Advertisement

ಮಡಿಲು ತುಂಬಿ ವಿಶಿಷ್ಟವಾಗಿ ಮಹಿಳಾ ದಿನಾಚರಣೆ

12:39 PM Mar 09, 2018 | |

ಚನ್ನಪಟ್ಟಣ: ದೇವತೆಯ ಮತ್ತೂಂದು ರೂಪವೇ ಹೆಣ್ಣು.ಈ ಸೃಷ್ಟಿಯಲ್ಲಿ ಹೆಣ್ಣಿಗೆ  ವಿಶೇಷ ಸ್ಥಾನಮಾನವಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ಎಲ್‌.ರಮೇಶ್‌ಗೌಡ ಅಭಿಪ್ರಾಯಪಟ್ಟರು.

Advertisement

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಗುರುವಾರ ಪಟ್ಟಣದ ಕಾವೇರಿ ಸರ್ಕಲ್‌ ಬಳಿ ಹಮ್ಮಿಕೊಂಡಿದ್ದ  ಮಹಿಳೆಯರಿಗೆ ಮಡಿಲು ತುಂಬುವ ಕಾರ್ಯಕ್ರಮ ಹಾಗೂ ಮಹಿಳಾ ದೌರ್ಜನ್ಯ ತಡೆ ಸಂಕಲ್ಪ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಹೆಣ್ಣನ್ನು ಭಾರತಾಂಬೆ, ಭುವನೇಶ್ವರಿ, ರಾಜರಾಜೇಶ್ವರಿ, ಅನ್ನಪೂರ್ಣೇಶ್ವರಿ, ಚಾಮುಂಡೇಶ್ವರಿ, ವನದೇವತೆ ಹೀಗೆ ನಾನಾ ಹೆಸರುಗಳಿಂದ ಕರೆಯುತ್ತಿದ್ದು, ಹೆಣ್ಣು ಈ ಜಗದ ಕಣ್ಣು ಎನ್ನುತ್ತಾರೆ. ಸಮಾಜದಲ್ಲಿ ಮಹಿಳೆಯ ಪಾತ್ರ ಅನನ್ಯ. ತಾಯಿ, ತಂಗಿ, ಮಡದಿಯಾಗಿ, ಸಕಲ ರಾಶಿಗಳ ಅಧಿದೇವತೆಯಾಗಿ ಹೆಣ್ಣು ಪ್ರಥಮ ಸ್ಥಾನ ಗಳಿಸಿದ್ದಾಳೆ. ಆಕೆಗೆ ಅವಕಾಶ ನೀಡಿದರೆ ಅದ್ಭುತ ಸಾಧನೆ ಮಾಡುವ ಮನಸ್ಸುಳ್ಳವಳಾಗಿದ್ದಾಳೆಂದು ತಿಳಿಸಿದರು.

ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುವ ಪರಿ ಬದಲಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.

ಹೆಣ್ಣು ಅಬಲೆಯಲ್ಲ: ಇಂದಿನ ಸಮಾಜದಲ್ಲಿ ಹೆಣ್ಣು ಅಬಲೆಯಲ್ಲ. ಹೆಣ್ಣು ಪ್ರತಿಯೊಂದು ಕ್ಷೇತ್ರಗಳಲ್ಲೂ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸುತ್ತಲೇ ಬಂದಿದ್ದಾಳೆ. ಆಟೋ ಚಾಲನೆಯಿಂದ  ಬಾಹ್ಯಾಕಾಶದವರೆಗೂ ತನ್ನ ಸಾಧನೆಯನ್ನು ವಿಸ್ತರಿಸಿದ್ದಾಳೆ. ಆದ್ದರಿಂದ ಹೆಣ್ಣನ್ನು ಎಂದಿಗೂ ಕಡೆಗಣಿಸದೆ ಆಕೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಮೇಶ್‌ಗೌಡ ಹೇಳಿದರು.

Advertisement

ಕಠಿಣ ಶಿಕ್ಷೆ ಜಾರಿಯಾಗಲಿ: ಇತ್ತೀಚಿಗೆ ಮಹಿಳೆಯರ ಮೇಲೆ ಲೆ„ಂಗಿಕ ಕಿರುಕುಳಗಳು, ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಅತ್ಯಾಚಾರಿಗಳಿಗೆ ಪುರುಷತ್ವಹರಣ ಮಾಡುವ ಕಾನೂನನ್ನು ಸರ್ಕಾರದಿಂದ ಜಾರಿಗೊಳಿಸಬೇಕು. ಆಗಷ್ಟೇ ಮಹಿಳೆಯರಿಗೆ ಗೌರವ ನೀಡಿದಂತಾಗುತ್ತದೆ. ಆದ್ದರಿಂದ ಕಾನೂನಿನಡಿಯಲ್ಲಿ ಮಹಿಳಾ ಪರವಾಗಿ ಕಠಿಣ ಕ್ರಮಗಳು ಜಾರಿಯಾಗಬೇಕು ಎಂದು ರಮೇಶ್‌ಗೌಡ ಆಗ್ರಹಿಸಿದರು.

ಮಡಿಲು ತುಂಬಿ ಸನ್ಮಾನ: ಸಮಾಜಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ಅದೆಷ್ಟೊ ಮಹಿಳೆಯರು ಮುಖ್ಯವಾಹಿನಿಗೆ ಬಾರದೆ ತೆರೆಯಿಂದಿದ್ದಾರೆ. ಅಂತಹ ಮಹಿಳೆಯರನ್ನು ಗುರುತಿಸುವ ಮೂಲಕ ಇಂದು ವಿಶೇಷವಾಗಿ ಮಹಿಳಾ ದಿನವನ್ನು ಆಚರಣೆ ಮಾಡಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಸಮಾಜಮುಖೀ ಕೆಲಸಗಳನ್ನು ಮಾಡಿರುವ ಮಹಿಳಾ ಮಣಿಗಳಿಗೆ ಸೀರೆ, ಬಳೆ, ಅರಿಶಿಣ, ಕುಂಕುಮ ಕೊಟ್ಟು ಮಡಿಲು ತುಂಬುವ ಮೂಲಕ ವಿಶೇಷವಾಗಿ ಸನ್ಮಾನಿಸಲಾಯಿತು. ಪುರುಷ ಪ್ರಧಾನವಾಗಿ ಮಾರ್ಪಟ್ಟಿರುವ ಈ ಸಮಾಜದಲ್ಲಿ ಇಂದು ಮಹಿಳೆಯರಿಗೆ ಈ ರೀತಿಯ ಗೌರವ ಸೂಚಿಸುತ್ತಿರುವುದಕ್ಕೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನಿತರು: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಉಪನ್ಯಾಸಕಿ ಬಿ.ಟಿ.ನೇತ್ರಾವತಿಗೌಡ, ಸಮಾಜ ಸೇವಕಿ ರಾಧಿಕಾ, ಅಂತಾರಾಷ್ಟ್ರೀಯ ಯೋಗಾಪಟು ಗೀತಾ, ನಗರಸಭಾ ಅಧ್ಯಕ್ಷೆ  ನಜ್ಮುನ್ನೀಸಾ, ಜಿಪಂ ಸದಸ್ಯೆ ವೀಣಾ, ಮಾಜಿ ಅಧ್ಯಕ್ಷೆ ರಾಧಮ್ಮ, ವೈದ್ಯೆ ಡಾ.ಅಭಿನಂದಿನಿ, ಕವಿಯತ್ರಿ ಕೃಷ್ಣಮ್ಮ, ಹೋರಾಟಗಾರ್ತಿ ಮಂಗಳಮ್ಮ,

ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪೂರ್ಣಿಮಾ,  ಕಾರು ಚಾಲಕಿ ನೀಲಸಂದ್ರ ಸುಕನ್ಯ, ಪತ್ರಕರ್ತೆ ವೀಣಾ, ಶಿಕ್ಷಕಿ ಪೂರ್ಣಿಮಾ, ಪೌರಕಾರ್ಮಿಕೆ ವೆಂಕಟಮ್ಮ, ಗೃಹಿಣಿ ಚಂಪಕಮಾಲಿನಿ, ರೈತ ಮಹಿಳೆಯರಾದ ಚನ್ನಮ್ಮ, ಚೌಡಮ್ಮ, ಮಹದೇವಮ್ಮ, ಪದ್ಮಮ್ಮ, ಹೋರಾಟಗಾರ್ತಿರಾದ ರಾಜಮ್ಮ, ವಿರುಪಸಂದ್ರ ಮಂಗಳಮ್ಮ, ವೈದ್ಯ ಡಾ.ಪ್ರಮೀಳಾ, ಹೈನುಗಾರಿಕೆ ಗಿರಿಜಾ ಎಲೆಕೇರಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯ ಜಿಲ್ಲಾಧ್ಯಕ್ಷ ಬಿ.ಸಿ.ಯೋಗೇಶ್‌ಗೌಡ, ಜೆಡಿಎಸ್‌ ಮುಖಂಡ ರಾಂಪುರ ಮಲ್ಲೇಶ್‌, ನಾಗವಾರ ರಂಗಸ್ವಾಮಿ, ಕಾಂಗ್ರೆಸ್‌ ಮುಖಂಡ ಸಿ.ವಿ.ಚಂದ್ರಸಾಗರ್‌, ಹಿರಿಯ ಫಾರ್ಮಸಿಸ್ಟ್‌ ವೇದಮೂರ್ತಿ, ಮದ್ದೂರೇಗೌಡ, ಆಣಿಗೆರೆ ಸಿದ್ದರಾಜು, ಕೃಷ್ಣೇಗೌಡ ಜಗದಾಪುರ,  ಮಹದೇವಸ್ವಾಮಿ, ಆರ್‌.ಶಂಕರ್‌, ಟೆಂಪೋ ರಾಜೇಶ್‌, ಭಾಸ್ಕರ್‌, ಚೇತನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next