ಭರ್ರ ಎಂದು ಶಬ್ದ ಮಾಡುತ್ತಿದ್ದ ಫ್ಯಾನ್, ಕಣ್ಣು ಮಿಟುಕಿಸಿ-ಮಿಟುಕಿಸಿ ಬೆಳಕು ನೀಡುತ್ತಿದ್ದ ಟೂಬ್‌ಲೈಟ್, ಪೊರಕೆ, ಕಸದಬುಟ್ಟಿ ಎಲ್ಲವೂ ಅಳುತ್ತಿವೆ ಎನಿಸುತ್ತಿದೆ. ನನ್ನ ಕಣ್ಣಲ್ಲೂ ನೀರು. ಕೊನೆಯದಾಗಿ ಬಾಗಿಲು ಹಾಕುತ್ತಿರುವೆ ಗೆಳೆಯಾ…
ನನಗೀಗ ನೆನಪಾಗ್ತಾ ಇರೋದು, ನಿನ್ನನ್ನು ಸೇರಿದ ಆ ಮೊದಲ ದಿನ. ಕುವೆಂಪು ವಿವಿಯ ಪಿಜಿ ಹಾಸ್ಟೆಲ್‌ನ ನ್ಯೂ ಬಿಲ್ಡಿಂಗ್‌ಗೆ ಕಾಲಿಟ್ಟಾಗ ನೀನು ನನಗೆ ಹೊಸಬ. ನಿಜ ಹೇಳ್ತೀನಿ ಕೇಳು; ರೂಂ ನಂಬರ್ 26ಕ್ಕೆ ಹೋಗಿ ಎಂದು ಹಾಸ್ಟೆಲ್‌ನವರು ಹೇಳಿದಾಗ ನನಗೊಬ್ಬ ಈ ಥರದ ಹೊಸ ಗೆಳೆಯ ಸಿಕ್ತಾನೆ ಅಂತ ಊಹಿಸಿರಲಿಲ್ಲ. ರೂಂನ ಜೊತೆಯೂ ಸ್ನೇಹ ಬೆಳೆಸಿಕೊಳ್ಳಬಹುದೆಂದು ನೀನು ತೋರಿಸಿಕೊಟ್ಟಿರುವೆ.
ಅಂದಿನಿಂದ ಇಂದಿನವರೆಗೂ ನೀನು ನನ್ನ ನಿರ್ಜೀವ ಗೆಳೆಯ. ನಿನ್ನೊಂದಿಗೆ ನಾನು ಹೊಂದಿರುವ ಆಪ್ತತೆ, ಜೀವ ಇರುವ ಸ್ನೇಹಿತರೊಂದಿಗಿನ ಆಪ್ತತೆಗಿಂತ ಏನೂ ಕಡಿಮೆಯಿಲ್ಲ. ಹತ್ತು ತಿಂಗಳ ಕಾಲ ನನ್ನ ನೋವು, ನಲಿವು, ಸುಖ, ದುಃಖ, ಎಲ್ಲಾ ರೀತಿಯ ಭಾವನೆಗಳಿಗೂ ನೀನು ಪಾಲುದಾರನಾಗಿದ್ದೆ. ನನ್ನಷ್ಟಕ್ಕೆ ನಾ ಹೇಳಿಕೊಂಡ ಮಾತುಗಳಿಗೆ ನೀ ಕಿವಿಯಾಗಿದ್ದೆ. ಅದೆಷ್ಟೋ ಬಾರಿ ನನ್ನ ಅತಿರೇಕದ ವರ್ತನೆಗಳನ್ನು ಕಂಡು ಬೇಸರಗೊಂಡು, ಅಳುವಿಗೆ ಸಾಂತ್ವನ ಹೇಳುತ್ತಾ ಕಂಪಿಸಿದ್ದೆ.
ನಿನ್ನಲ್ಲಿ ನನ್ನ ಕನಸುಗಳಿವೆ, ಮಾತುಗಳಿವೆ, ಹಾಡುಗಳಿವೆ, ಕಿರುಚಾಟವಿದೆ, ಆಟವಿದೆ, ಹುಚ್ಚು ಕುಣಿತವಿದೆ, ಅಧ್ಯಯನವಿದೆ, ವಿಚಿತ್ರ ಕ್ರಿಯೆಗಳ ನೆನಪುಗಳಿವೆ. ನನಗೆ ಹಾಗೂ ನನ್ನ ವಸ್ತುಗಳಿಗೆ ಜಾಗ ನೀಡಿದ್ದಲ್ಲದೆ, ನನ್ನ ನೆನಪುಗಳಿಗೂ ಸ್ಥಾನ ನೀಡಿದವ ನೀನು. ಮುಖ್ಯವಾಗಿ ನಾನಿರುವಷ್ಟು ಕಾಲ “ಇದು ಗೋವರ್ಧನನ ರೂಂ ಎಂದು ಸ್ನೇಹಿತರು ಗುರ್ತಿಸಿ, ಬರುವಷ್ಟು ಸಲುಗೆಯನ್ನೂ ನೀಡಿದೆ. ನಿನ್ನಲ್ಲಿದ್ದ ಆ ಕಿಟಿಕಿಯ ಬಗ್ಗೆ ಹೇಳಲೇಬೇಕು. ಅದು ವಿಶ್ವಗನ್ನಡಿಯಂತೆಯೇ ಇತ್ತು. ಹಾಸ್ಟೆಲ್‌ನ ದಾರಿಯನ್ನು ಸರಿಯಾಗಿ ತೋರುತ್ತಿದ್ದ ಅದು ಅಲ್ಲಿಗೆ ಹೋಗಿಬರುವವರನ್ನು ಕಾಣಲು, ಬೆಳಗಿನ ಹೊತ್ತು ಹಕ್ಕಿಗಳ ಗಾನ ಕೇಳಲು ಹಾಗೂ ಸೂರ್ಯನ ತಂಪುಕಿರಣಗಳು ಮೈ ಸ್ಪರ್ಶಿಸಲು ಅವಕಾಶ ನೀಡುತ್ತಿತ್ತು. ಆದರೆ ರಾತ್ರಿ ಸೊಳ್ಳೆಗಳಿಗೆ ರಹದಾರಿಯೂ ಅದೇ ಆಗಿತ್ತು. ಅದರ ಮೂಲಕ ಹೊರಗಿನ ದಾರಿ ನೋಡುವುದೇ ನನಗೆ ನಿತ್ಯದ ಕಾಯಕ.
ನಮ್ಮಿಬ್ಬರ ಸ್ನೇಹ ಇಷ್ಟು ಗಾಢವಾಗಲು ಮುಖ್ಯ ಕಾರಣ ಅತಿಹೆಚ್ಚು ಸಮಯ ನಾನು ನಿನ್ನಲ್ಲಿ ಕಳೆದದ್ದು. ನೀನು ನನ್ನಂತೆಯೇ ಇತರೆ ಮೂವರು ಸ್ನೇಹಿತರಿಗೆ ಜಾಗ ನೀಡಿದ್ದರೂ ಅವರೊಟ್ಟಿಗೆ ಅಷ್ಟು ಆಪ್ತತೆ ಬೆಳೆದಿಲ್ಲ ಅಂತ ಗೊತ್ತು. ಕಾರಣ, ಒಂದೆರಡು ದಿನ ರಜೆ ಸಿಕ್ಕರೂ ಅವರು ತಮ್ಮ ಊರುಗಳಿಗೆ ತೆರಳುತ್ತಿದ್ದರು. ಆಗ ನಿನ್ನೊಂದಿಗೆ ಇರುತ್ತಿದ್ದವನು ನಾನೊಬ್ಬನೇ. ತರಗತಿ ಮುಗಿಸಿಕೊಂಡು ಸಂಜೆ ಸ್ವಲ್ಪ$ಸಮಯ ಹೊರಗೆ ಹೋಗುತ್ತಿದ್ದುದು ಬಿಟ್ಟರೆ ಉಳಿದ ಸಮಯವೆಲ್ಲಾ ಅಲ್ಲೇ ಇರುತ್ತಿದ್ದೆ.
ಆದರೀಗ ನಿನ್ನನ್ನು ತೊರೆಯುವ ಸಮಯ ಬಂದಿದೆ. ಗೆಳೆಯ ಎಂಬ ಸಲುಗೆಯಿಂದ ನೀನಿತ್ತ ಜಾಗದಲ್ಲಿ ಅಂದು ತುರುಕಿದ ವಸ್ತುಗಳನ್ನೆಲ್ಲಾ ಹುಡುಕಿ ತೆಗೆದು ಈಗ ಮತ್ತೆ ಬ್ಯಾಗಿಗೆ ತುಂಬಿಕೊಳ್ಳುವಾಗ ಹಳೆಯದೆಲ್ಲಾ ನೆನಪಾಗುತಿದೆ. ನಿನ್ನೊಟ್ಟಿಗೆ ಕಳೆದ ಪ್ರತಿಕ್ಷಣವೂ, ಅಲ್ಲಿ ನಡೆದ ಪ್ರತಿಘಟನೆಗಳೂ ಸರ್ರನೆ ಕಣ್ಮುಂದೆ ಸುಳಿದುಹೋಗುತ್ತಿವೆ. ಇನ್ನುಮುಂದೆ ನಿನ್ನ ಜೊತೆ ಇರಲಾಗುವುದಿಲ್ಲವಲ್ಲಾ ಎಂಬ ನೋವು ಮನಸ್ಸನ್ನು ಹಿಂಡುತ್ತಿದೆ.
ನೀನು ನೀಡಿದ್ದ ಮೇಜು, ಕುರ್ಚಿ, ಮಂಚಗಳನ್ನು ಒಲ್ಲದ ಮನಸ್ಸಿನಿಂದಲೇ ಖಾಲಿ ಮಾಡಿ ಎತ್ತಿಟ್ಟೆ. ಮನಸ್ಸಿನಲ್ಲಿಯೇ ಮುತ್ತಿಟ್ಟೆ. ಅಗತ್ಯವಿಲ್ಲದಿದ್ದರೂ ನನ್ನ ಗೆಳೆಯ ಎಂಬ ಪ್ರೀತಿಯಿಂದ ಕೊನೆಯದಾಗಿ ಕಸ ಹೊಡೆದು, ಸ್ವತ್ಛಗೊಳಿಸಿದೆ. ಅಬ್ಟಾ ಎಷ್ಟು ಚೆನ್ನಾಗಿ ಕಾಣುತ್ತಿದ್ದೀಯಾ ಗೊತ್ತಾ? ನನ್ನ ಕಣ್ಣೇ ಬಿದ್ದೀತು. ಆವರೆಗೂ ಇಡೀ ಹಾಸ್ಟೆಲ್‌ನಲ್ಲಿಯೇ ಸ್ವತ್ಛವಾಗಿರುವ ರೂಂ ಎಂಬ ಹೆಗ್ಗಳಿಕೆಯೂ ನಿನ್ನದಾಗಿತ್ತಲ್ಲವೇ. ಭರ್ರ ಎಂದು ಶಬ್ದ ಮಾಡುತ್ತಿದ್ದ ಫ್ಯಾನ್, ಕಣ್ಣು ಮಿಟುಕಿಸಿ-ಮಿಟುಕಿಸಿ ಬೆಳಕು ನೀಡುತ್ತಿದ್ದ ಟೂಬ್‌ಲೈಟ್, ಪೊರಕೆ, ಕಸದಬುಟ್ಟಿ ಎಲ್ಲವೂ ಅಳುತ್ತಿವೆ ಎನಿಸುತ್ತಿದೆ. ನನ್ನ ಕಣ್ಣಲ್ಲೂ ನೀರು. ಕೊನೆಯದಾಗಿ ಬಾಗಿಲು ಹಾಕುತ್ತಿರುವೆ ಗೆಳೆಯಾ… ಹೋಗ್ತಿದ್ದೀನಿ, ಬೈ…
– ಎಸ್.ಎನ್. ಗೋವರ್ಧನ, ಸಿರಾ