ಮುಂಬಯಿ : ಏರಿಂಡಿಯಾ ವಿಮಾನದ 53ರ ಹರೆಯದ ಗಗನಸಖಿ ಇಂದು ಇಲ್ಲಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮನಕ್ಕೆ ಸಿದ್ಧವಾಗಿ ನಿಂತಿದ್ದ ಏರಿಂಡಿಯಾ ವಿಮಾನದಿಂದ ಕೆಳ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಏರಿಂಡಿಯಾ ದ ಈ ವಿಮಾನ (ಹಾರಾಟ ಸಂಖ್ಯೆ ಎಐ 864) ದಿಲ್ಲಿಗೆ ಹಾರಲು ಸಿದ್ಧವಾಗಿ ನಿಂತಿದ್ದಾಗ ಈ ದುರ್ಘಟನೆ ನಡೆದಿದೆ. ಇದೊಂದು ದುರದೃಷ್ಟಕರ ಘಟನೆ ಎಂದು ಪ್ರತಿಕ್ರಿಯಿಸಿರುವ ಏರಿಂಡಿಯಾ, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದೆ.
ಬೋಯಿಂಗ್ 777 ವಿಮಾನದ ಬಾಗಿಲನ್ನು ಮುಚ್ಚುವ ವೇಳೆ ಹರ್ಷಾ ಲೋಬೋ ಎಂಬ ಗಗನ ಪರಿಚಾರಿಕೆಯು ಆಕಸ್ಮಿಕವಾಗಿ ಟಾರ್‌ಮ್ಯಾಕ್ ಮೇಲೆ ಬಿದ್ದಳು ಎಂದು ಏರಿಂಡಿಯಾ ಪ್ರಕಟನೆ ತಿಳಿಸಿದೆ.
ಕಾಲಿಗೆ ಗಾಯವಾಗಿರುವ ಹರ್ಷಾ ಲೋಬೋ ಅವರನ್ನು ಒಡನೆಯೇ ನಾನಾವತಿ ಆಸ್ಪತ್ರೆಗೆ ಒಯ್ದು ಅಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಏರಿಂಡಿಯಾ ಹೇಳಿದೆ.
ಮೂರು ವರ್ಷಗಳ ಹಿಂದೆ ಏರಿಂಡಿಯಾ ವಿಮಾನವೊಂದರ ಪೈಟಲ್ ಸಿಗ್ನಲ್ ಒಂದನ್ನು ತಪ್ಪಾಗಿ ಪರಿಭಾವಿಸಿ ಇಂಜಿನ್ ಸ್ಟಾರ್ಟ್ ಮಾಡಿದ ಕಾರಣ ಏರಿಂಡಿಯಾ ಇಂಜಿನಿಯರ್ ಒಬ್ಬರು ವಿಮಾನದ ಇಂಜಿನ್ ಒಳಗೆ ಸೆಳೆಯಲ್ಪಟ್ಟಿದ್ದರು.