Advertisement
ಇತ್ತೀಚೆಗೆ ಕೆಲವರು ಜನವರಿ ಒಂದು ನಮ್ಮ ಹಬ್ಬವಲ್ಲ , ಅದನ್ನು ಆಚರಿಸಬಾರದು ಎಂದು ಹುಕುಂ ಹೊರಡಿಸುತ್ತಿರುವುದರ ಬಗ್ಗೆ ನನಗೆ ಸಹಮತವಿಲ್ಲ. ಏಕೆಂದರೆ, ನಾವು ಪಂಚಾಂಗವನ್ನೂ ಕ್ಯಾಲೆಂಡರನ್ನೂ ಹಿಂದಕ್ಕೆ ತಿರುಗಿಸಲಾಗುವುದಿಲ್ಲ. ಜಗತ್ತು ಬಹಳ ಬದಲಾಗಿಬಿಟ್ಟಿದೆ. ಕಾಲ ಬದಲಾಗಿದೆ. ಜನಜೀವನ ಬದಲಾಗಿದೆ. ಹಳೆಯ ಪಳೆಯುಳಿಕೆಗಳು ಇನ್ನೂ ಇದ್ದರೂ ಅವು ಕೇವಲ ಪಳೆಯುಳಿಕೆಗಳಾಗಿ ಇವೆಯೇ ಹೊರತು ಅವುಗಳನ್ನು ಮತ್ತೆ ಜೀವಂತಿಕೆಯ ಜೀವನಕ್ಕೆ ಒಗ್ಗಿಸಿಕೊಳ್ಳುವುದು ಅಸಂಗತ. ಹಠ ಮಾಡಿ ಪಳೆಯುಳಿಕೆಗಳೇ ನಮ್ಮ ಬದುಕು ಎಂದು ಸಾಧಿಸಲು ಹೊರಟರೆ ಅದರಿಂದ ಅವನತಿಯೇ ಹೊರತು ಪ್ರಗತಿ ಆಗುವುದಿಲ್ಲ. ಅದುದರಿಂದ ಹೊಸ ಕ್ಯಾಲೆಂಡರನ್ನು ಕೇವಲ ಕ್ರಿಶ್ಚಿಯನ್ ಕ್ಯಾಲೆಂಡರ್ ಎಂದು ಮಾತ್ರ ನೋಡದೆ ಅದು ಆಧುನಿಕ ಜಗತ್ತಿನ ಜಾಗತಿಕ ಮಾಪಕ ಎಂದು ಪರಿಗಣಿಸಿ ಮುಂದುವರಿಯುವುದು ಒಳ್ಳೆಯ ಲಕ್ಷಣ. ಇಡೀ ಪ್ರಪಂಚ ಒಪ್ಪಿಕೊಂಡ ಕ್ಯಾಲೆಂಡರನ್ನು ಬಿಟ್ಟು ನಾವು ಮತ್ತೆ ಹಳೆಯ ಹಾಗೂ ಕೆಲವು ನಿರ್ದಿಷ್ಟ ಸಮುದಾಯದವರು ಮಾತ್ರ ಒಪ್ಪಿಕೊಳ್ಳುವ ಪಂಚಾಂಗವನ್ನೇ ನಂಬಿ ನಡೆದುಕೊಳ್ಳುತ್ತೇವೆ ಎಂದು ಹೊರಟರೆ ಅದರಿಂದ ಸಮಷ್ಟಿ ಸಮಾಜಕ್ಕೆ ತೊಂದರೆಯೇ.
ಇನ್ನು ಪ್ರತಿ ವರ್ಷ ಪ್ರಾರಂಭವಾದಾಗ ಹಳೆಯ ವರ್ಷದ ನೆನಪುಗಳು ಹೊಸ ವರ್ಷದ ಭರವಸೆಗಳನ್ನು ಒಟ್ಟಿಗೇ ಪುನರಾವಲೋಕಿಸುವುದು ಸಹಜ. 2017 ಅನೇಕ ದುರಂತಗಳನ್ನು ತಂದಿತು, ಜೊತೆಗೆ ಸಂತಸಗಳನ್ನೂ ಕೊಟ್ಟಿತು. ಬರುವ ವರ್ಷ ಇದಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ. ಆದರೂ ನಾವು ಈ ವರ್ಷ ಇನ್ನಷ್ಟು ಚೆನ್ನಾಗಿರಲಿ, ಇನ್ನಷ್ಟು ಲಾಭ ತರಲಿ, ಸಂತಸ ಹೆಚ್ಚಲಿ, ಪ್ರಗತಿಯಾಗಲಿ ಎಂದೆಲ್ಲ ಆಶಿಸುತ್ತೇವೆ. ಅದೇ ನಮ್ಮ ಬದುಕಿನ ರಸ ಗಳಿಗೆಗೆ ಕಾರಣ. ಸ್ವಸ್ತಿ ವಾಚನದಲ್ಲಿ ಹೇಳುವಂತೆ, ಲೋಕಾ ಸಮಸ್ತಾ ಸುಖೀನೋ ಭವಂತು ಕಾಲೇ ವರ್ಷತು ಪರ್ಜನ್ಯಃ ಪೃಥುವಿ ಸಸ್ಯಶಾಲಿನೀ ದೇಶೋಯಂ ಕ್ಷೊàಭ ರಹಿತಃ ಎಂದು ಆಶಿಸೋಣ. ದಿನನಿತ್ಯದ ಗೋಳು ಹಿಂಸೆ ಕಡಿಮೆಯಾಗಲಿ. ಹೆಣ್ಣುಗಳು ಸುರಕ್ಷಿತವಾಗಿರಲಿ.