Advertisement

ನಿಮ್ಮ ಕೆಲಸ ಮಾಡಲು ನಾನು ನಿಮ್ಮ ಬಳಿಗೆ ಬರುತ್ತೇನೆ: ರಾಜೇಶ್‌

04:40 AM May 29, 2018 | Team Udayavani |

ಬಂಟ್ವಾಳ: ‘ಮತದಾರರು ಪ್ರೀತಿ, ವಿಶ್ವಾಸದಿಂದ ಪಕ್ಷವನ್ನು ಗೆಲ್ಲಿಸುವ ಮೂಲಕ ದೊಡ್ಡ ಸಾಧನೆಯನ್ನು ತೋರಿದ್ದಾರೆ. ನೀವು ಗ್ರಾಮ ಮಟ್ಟದಲ್ಲಿ ಇದ್ದುಕೊಂಡು ಪಕ್ಷದ ಧ್ಯೇಯ ಉದ್ದೇಶದಿಂದ ಕೆಲಸ ಮಾಡಿದ್ದೀರಿ. ನಿಮ್ಮ ಕೆಲಸ ಮಾಡಲು ನಾನು ನಿಮ್ಮ ಬಳಿಗೆ ಬರುತ್ತೇನೆ. ನೀವು ಶಾಸಕರ ಕಚೇರಿಗೆ ಬಂದು ನಿಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಹಣ, ಸಮಯವನ್ನು ಕಳೆಯಬೇಡಿ. ನಿಮ್ಮ ಕೆಲಸ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದೀರಿ. ಅದನ್ನು ಮಾಡುವುದು ನನ್ನ ಹೊಣೆ’ ಎಂದು ನೂತನ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಹೇಳಿದರು. ಅವರು ರವಿವಾರ ಸಂಜೆ ಕಡೇಶಿವಾಲಯ ಅಮೈ ಮಾಡದಾರು ದೈವಸ್ಥಾನ ವಠಾರದಲ್ಲಿ ನಡೆದ ಸಮ್ಮಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ನಿವೃತ್ತ ಮುಖ್ಯಶಿಕ್ಷಕ ಕೆರೆಮೂಲೆ ಕೃಷ್ಣ ಭಂಡಾರಿ ಅವರು ಶಾಸಕರನ್ನು ಸಮ್ಮಾನಿಸಿ ಶುಭ ಹಾರೈಸಿದರು.

Advertisement

ಜಿಲ್ಲಾ ಬಿಜೆಪಿ ವಕ್ತಾರ ಕೆ. ಹರಿಕೃಷ್ಣ ಬಂಟ್ವಾಳ ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ ಹೊಸ ಬದಲಾವಣೆ ತಂದಿದ್ದೀರಿ. ಸುದೀರ್ಘ‌ ಹತ್ತು ವರ್ಷಗಳ ವನವಾಸದ ಬಳಿಕ ಎಲ್ಲರ ಮನಕ್ಕೆ ಒಪ್ಪುವ, ಯಾವುದೇ ಪಕ್ಷಪಾತ ಮಾಡದ, ಜನರನ್ನು ಪ್ರೀತಿಸುವ, ಅಭಿವೃದ್ದಿಯನ್ನು ಬಯಸುವ, ಜನತೆಯನ್ನು ತಾರತಮ್ಯದಿಂದ ನೋಡದ ಒಬ್ಬರು ಶಾಸಕರು ನಮಗೆ ಸಿಕ್ಕಿದ್ದಾರೆ. ನಮ್ಮ ಶಾಸಕರು ಧೀಮಂತ, ಸಜ್ಜನ ವ್ಯಕ್ತಿತ್ವಕ್ಕೆ ಹೆಸರಾದವರು. ಯಾರಿಗೂ ನೋವಾಗಬಾರದು, ಎಲ್ಲರಿಗೂ ಸಮಾನವಾಗಿ ಗೌರವಾದರ ಸಿಗಬೇಕು ಎಂಬ ಉದ್ದೇಶ ಇರುವವರು ಎಂದು ವಿಶ್ಲೇಷಿಸಿದರು.

ಅವರನ್ನು ಆಯ್ಕೆ ಮಾಡಿ ಇನ್ನು ನಮ್ಮ ಕೆಲಸ ಮುಗಿಯಿತು ಎಂದು ಕಾರ್ಯಕರ್ತರು ಸುಮ್ಮನಿರುವುದಲ್ಲ, ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ಕೈಗೂಡುವ ತನಕ ನೀವು ಕರ್ತವ್ಯದಿಂದ ಹಿಂದೆ ಸರಿಯಬಾರದು. ಜನತೆಗೆ ಸಿಗಬೇಕಾದ ಸೌಲಭ್ಯಗಳು ತಾರತಮ್ಯ ಇಲ್ಲದೆ ಸಿಗುವಂತೆ ನೋಡಿಕೊಳ್ಳುವಲ್ಲಿ ನಮ್ಮ ಹೊಣೆಗಾರಿಕೆ ಇದೆ ಎಂದರು.
ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ ಮಾತನಾಡಿ, ಬಿಜೆಪಿಯನ್ನು ಜನತೆ ಗೆಲ್ಲಿಸಿಕೊಟ್ಟಿದ್ದಾರೆ. ಜನತೆಯ ಪ್ರೀತಿ, ವಿಶ್ವಾಸ ನಂಬಿಕೆಯನ್ನು ಉಳಿಸಿಕೊಂಡವರು ಕಾರ್ಯಕರ್ತರು. ಮತದಾರರ ಕೆಲಸ ಆಗುವಂತೆ ನಾವು ಇನ್ನಷ್ಟು ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ನಮಗೆ ನಮ್ಮದೇ ಶಾಸಕರು ಸಿಕ್ಕಿದ್ದಾರೆ. ಅವರು ನಿಮ್ಮ ಜತೆ ಸದಾ ಸಂಪರ್ಕದಲ್ಲಿ ಇರುತ್ತಾರೆ. ನೀವು ಪಕ್ಷದ ಪ್ರಮುಖರ ಜತೆ ಸಂಪರ್ಕದಲ್ಲಿ ಇರಬೇಕು ಎಂದು ಕರೆ ನೀಡಿದರು.

ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಸಾಮಾಜಿಕ ನೇತಾರರಾದ ತಿರುಮಲೇಶ್ವರ ಭಟ್‌, ಶಾಂತಪ್ಪ ಪೂಜಾರಿ, ಸುರೇಂದ್ರ ರಾವ್‌, ಗ್ರಾ.ಪಂ. ಅಧ್ಯಕ್ಷೆ  ಶ್ಯಾಮಲಾ ಶೆಟ್ಟಿ, ಸದಸ್ಯರಾದ ಸನತ್‌ ಆಳ್ವ, ಸುರೇಶ್‌ ಕನ್ನೊಟ್ಟು, ಬಿಜೆಪಿ ಗ್ರಾಮ ಸಮಿತಿ ಪ್ರ.ಕಾರ್ಯದರ್ಶಿ ನಾರಾಯಣ ಸಪಲ್ಯ ಉಪಸ್ಥಿತರಿದ್ದರು. ಗ್ರಾಮ ಸಮಿತಿ ಅಧ್ಯಕ್ಷ ವಿದ್ಯಾಧರ ರೈ ಅಮೈ ಸ್ವಾಗತಿಸಿ, ಪ್ರಸ್ತಾವಿಸಿದರು. ಗ್ರಾ.ಪಂ. ಸದಸ್ಯ ಸುರೇಶ ಬನಾರಿ ವಂದಿಸಿದರು. ಶ್ರುತಿನ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next