ಯಳಂದೂರು: ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ 35 ವರ್ಷದ ಹೆಣ್ಣಾನೆ ಸ್ವಾಭಾವಿಕವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಬಿಆರ್ ಟಿ ಅರಣ್ಯ ಪ್ರದೇಶದ ಬೈಲೂರು ವನ್ಯಜೀವಿ ವಲಯದ ಪಿ.ಜಿ. ಪಾಳ್ಯ ಶಾಖೆಯ ಮಾವತ್ತೂರು “ಬಿ” ಗಸ್ತಿನ ಸಿಬ್ಬಂದಿಯವರು ದೈನಂದಿನ ಗಸ್ತು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಇದು ಕಳೇಬರ ಕಂಡಿದೆ.
ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ, ದೊಡ್ಡಸಂಪಿಗೆ ಮೀಸಲು ಅರಣ್ಯದ ಸ್ಥಳೀಯವಾಗಿ ಕರೆಯಲ್ಪಡುವ ಮಂದಲಗೆರೆ ಅರಣ್ಯ ಪ್ರದೇಶಕ್ಕೆ ಇದು ಸೇರಿರುವ ಪ್ರದೇಶವಾಗಿದೆ.
ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕಿ ದೀಪ್ ಜೆ.ಕಂಟ್ರಾಕ್ಟರ್ ಮಾರ್ಗದರ್ಶನದ ಅನ್ವಯ ಸೋಮವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದಗೋಪಾಲ್, ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಇವರ ಸಮಕ್ಷಮದಲ್ಲಿ, ವಲಯ ಅರಣ್ಯಾಧಿಕಾರಿ ಬೈಲೂರು ವನ್ಯಜೀವಿ ವಲಯ ಹಾಗೂ ಸಿಬ್ಬಂದಿಯವರು ಮತ್ತು ಪಶು ವೈದ್ಯಾಧಿಕಾರಿ ಡಾ. ಶಿವರಾಜು ಇವರಿಂದ ಮೃತ ಹೆಣ್ಣು ಕಾಡಾನೆಯ ಮರಣೋತ್ತರ ಪರೀಕ್ಷೆಯನ್ನು ಕೈಗೊಂಡ ಬಳಿಕ ಸ್ವಾಭಾವಿಕವಾಗಿ ಹೆಣ್ಣು ಕಾಡಾನೆ ಮೃತಪಟ್ಟಿರುವುದೆಂದು ಖಚಿತಪಡಿಸಿಕೊಳ್ಳಲಾಯಿತು.
ಅರಣ್ಯ ಇಲಾಖೆಯ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.