ಮುಧೋಳ: ಭಾರತಕ್ಕೆ ಸ್ವಾತಂತ್ರ್ಯ ದೊರೆಯುವಲ್ಲಿ ಪತ್ರಿಕೆಗಳ ಕೊಡುಗೆ ಅಪಾರವಾಗಿದ್ದು, ದೇಶದ ಜನತೆಗೆ ದೇಶಪ್ರೇಮದ ಬಗ್ಗೆ, ಬ್ರಿಟಿಷರ ದುರಾಡಳಿತದ ಬಗ್ಗೆ ಸಾರ್ವಜನಿಕರನ್ನು ಎಚ್ಚರಿಸಿ ಸ್ವಾತಂತ್ರ್ಯದ ಹೋರಾಟದಲ್ಲಿ ಸಂಘಟಿತವಾಗಿ ಭಾಗವಹಿಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸಿದ್ದವು ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು.
ಇಲ್ಲಿಯ ಕಾನಿಪ ಸಂಘದ ನವೀಕರಣಗೊಡ ಕಾರ್ಯಾಲಯ, ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಬ್ರಿಟಿಷರ ದುರಾಡಳಿತಕ್ಕೆ ಬೇಸತ್ತ ಜನರು ಸ್ವತಂತ್ರ ಭಾರತ ನಿರ್ಮಾಣಕ್ಕೆ ಹೋರಾಟ ಮಾಡುವುದು ಅನಿವಾರ್ಯವಾಗಿತ್ತು. ಹೋರಾಟದ ನಾಯಕತ್ವ ಹುಡುಕಾಟದಲ್ಲಿರುವಾಗ ಆಫ್ರಿಕಾ ದೇಶದಲ್ಲಿ ಕಾನೂನು ಪದವೀಧರರಾಗಿ ಭಾರತ ದೇಶಕ್ಕೆ ಬಂದಿದ್ದ ಗಾಂಧೀಜಿಯವರು ಮತ್ತೆ ಆಫ್ರಿಕಾಕ್ಕೆ ಹೊರಟಾಗ ಅವರ ಮನವೊಲಿಸಿ ತಾವು ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಹೋರಾಟದ ನೇತೃತ್ವ ವಹಿಸಿದ್ದ ಗಾಂಧೀಜಿಯವರು ಯಂಗ್ ಇಂಡಿಯಾ ಪತ್ರಿಕೆ ಆರಂಭಿಸಿ, ಜನಜಾಗೃತಿ ಆರಂಭಿಸಿದರು. ಆದರೆ ಭಾರತೀಯರಿಗೆ ಆಂಗ್ಲಭಾಷೆ ಬಾರದಿರುವುದರಿಂದ 23 ಪ್ರಾದೇಶಿಕ ಭಾಷೆಯಲ್ಲಿ ಹರಿಜನ ಪತ್ರಿಕೆಯೊಂದನ್ನು ಆರಂಭಿಸಿದರು. ಅವರೊಬ್ಬ ಪತ್ರಕರ್ತರಾಗಿ, ಸಂಪಾದಕರಾಗಿ ಕೆಲಸ ಮಾಡಿರುವುದನ್ನು ನಾವಿಂದು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.
ಪತ್ರಕರ್ತರು ನೈಜ ಸುದ್ದಿ ಬರೆಯಬೇಕು. ಯಾರದೋ ಮುಲಾಜಿಗೆ ಒಳಗಾಗಿ ಸುದ್ದಿಯನ್ನು ಸೃಷ್ಟಿಸಬಾರದು. ಸುದ್ದಿಯ ಮೌಲ್ಯ ಉಳಸಿಕೊಳ್ಳಬೇಕು. ಇದರಿಂದ ಪತ್ರಿಕೆಗೆ ತನ್ನದೆಯಾದ ಗೌರವ ಹೆಚ್ಚಳವಾಗುತ್ತದೆ. ಸುದ್ದಿಯನ್ನು ಬಿತ್ತರಿಸುವ ಅವಸರದಲ್ಲಿ ಸತ್ಯಾಸತ್ಯತೆ ಮರೆ ಮಾಚುತ್ತವೆ. ಇದರಿಂದ ಸಾಕಷ್ಟು ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ. ಕಾರಣ ಸುದ್ದಿಯನ್ನು ಮರು ಮೌಲ್ಯಮಾಪನ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಬಹಳ ಇದೆ. ಅದನ್ನು ಉಳಿಸಿಕೊಳ್ಳುವುದು ಪತ್ರಿಕೋದ್ಯಮದ ಕೆಲಸ. ಜನರ ನಿರೀಕ್ಷೆಗೆ ತಕ್ಕಂತೆ ಸುದ್ದಿ ನೀಡಿ ಸಮಾಜ ಪರಿವರ್ತನೆ ಮಾಡಬೇಕು ಎಂದರು.
ಕಾನಿಪ ಸಂಘದ ಅಧ್ಯಕ್ಷ ಬಿ.ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾನಿಪ ಸಂಘದ ಕಾರ್ಯಾಲಯದ ನವೀಕರಣಕ್ಕಾಗಿ ಶಾಸಕ ಗೋವಿಂದ ಕಾರಜೋಳ ಅವರು ತಮ್ಮ ಶಾಸಕರ ನಿಧಿಯಿಂದ ಅನುದಾನ ನೀಡಿರುವುದಕ್ಕೆ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಬಿಜೆಪಿ ಗ್ರಾಮೀಣ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ನಗರಾಧ್ಯಕ್ಷ ಗುರುರಾಜ ಕಟ್ಟಿ ಮಾತನಾಡಿ, ಹಿರಿಯ ಪತ್ರಕರ್ತ ಅಶೋಕ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ವತಿಯಿಂದ ಶಾಸಕರಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಕಾನಿಪ ಸಂಘದ ಪದಾಧಿಕಾರಿಗಳಾದ ವಿಶ್ವನಾಥ ಮುನವಳ್ಳಿ, ಎಲ್.ಬಿ.ಹಳ್ಳದ, ಎಂ.ಎಚ್.ನದಾಫ್, ಬಿ.ಎಚ್.ಬೀಳಗಿ, ವೆಂಕಟೇಶ ಗುಡೆಪ್ಪನವರ, ಮಹಾಂತೇಶ ಕರೆಹೊನ್ನ, ಗಣಪತಿ ಮೇತ್ರಿ, ಜಿ.ಎಸ್. ಮಾನೆ, ಮಹೇಶ ಬೋಳಿಶೆಟ್ಟಿ, ಹಸನಡೊಂಗ್ರಿ ಮಹಾಲಿಂಗಪುರ, ಎಸ್.ಎಂ. ಹೊರಟ್ಟಿ, ಉಮೇಶ ಅರಕೇರಿ, ಮಹಾಂತೇಶ ಕಾರಜೋಳ, ಛಾಯಾಗ್ರಾಹಕ ಜಗದೀಶ ಜೀರಗಾಳ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.