.ಅವರು ಉಪನ್ಯಾಸವನ್ನು ಕೇವಲ ಉದ್ಯೋಗವಾಗಿ ನೋಡಿರಲಿಲ್ಲ.
ಅವರಲ್ಲಿದ್ದ ಸಾಹಿತ್ಯ ಪ್ರೇಮ ಕಿ.ರಂ.ಅವರನ್ನು ಆರಾಧಿಸುವ ಯುವಕವಿಗಳು, ಬರಹಗಾರರ ಬಳಗ ಹುಟ್ಟಿಕೊಳ್ಳಲು ಕಾರಣವಾಯಿತು ಎಂದು ತಿಳಿಸಿದರು. ಲೇಖಕಿ ಡಾ.ಎಚ್.ಎಸ್. ಶ್ರೀಮತಿ ಅವರು ಮಾತನಾಡಿ, ಕಿ.ರಂ.ಅವರಿಗೆ ಸಂಬಂಧಗಳ ಬಗ್ಗೆ ಅದರಲ್ಲೂ ಹೆಣ್ಣು ಮಕ್ಕಳ ಕುರಿತು ವಿಶೇಷ ಗೌರವವಿತ್ತು. ಅವರ ಹೆಸರಿನ ಪ್ರಶಸ್ತಿಗೆ ನಾನು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.
ಇದೇ ವೇಳೆ ಲೇಖಕಿ ಡಾ.ಎಚ್.ಎಸ್. ಶ್ರೀಮತಿ ಅವರಿಗೆ ಪ್ರೊ.ಕಿ.ರಂ.ನಾಗರಾಜ ಸಂಸ್ಕೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಕೆ.ಸಿ. ಶಿವಾರೆಡ್ಡಿ, ಪ್ರಜ್ಞಾ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.