Advertisement

ಭಾವುಕತೆ, ದೇಶಭಕ್ತಿಯ ಸ್ಫೂರ್ತಿ –ಹುತಾತ್ಮ ಯೋಧರಿಗೆ ನಮನ

08:30 AM Aug 21, 2017 | Harsha Rao |

ಮಂಗಳೂರು: ದೇಶಕ್ಕಾಗಿ ಯೋಧರ ಬಲಿದಾನದ ಸ್ಮರಣೆ ಒಂದೆಡೆಯಾದರೆ, ಹುತಾತ್ಮ ಯೋಧರ ಕುಟುಂಬಗಳಿಗೆ ಗೌರವಪೂರ್ವಕ ಸಾಂತ್ವನದ ಬೆಂಬಲ ಸ್ವರಗಳು ಇನ್ನೊಂದೆಡೆ. ಗಡಿಯಲ್ಲಿ ದೇಶ ಕಾಯುವ ಸಾವಿರಾರು ಯೋಧರಿಗೆ ಸ್ಫೂರ್ತಿಯ ಸಂದೇಶದ ಅನುರಣನ ಮತ್ತೂಂದೆಡೆ.  “ಅಮರ್‌ ಜವಾನ್‌’ ಕಾರ್ಯಕ್ರಮದ ಮೂಲಕ ಸಾಕಾರ ಗೊಂಡಿತು ಯೋಧರ ಸಾಧನೆಗಳ ಅನಾವರಣ…!

Advertisement

ಮಂಗಳೂರು ಪುರಭವನ ರವಿವಾರ ಅಕ್ಷರಶಃ ದೇಶ ಭಕ್ತಿಯ ಸ್ಫೂರ್ತಿಯ ಚಿಲುಮೆಯಿಂದ ಮಿಂದೆದ್ದಿತು. ದಕ್ಷಿಣ ಕನ್ನಡದ ಹುತಾತ್ಮ ಯೋಧರಿಗೆ ಗೌರವಪೂರ್ವಕ ನಮನ ಸಲ್ಲಿಸುವ ಮೂಲಕ ಅವರ ಕುಟುಂಬಗಳಿಗೆ ಸ್ಫೂರ್ತಿ ಹಾಗೂ ಸಾಂತ್ವನದ ಸಹಭಾಗಿತ್ವ ನೀಡುವ ದೆಸೆಯಲ್ಲಿ ವಿನೂತನ ಹಾಗೂ ಅರ್ಥಗರ್ಭಿತ ಕಾರ್ಯಕ್ರಮವಾಗಿ ಮೂಡಿಬಂತು. ಹುತಾತ್ಮ ಯೋಧರ ಕುಟುಂಬದ ಮನ ಮಿಡಿಯುವ ಸನ್ನಿವೇಶದಿಂದಾಗಿ ಪುರಭವನ ಅಕ್ಷರಶಃ ಭಾವುಕಗೊಂಡಿತು.

ಟೀಮ್‌ ಬ್ಲಾ Âಕ್‌ ಆ್ಯಂಡ್‌ ವೈಟ್‌ ಮಂಗಳೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಲಯನ್ಸ್‌ ಕ್ಲಬ್‌ ಬಲ್ಮಠ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿ.ವಿ. ಆಶ್ರಯದಲ್ಲಿ ಆಯೋಜಿಸಲಾದ “ಅಮರ್‌ ಜವಾನ್‌’-ದ.ಕ.ದ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮ ವಿಶೇಷ ಪರಿಕಲ್ಪನೆಯೊಂದಿಗೆ ಸಾಕಾರ ಗೊಂಡಿತು. ಹುತಾತ್ಮ ಹನುಮಂತಪ್ಪ ಕೊಪ್ಪದ್‌ ಕುಟಂಬಸ್ಥರು ಕಾರ್ಯಕ್ರಮ ದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ, ಗೌರವ ಸ್ವೀಕರಿಸಿದರು.

ದ.ಕ.ದ ಹುತಾತ್ಮ ಯೋಧರಾದ ವಿಶ್ವಾಂಬರ ಎಚ್‌.ಪಿ, ಚಂದ್ರಶೇಖರ್‌, ಪರಮೇಶ್ವರ್‌ ಕೆ., ಗಿರೀಶ್‌ ಕುಮಾರ್‌, ಸುಬೇದಾರ್‌ ಕೆ. ಏಕನಾಥ ಶೆಟ್ಟಿ, ರಾಜಶೇಖರ್‌, ಓಸ್ವಾಲ್ಡ್‌ ನೊರೊನ್ಹ ಅವರ ನೆನಪಿನೊಂದಿಗೆ, ಅವರ ಬಲಿದಾನದ ಕುರಿತ ಸಮಗ್ರ ವಿವರ ಗಳನ್ನು ಪ್ರದರ್ಶಿಸಲಾಯಿತು. ಆ ಬಳಿಕ ಹುತಾತ್ಮ ಯೋಧರ ಕುಟುಂಬಗಳಿಗೆ ಗೌರವ ಸಮರ್ಪಿಸಲಾಯಿತು.

ವಿಧಾನ ಪರಿಷತ್‌ ವಿಪಕ್ಷ ಸಚೇತಕ ಕ್ಯಾ| ಗಣೇಶ್‌ ಕಾರ್ಣಿಕ್‌ ಮಾತನಾಡಿ, ವಿದೇಶದಲ್ಲಿ ದೇಶದ ಸೈನಿಕರಿಗಿರುವಷ್ಟು ಸ್ಥಾನಮಾನ, ಗೌರವ, ಸವಲತ್ತುಗಳು ನಮ್ಮ ದೇಶದಲ್ಲಿಲ್ಲ. ಯುಎಸ್‌ಎ ವಿಮಾನ ಹತ್ತುವ ಸಂದರ್ಭ ಮೊದಲ ಅವಕಾಶ ಮಾಜಿ ಸೈನಿಕರಿಗೆ, ನಾಸಾದಲ್ಲಿ ಯಾವುದೇ ದೇಶದ ಸೈನಿಕರಿರಲಿ ಆತನಿಗೆ ವಿಶೇಷ ಗೌರವ… ಈ ರೀತಿಯ ಮನೋಭಾವ ನಮ್ಮ ದೇಶದಲ್ಲೂ ಜಾಗೃತಿಯಾದಾಗ ಸೇನೆ ಮತ್ತು ಸೈನ್ಯದ ಮಹತ್ವ ತಿಳಿಯಲು ಸಾಧ್ಯವಿದೆ  ಎಂದರು. ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ಹುತಾತ್ಮ ಯೋಧರ ಸ್ಮರಣೆ ಪ್ರತೀ ಮನೆ ಮನೆಯಲ್ಲೂ ನಡೆಯಬೇಕಿದೆ ಎಂದರು.

Advertisement

ನಿಟ್ಟೆಗುತ್ತು ಕರ್ನಲ್‌ ಶರತ್‌ ಭಂಡಾರಿ, ಹರಿಕೃಷ್ಣ ಪುನರೂರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಹುತಾತ್ಮ ಯೋಧನ ಪತ್ನಿ ಎಂದಿಗೂ ಸುಮಂಗಲಿ
ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್‌ ಅವರ ಪತ್ನಿ ಮಹಾದೇವಿ ಮಾತನಾಡಿ, “ಹುತಾತ್ಮ ಯೋಧರು ಚಿರಂಜೀವಿಗಳು. ಅಂತಹ ಯೋಧನ ಪತ್ನಿ ತಾಳಿ, ಕುಂಕುಮ, ಬಳೆ, ಕಾಲುಂಗುರ ಎಂದಿಗೂ ತೆಗೆಯಲೇಬಾರದು. ಆಕೆ ಸುಮಂಗಲಿಯಾಗಿಯೇ ಇರಬೇಕು. ಹುತಾತ್ಮರಾದವರನ್ನು ನೆನೆದು ಎಂದಿಗೂ ಕಣ್ಣೀರು ಹಾಕಬಾರದು. ಅವರು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ. ಯೋಧರು ಹಾಗೂ ರೈತರು ದೇಶದ ಎರಡು ಕಣ್ಣುಗಳು. ದೇಶದಲ್ಲಿ ರೈತರು ಮತ್ತು ವೀರ ಯೋಧರು ಹುಟ್ಟಿ ಬಂದರೆ ಮಾತ್ರ ದೇಶ ಸುಭಿಕ್ಷವಾಗಿರಲು ಸಾಧ್ಯ. ಮಗಳು ನೇತ್ರಾಳನ್ನೂ ಸೇನೆಗೆ ಕಳುಹಿಸುತ್ತೇನೆ ಎಂಬ ಮಾತಿಗೆ ಇಂದಿಗೂ ಬದ್ಧಳಾಗಿದ್ದೇನೆ’ ಎಂದರು.

ಹುತಾತ್ಮ ತಂದೆಯೇ ನನ್ನ  ಹೀರೋ!
“ನನಗೆ ಬುದ್ಧಿ ತಿಳಿಯುವ ಮೊದಲೇ ನಾನು ತಂದೆಯನ್ನು ಕಳೆದು ಕೊಂಡಿದ್ದೇನೆ. ನಾನು ಈಗ ನನ್ನ ತಂದೆಯನ್ನು ಕಲ್ಪನೆ ಮಾಡಲು ಸಾಧ್ಯ ವಿಲ್ಲ. ದೇಶದ ಸೈನಿಕರಲ್ಲಿ ನಾನು ನನ್ನ ತಂದೆಯ ಪ್ರತಿರೂಪವನ್ನು ಕಾಣುತ್ತಿ ದ್ದೇನೆ. ಐ ಲವ್‌ ಮೈ ಫಾದರ್‌, ಐ ಲವ್‌ ಮೈ ಇಂಡಿಯಾ… ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನನ್ನ ತಂದೆಯೇ ನನಗೆ ನಿಜವಾದ ಹೀರೋ. ಅವರ ಬಗ್ಗೆ ಕೇಳುವಾಗಲೇ ನನಗೆ ಹೆಮ್ಮೆ ಅನಿಸುತ್ತಿದೆ. ನಾನು ಸೈನಿಕನ ಮಗಳು ಎನ್ನುವುದಕ್ಕೆ ನನಗೆ ಹೆಮ್ಮೆ’ ಇದು 2011ರಲ್ಲಿ ಮೃತರಾದ ಯೋಧ ಗಿರೀಶ್‌ ಕುಮಾರ್‌ ಅವರ 6ರ ಹರೆಯದ ಪುತ್ರಿ ವೈಷ್ಣವಿ ಹೇಳುತ್ತಿರುವಾಗ ಪುರಭವನದಲ್ಲಿ ನೆರೆದಿದ್ದ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು.

Advertisement

Udayavani is now on Telegram. Click here to join our channel and stay updated with the latest news.

Next