ಚಿಂಚೋಳಿ: 15 ಸಾವಿರ ರೂ.ಗೆ ಮಾರಾಟವಾಗಿದ್ದ ಹೆಣ್ಣು ಶಿಶುವನ್ನು ಪೊಲೀಸರು ಮತ್ತು ಇತರ ಅಧಿಕಾರಿಗಳು ವಾಪಾಸ್ ಪಡೆದ ಘಟನೆ ನಡೆದಿದೆ. ಚಂದು ನಾಯಕ ತಾಂಡಾದಲ್ಲಿ ರಾಮಚಂದ್ರ ಸಕ್ರು ಅನಸೂಯಾ ದಂಪತಿ ಹೊಟ್ಟೆಪಾಡಿಗಾಗಿ ಒಂದು ತಿಂಗಳ ಹೆಣ್ಣು ಹಸುಗೂಸನ್ನು ಆಶಾ ಕಾರ್ಯಕರ್ತೆಯೊಬ್ಬರ ಮಧ್ಯಸ್ಥಿಕೆಯಲ್ಲಿ ಹೈದರಾಬಾದ ಮೂಲದ ದಂಪತಿಗೆ ಕಳೆದ ಗುರುವಾರ ಮಾರಾಟ ಮಾಡಿದ್ದರು.
ಕಲಬುರಗಿ ಮಕ್ಕಳ ಸಹಾಯವಾಣಿಗೆ ಫೆ.22ರಂದು ಅನಾಮಧೇಯ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ವಿ. ರಾಮನ್, ಜಿಲ್ಲಾಸಂಯೋಜಕ ಬಸವರಾಜ ತೆಂಗಳಿ, ಸುಂದರ, ಚಿಂಚೋಳಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸರೋಜಾರೆಡ್ಡಿ ಚಿಮ್ಮನಚೋಡ, ಕುಂಚಾವರಂ ಪೊಲೀಸರು ಕಾರ್ಯ ಪ್ರವೃತ್ತರಾಗಿ ಶಿಶುವನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾದ್ದಾರೆ.
ಘಟನೆ ವಿವರ: ಚಂದು ನಾಯಕ ತಾಂಡಾದ ರಾಮಚಂದ್ರ ಸಕ್ರು ಎಂಬಾತನಿಗೆ ಮೊದಲ ಪತ್ನಿಯಿಂದ ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ ಅವಳು ಮೃತಪಟ್ಟ ನಂತರ ಅನುಸೂಯಾ ಎಂಬಾಕೆ ಜತೆ ಎರಡನೇ ಮದುವೆಯಾಯಿತು.
ಸುಜಾತಾ(15), ರಹಿತಾ(10), ಸಂಧ್ಯಾ(9), ಶೋಭಾ(7) ಹಾಗೂ ಶ್ರೀಶಾಂತ(5) ಮಕ್ಕಳಿದ್ದಾರೆ. ಈ ನಡುವೆ ಅನುಸೂಯಾ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜ.9ರಂದು ಹೆಣ್ಣು ಶಿಶುವಿಗೆ ಜನ್ಮ ನೀಡಿದಳು. ಮತ್ತೆ ಹೆಣ್ಣು ಹುಟ್ಟಿದೆ ಎಂದು ಆಕೆ ಗಂಡ ರಾಮಚಂದ್ರ ಶಾದೀಪುರದ ಆಶಾ ಕಾರ್ಯಕರ್ತೆ ಸುವರ್ಣಾ ಎಂಬುವರ ಮಧ್ಯೆಸ್ಥಿತಿಕೆಯಿಂದ 15 ಸಾವಿರ ರೂ. ಗೆ ಹೈದ್ರಾಬಾದ ನಗರದ ಟಿ. ಪಾಲ್ ಮತ್ತು ಶಾರದಾ ಎಂಬ ದಂಪತಿಗೆ ಹೆಣ್ಣು ಮಗುವನ್ನು ಮಾರಾಟ ಮಾಡಿದ್ದ.
ಕಲಬುರಗಿ ಮಕ್ಕಳ ಸಹಾಯವಾಣಿಗೆ ಬಂದ ದೂರು ಆಧರಿಸಿ ಅಧಿಕಾರಿಗಳು ಮೊದಲು ಶಾದೀಪುರ ಆಶಾ ಕಾರ್ಯಕರ್ತೆಯನ್ನು ತಮ್ಮ ವಶಕ್ಕೆ ಪಡೆದು ವಿಚಾರಿಸಿದರು. ನಂತರ ತಾಂಡೂರ, ವಿಕಾರಾಬಾದ, ಬಶಿರಾಬಾದಗೆ ಭೇಟಿ ನೀಡಿ ಪರಿಶೀಲಿಸಿದರು. ಖಚಿತ ಮಾಹಿತಿ ಮೇರೆಗೆ ಹೈದ್ರಾಬಾದಿನಲ್ಲಿರುವ ಟಿ.ಪಾಲ್, ಶಾರದ ದಂಪತಿ ಸಂಪರ್ಕಿಸಿದಾಗ ವಿಕಾರಾಬಾದ ಹತ್ತಿರ ಕೆರೋಳಿ ಕ್ರಾಸ್ ಪೊಲೀಸರು ಹೆಣ್ಣು ನವಜಾತ ಶಿಶುವನ್ನು ವಶಕ್ಕೆ ಪಡೆದುಕೊಂಡರು.
ಕುಂಚಾವರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಶಾ ಕಾರ್ಯಕರ್ತೆ ಸುವರ್ಣ, ರಾಮಚಂದ್ರ, ಅನುಸೂಯಾ ಮತ್ತು ಟಿ. ಪಾಲ್, ಶಾರದ ಎಂಬುವರನ್ನು ಶನಿವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಕುಂಚಾವರ ಠಾಣೆ ಎಎಸ್‌ಐ ಮೈನೋದ್ದಿನ್ ತಿಳಿಸಿದ್ದಾರೆ.