ಬೆಂಗಳೂರು: ಖಾಸಗಿ ಶಾಲೆಗಳು ಲಾಕ್ ಡೌನ್ ಅವಧಿಯಲ್ಲಿ ಶುಲ್ಕ ಭರಿಸಲು ಮುಂದಾಗುವ ಪಾಲಕ, ಪೋಷಕರ ಮಕ್ಕಳಿಂದ ಮಾತ್ರ ಶುಲ್ಕ ಪಡೆಯಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ.
ಕಂತುಗಳ ರೂಪದಲ್ಲಿ ಅಥವಾ ಶುಲ್ಕ ಭರಿಸಲು ಶಕ್ತರಿರುವ ಪಾಲಕರಿಂದ ಶುಲ್ಕ ಪಡೆಯಲು ಅನುಕೂಲ ಮಾಡಿಕೊಡುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇಲಾಖೆ ಆಯುಕ್ತರಿಗೆ ಗುರುವಾರ ಸೂಚನೆ ನೀಡಿದ್ದರು. ಅದರಂತೆ ಈ ಆದೇಶ ಹೊರಡಿಸಲಾಗಿದೆ.
ಶುಲ್ಕ ಪಾವತಿ ಸಂಬಂಧ ಎಸ್ಎಂಎಸ್ ಅಥವಾ ಇ-ಮೇಲ್ ಕಳಿಸುವ ಸಂದರ್ಭದಲ್ಲಿ ಶುಲ್ಕ ಪಾವತಿಸಲು ಶಕ್ತರಿರುವ ಹಾಗೂ ಸ್ವ ಇಚ್ಛೆಯಿಂದ ಪಾವತಿಸಲು ಇಚ್ಛಿಸುವ ಪೋಷಕರು ಮಾತ್ರ ಪಾವತಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಶುಲ್ಕ ಪಾವತಿಸಲು ಸಾಧ್ಯವಿಲ್ಲದೇ ಇರುವ ಪೋಷಕರು ಸದ್ಯಕ್ಕೆ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ ಎಂಬ ಅಂಶವನ್ನು ಕಡ್ಡಾಯವಾಗಿ ಪೋಷಕರ ಗಮನಕ್ಕೆ ತರಬೇಕು. ಶುಲ್ಕ ವಸೂಲಾತಿ ಸಂಬಂಧ ಯಾವುದೇ ದೂರು ಬಂದರೂ ಜಿಲ್ಲಾ ಉಪನಿರ್ದೇಶಕರು ತಮ್ಮ ಹಂತದಲ್ಲಿ ಪರಿಶೀಲನಾ ತಂಡ ರಚಿಸಿ, ದೂರು ದಾಖಲಾದ ಶಾಲೆಗೆ ತಕ್ಷಣವೇ ಭೇಟಿ ನೀಡಿ, ಕೂಲಂಕಷವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲು ನಿರ್ದೇಶಿಸಿದ್ದಾರೆ.
ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಪಾಲಕರಿಂದ ಶುಲ್ಕ ವಸೂಲಾತಿಗೆ ಒತ್ತಡ ಹೇರುವಂತಿಲ್ಲ. ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ದಾಖಲಾತಿ ನಿರಾಕರಣೆ ಅಥವಾ ಮಕ್ಕಳನ್ನು ಶಾಲೆಯಿಂದ ಹೊರಹಾಕಿರುವ ಬಗ್ಗೆ ದೂರು ಬಂದರೆ, ಅಂತಹ ಶಾಲೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಡೆದ ಶುಲ್ಕವನ್ನು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದ ವೇತನ ಪಾವತಿಗೆ ಬಳಸಬೇಕು. ಚೆಕ್, ಆರ್ಟಿಜಿಎಸ್, ನೆಫ್ಟ್ ಮೂಲಕವೇ ಶುಲ್ಕ ಪಡೆಯಬೇಕು. ಮಕ್ಕಳು ಅಥವಾ ಪಾಲಕ, ಪೋಷಕರು ಶಾಲೆಯ ಆವರಣಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.