ಚಾಮರಾಜನಗರ: ಚಾಮರಾಜನಗರವನ್ನು ಕೋವಿಡ್-19 ಮುಕ್ತ ಜಿಲ್ಲೆಯಾಗಿ ಮುಂದುವರೆಯುತ್ತಿರಲು ಹಗಲಿರುಳು ಪರಿಶ್ರಮ ಪಡುತ್ತಿರುವ ವಾರಿಯರ್ಸ್ ಗಳಾದ ಪ್ರಮುಖ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಪುಷ್ಪವೃಷ್ಠಿ ಗೈಯುವ ಮೂಲಕ ಗೌರವ, ಕೃತಜ್ಞತೆ ಸಮರ್ಪಿಸುವ ವಿಶಿಷ್ಟ ಕಾರ್ಯಕ್ರಮ ಶನಿವಾರ ನಡೆಯಿತು.
ಚಾಮರಾಜನಗರದ ಹೃದಯ ಭಾಗ ಜೈ ಭುವನೇಶ್ವರಿ (ಪಚ್ಚಪ್ಪ ವೃತ್ತ) ವೃತ್ತದಲ್ಲಿ ಜಿಲ್ಲಾಡಳಿತವು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕೋವಿಡ್-19 ಹರಡದಂತೆ ಶ್ರಮಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸ್, ವೈದ್ಯರು, ಸೇರಿದಂತೆ ಅಗತ್ಯ ಸೇವೆಯ ಸಿಬ್ಬಂದಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಕಾಲ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಜಿಲ್ಲೆಯ ಇತರೆ ಶಾಸಕರು, ಹಿರಿಯ ಅಧಿಕಾರಿಗಳೊಂದಿಗೆ ಪುಷ್ಪವೃಷ್ಠಿ ಮುಖೇನ ಧನ್ಯವಾದಗಳನ್ನು ಸಲ್ಲಿಸಿದರು.
ಸಾಮಾನ್ಯರ ಅಸಾಮಾನ್ಯ ಸೇವೆಗಾಗಿ ಜಿಲ್ಲಾಡಳಿತದ ಧನ್ಯವಾದಗಳು ಎಂಬ ಪರಿಕಲ್ಪನೆಯಡಿ ಕೋವಿಡ್-19 ವಾರಿಯರ್ಸ್ ಸೋಂಕಿನ ವಿರುದ್ಧ ಜಿಲ್ಲೆಯಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಮತ್ತಷ್ಟು ಉತ್ತೇಜನ, ಹುರಿದುಂಬಿಸುವ ಭಾಗವಾಗಿ ಇಂದು ಚಾಮರಾಜನಗರದಲ್ಲಿ ನಡೆದ ಕೃತಜ್ಞತಾ ಸಮರ್ಪಣಾ ಕಾರ್ಯಕ್ರಮ ರಾಜ್ಯದಲ್ಲಿಯೇ ಮಾದರಿ ಎನಿಸಿಕೊಂಡಿದೆ.
ಸೋಂಕು ತಡೆಗಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಯ್ದ ಆರೋಗ್ಯ, ಪೊಲೀಸ್, ಪೌರಕಾರ್ಮಿಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಜೈ ಭುವನೇಶ್ವರಿ (ಪಚ್ಚಪ್ಪ ವೃತ್ತ) ವೃತ್ತದ ಸುತ್ತಲೂ ಸಾಮಾಜಿಕ ಅಂತರ ಕಾಪಾಡಿಕೊಂಡು ನಿಲ್ಲಿಸಲಾಗಿತ್ತು. ಅಗ್ನಿಶಾಮಕ ದಳದ ವಾಹನದ ಮೇಲೇರಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಕೊರೊನಾ ವಾರಿಯರ್ಸ್ ಮೇಲೆ ಪುಷ್ಪ ಸುರಿಯುತ್ತಿದ್ದಂತೆಯೇ ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಅವರು ವಿಶ್ವವನ್ನೇ ಸಂಕಷ್ಟಕ್ಕೆ ಸಿಲುಕಿಸಿರುವ ಕೋವಿಡ್-19 ಇಂದು ಗಡಿ ಜಿಲ್ಲೆ ಚಾಮರಾಜನಗರವನ್ನು ಬಾಧಿಸಿಲ್ಲ. ಕೇರಳ, ತಮಿಳುನಾಡು ಗಡಿ ಭಾಗಗಳನ್ನು ಹೊಂದಿರುವ ಕರ್ನಾಟಕದ ದಕ್ಷಿಣಭಾಗದ ತುತ್ತತುದಿ ಜಿಲ್ಲೆ ಚಾಮರಾಜನಗರ ಕೋವಿಡ್ ಮುಕ್ತವಾಗಿ ಮುಂದುವರೆದಿದೆ. ಇದು ಸಾಧ್ಯವಾಗಿರುವುದು ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ. ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರ ಅವಿರತ ಹೋರಾಟದಿಂದ. ಈ ಎಲ್ಲರ ಅಮೂಲ್ಯ ಸೇವೆಯಿಂದ ಜಿಲ್ಲೆ ಸುರಕ್ಷಿತವಾಗಿದೆ. ಹೀಗಾಗಿ ಇವರ ಸೇವೆಗೆ ಜಿಲ್ಲಾಡಳಿತದಿಂದ ಪುಷ್ಪವೃಷ್ಠಿಗೈದು ಅಭಿನಂದನೆ ಸಲ್ಲಿಸಿದ್ದೇವೆ ಎಂದರು.
ಇದು ಧನ್ಯಾತಾ ಸಮರ್ಪಣಾ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮ ಆಯೋಜನೆಯಿಂದ ಇಡೀ ಜಿಲ್ಲೆಯ ಜನರಲ್ಲಿ ಧನ್ಯತಾ ಮನೋಭಾವ ಮೂಡಲು ಕಾರಣವಾಗಿದೆ. ಇಡೀ ದೇಶದಲ್ಲೆ ಅತೀ ಅಪರೂಪದ ಕಾರ್ಯಕ್ರಮವಾಗಿದೆ. ಇಂದು ನಾವೆಲ್ಲರೂ ಸೋಂಕು ವಿರುದ್ದದ ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿರುವ ನಮ್ಮೆಲ್ಲ ಆರೋಗ್ಯ ಯೋಧರಿಗೆ ಇಡೀ ಚಾಮರಾಜನಗರ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆಯನ್ನು ಸಮರ್ಪಿಸುತ್ತಿದ್ದೇವೆ ಎಂದು ಸಚಿವರು ನುಡಿದರು.
ಕೋವಿಡ್-19 ವೈರಾಣು ವಿರಿದ್ಧ ಹೋರಾಡುವಲ್ಲಿ ಇಡೀ ರಾಜ್ಯದಲ್ಲೇ ನಮ್ಮ ಚಾಮರಾಜನಗರ ಜಿಲ್ಲೆ ವಿಶೇಷವಾಗಿ ಸಾಧನೆಗೈದಿದೆ. ಮೊದಲನೇ ದಿನದಿಂದ ಈ ಘಳಿಗೆಯವರೆಗೆ ಸೋಂಕು ಮುಕ್ತ ಜಿಲ್ಲೆಯಾಗುವ ಮೂಲಕ ಹೆಮ್ಮೆಯ ಸ್ಥಾನ ಪಡೆದಿದೆ. ಈ ಕಾರ್ಯದ ಯಶಶ್ಸು ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ. ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರ ಅವಿರತ ಪರಿಶ್ರಮಕ್ಕೆ ಸಲ್ಲಬೇಕು ಎಂದು ಸಚಿವ ಸುರೇಶ್‌ಕುಮಾರ್ ತಿಳಿಸಿದರು.