ಧಾರವಾಡ: ಶೈಕ್ಷಣಿಕ ವಿದ್ಯಾಭ್ಯಾಸಕ್ಕಿಂತ ಕಲೆ ಅಮೂಲ್ಯ ಆಗಿದ್ದು, ಕಲೆ ಮತ್ತು ಜೀವನ ಎರಡಕ್ಕೂ ಒಂದಕ್ಕೊಂದು ಸಂಬಂಧವಿದೆ. ಕಲೆ ಕರಗತ ಮಾಡಿಕೊಳ್ಳಲು ಒಂದು ಜನ್ಮ ಸಾಲದು ಎಂದು ಚಿತ್ರ ಕಲಾವಿದೆ ಶ್ಯಾಮಲಾ ಗುರುಪ್ರಸಾದ್ ಹೇಳಿದರು.
ನಗರದ ರಂಗಾಯಣ ಸಮುತ್ಛಯ ಭವನದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ “ಅನನ್ಯ ಮಹಿಳೆಯೊಂದಿಗೆ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇವಲ ಪದವಿ ಪಡೆದು ರೇಖೆ ಎಳೆದರೆ ಸಾಲದು.
ಒಂದು ಕೃತಿ ಉತ್ತಮವಾಗಿ ಮೂಡಿ ಬರಲು ಭಾವನೆ ಸಹ ಮುಖ್ಯ. ಕಲೆ ಇಲ್ಲದ ಜೀವನ ಮೃಗ ಅಥವಾ ಅನರ್ಥ ಜೀವನ ನಡೆಸಿದಂತೆ. ಹೀಗಾಗಿ ಜೀವನದಲ್ಲಿ ಯಾವುದಾರೊಂದು ಕಲೆ ಅಳವಡಿಸಿಕೊಂಡರೆ, ನಮ್ಮಲ್ಲಿ ಆಶ್ಚರ್ಯ- ಕುತೂಹಲ ಹುಟ್ಟುತ್ತದೆ.
ಇದರಿಂದ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು ಎಂದರು. ಬಾಲ್ಯದಲ್ಲಿ ನಾಟಕ, ಪುಸ್ತಕ, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಮದುವೆಯಾದ ನಂತರದಲ್ಲಿ ಚಿತ್ರಕಲೆ ಪ್ರಾರಂಭಿಸಿದೆ. ಮೊದಮೊದಲು ಮನೆಯವರು ಹಾಗೂ ನನ್ನ ಸುತ್ತಲಿನ ಜನ ಮಾತ್ರ ಕಲಾಕೃತಿ ವೀಕ್ಷಿಸುತ್ತಿದ್ದರು. ಕಾಲಾನಂತರದಲ್ಲಿ ಸಾರ್ವಜನಿಕ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸಲು ಪ್ರಾರಂಭಿಸಿದಾಗ ಅನೇಕ ಕಲಾಕೃತಿಗಳನ್ನು ತಿರಸ್ಕರಿಸಿದರು.
ಆಗ ಛಲದಿಂದ ಮತ್ತಷ್ಟು ಉತ್ತಮ ಕಲಾಕೃತಿಗಳ ತಯಾರಿಕೆಯಲ್ಲಿ ತೊಡಗಿದೆ ಎಂದು ಹೇಳಿದರು. ಸಂಘದ ಅಧ್ಯಕ್ಷೆ ಹೇಮಾ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪದ್ಮಾವತಿ ಭೋಸಲೆ ಪ್ರಾಸ್ತಾವಿಕ ಮಾತನಾಡಿದರು. ಸಿದ್ಧಲಿಂಗ ಪಟ್ಟಣಶೆಟ್ಟಿ, ಶಾಂತಾ ಇಮ್ರಾಪುರ, ಶ್ಯಾಮಸುಂದರ ಬಿದರಕುಂದಿ, ಸುನಂದಾ ಕಡಮೆ ಇತರರಿದ್ದರು.