Advertisement
ಈ ವೈರಸ್ ಬಾಧಿಸುತ್ತಿರುವ ಪರಿಣಾಮ ಇತ್ತೀಚಿನ ದಿನಗಳಲ್ಲಿ ಬೆಕ್ಕುಗಳು ಆರೋಗ್ಯಯುತವಾಗಿ ಬೆಳೆಯುತ್ತಿಲ್ಲ. ಮರಿ ಹಾಕಿದ ತಾಯಿ ಬೆಕ್ಕುಗಳು ಕೆಲವೇ ದಿನಗಳಲ್ಲಿ ಸಾವನ್ನಪ್ಪುತ್ತಿವೆ. ಇದು ಮರಿ ಬೆಕ್ಕುಗಳ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಉಡುಪಿ ಜಿಲ್ಲೆಯ ಪಾಲಿಕ್ಲಿನಿಕ್‌ನಲ್ಲಿ ಏಳು ತಿಂಗಳುಗಳಲ್ಲಿ 435 ಬೆಕ್ಕುಗಳಿಗೆ ಚಿಕಿತ್ಸೆ ನೀಡಲಾಗಿದೆ. ದ.ಕ. ಜಿಲ್ಲೆಯಲ್ಲಿಯೂ 400ಕ್ಕೂ ಅಧಿಕ ಬೆಕ್ಕುಗಳಿಗೆ ಚಿಕಿತ್ಸೆ ನೀಡಲಾಗಿದೆ. ವೈರಸ್ ಬಾಧಿತ ಬೆಕ್ಕುಗಳನ್ನು ನಿಖರವಾಗಿ ಗುರುತಿಸುವುದು ಮತ್ತು ಸಾವಿನ ಪ್ರಮಾಣ ಲೆಕ್ಕಚಾರ ಕಷ್ಟಸಾಧ್ಯ ಎನ್ನುತ್ತಾರೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು.
Related Articles
Advertisement
ಜಾಗತಿಕ ಪಶು ವೈದ್ಯಲೋಕವು ಲ್ಯೂಕೊಪೀನಿಯ ವೈರಸ್ ಸೋಂಕು ಬೆಕ್ಕುಗಳಿಗೆ ಮಾರಣಾಂತಿಕ ಎಂದು ವ್ಯಾಖ್ಯಾನಿಸಿದೆ. ಈ ವೈರಾಣುವನ್ನು 1964ರಲ್ಲಿ ಪತ್ತೆ ಹಚ್ಚಲಾಗಿತ್ತು. ಇದು ಬೆಕ್ಕುಗಳಿಗೆ ಗಂಭೀರ ಅನಾರೋಗ್ಯ ಸೃಷ್ಟಿಸಿ ಸಾವಿನ ಹಂತಕ್ಕೆ ಕೊಂಡೊಯ್ಯುತ್ತದೆ. ರೋಗಲಕ್ಷಣ ಗಮನಿಸಿ ಆರಂಭದಲ್ಲೇ ಚಿಕಿತ್ಸೆ ನೀಡಿದರೆ ಬೆಕ್ಕುಗಳು ಬದುಕುತ್ತವೆ. ಸರಕಾರಿ ಪಶು ಆಸ್ಪತ್ರೆಗಳಲ್ಲಿ ಇದಕ್ಕೆ ಚಿಕಿತ್ಸೆ ಲಭ್ಯವಿಲ್ಲ. ಖಾಸಗಿಯಾಗಿ ಲಸಿಕೆ ಲಭ್ಯವಿದ್ದು, ಬೆಕ್ಕುಗಳ ಮಾಲಕರು ಖರೀದಿಸಿದರೆ ಪಶು ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಬೆಕ್ಕುಗಳ ಮಲ, ಮೂತ್ರ, ಮೂಗಿನಿಂದ ಇಳಿಯುವ ನೀರಿನಿಂದ ಸೋಂಕು ಹರಡುತ್ತದೆ. ಬೆಕ್ಕುಗಳಿಂದ ಬೆಕ್ಕುಗಳಿಗೆ ಮಾತ್ರ ಇದು ಹರಡುತ್ತದೆ. ಮನುಷ್ಯರಿಗೆ ಮತ್ತು ಇತರ ಪ್ರಾಣಿಗಳಿಗೆ ತಗಲುವುದಿಲ್ಲ ಎಂದು ಪಶು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಪ್ಯಾಕೆಟ್ ಹಾಲು ಮಾರಕ :
ಬೆಕ್ಕುಗಳ ಆರೈಕೆ ಮತ್ತು ಆಹಾರ ಕ್ರಮದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಪಶು ವೈದ್ಯಕೀಯ ತಜ್ಞರು. ಪ್ಯಾಕೆಟ್ ಹಾಲು ಬೆಕ್ಕುಗಳಿಗೆ ಆರೋಗ್ಯಕರವಲ್ಲ. ಇದು ಬೆಕ್ಕುಗಳ ರೋಗ ನಿರೋಧಕ ಶಕ್ತಿಯನ್ನು ಸಂಪೂರ್ಣ ಕುಂದಿಸುತ್ತದೆ. ಬೆಕ್ಕುಗಳಿಗೆ ವೈರಸ್ ಬಾಧಿಸಿದರೂ ತಡೆದುಕೊಳ್ಳುವ ಶಕ್ತಿ ಇಲ್ಲದೆ ಸಾವನ್ನಪ್ಪುವ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಇದು ಪ್ರಮುಖ ಕಾರಣ. ಹಾಲಿನ ಬದಲು ಅನ್ನ, ಮೊಸರು, ತರಕಾರಿ ಸಾಂಬಾರು ಉತ್ತಮ. ಕರಿದ ತಿನಿಸು, ಹಳಸಿದ ಆಹಾರ ಪದಾರ್ಥ, ಹಸಿ ಮೀನು-ಮಾಂಸ ಸೇವನೆ ಬೆಕ್ಕುಗಳ ಆರೋಗ್ಯಕ್ಕೆ ಹಾನಿಕರ.
ಜಿಲ್ಲಾ ಪಾಲಿಕ್ಲಿನಿಕ್‌ನಲ್ಲಿ ಏಳು ತಿಂಗಳಿನಿಂದ ವಿವಿಧ ಅನಾರೋಗ್ಯಕ್ಕೆ ಸಂಬಂಧಿಸಿ 400ಕ್ಕೂ ಅಧಿಕ ಬೆಕ್ಕುಗಳಿಗೆ ಚಿಕಿತ್ಸೆ ನೀಡಿದ್ದೇವೆ. ಉಡುಪಿ ಜಿಲ್ಲೆಯ ಹಲವು ಕಡೆಗಳಿಂದ ಬೆಕ್ಕುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತರಲಾಗುತ್ತಿದೆ. ಪ್ಯಾನ್ ಲ್ಯೂಕೊಪೀನಿಯ ವೈರಸ್‌ಗೆ ಸರಕಾರಿ ಪಶು ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿಲ್ಲ. ಖರೀದಿಸಿ ತಂದುಕೊಟ್ಟರೆ ನೀಡಲಾಗುತ್ತದೆ. – ಡಾ| ದಯಾನಂದ ಪೈ, ಡಾ| ರಾಮಪ್ರಕಾಶ್,ಉಪ ನಿರ್ದೇಶಕರು, ಜಿಲ್ಲಾ ಪಾಲಿಕ್ಲಿನಿಕ್, ಪಶುಸಂಗೋಪನೆ ಇಲಾಖೆ ಉಡುಪಿ ಮತ್ತು ದ.ಕ. ಜಿಲ್ಲೆ.
- ಅವಿನ್ ಶೆಟ್ಟಿ