ಕೋಟ: ಬೇಸಗೆಯ ತಾಪಕ್ಕೆ ಭೂಮಿ ಕೆಂಡದಂತೆ ಸುಡುತ್ತಿದೆ. ನೀರಿನ ಮೂಲಗಳು ಬತ್ತಿ ಬರಿದಾಗುತ್ತಿವೆ. ಪ್ರತಿನಿತ್ಯ ಜಲಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಹಾಗೆಯೇ ಒಂದು ಕ್ಷಣ ಬೇಸಗೆಯಲ್ಲಿ ಪ್ರಾಣಿ-ಪಕ್ಷಿಗಳ ಸ್ಥಿತಿಯ ಬಗ್ಗೆ ಯೋಚಿಸುವ. ನೀರಿನ ಮೂಲಗಳು ಬರಿದಾಗಿರುವಾಗ ಇವುಗಳ ಬಾಯಾರಿಕೆ ನೀಗಲು ನೆರವಾಗುವವರು ಯಾರು ಎಂದು ಸ್ವಲ್ಪ ಆಲೋಚಿಸುವ. ಹೌದು ಯಾವುದೇ ಜೀವಿಗಾದರೂ ಅವುಗಳ ದೇಹದ ತೂಕಕ್ಕೆ ತಕ್ಕಂತೆ ನಿರ್ದಿಷ್ಟ ಪ್ರಮಾಣದ ನೀರು ಕುಡಿಯಲೇಬೇಕು. ಮನುಷ್ಯ ಕಷ್ಟಪಟ್ಟಾದರು ಕುಡಿಯಲು ನೀರು ದಕ್ಕಿಸಿಕೊಳ್ಳುತ್ತಾನೆ. ಆದರೆ ಪ್ರಾಣಿ-ಪಕ್ಷಿಗಳ ಪಾಡು ಹೇಳತೀರದು. ಅವು ನೀರು ಸಿಗದೆ ಕೆಲವೊಮ್ಮೆ ಸಾವನ್ನಪ್ಪುತ್ತವೆ. ಕೋತಿ, ನಾಯಿ, ಜಾನುವಾರು, ಕಾಡುಪ್ರಾಣಿಗಳು ಬೇಸಗೆಯ ಬಿಸಿಲ ತಾಪದಿಂದ ತತ್ತರಿಸಿ ಕೆಲವೊಮ್ಮೆ ಮನೆಯೊಳಗೆ ಲಗ್ಗೆ ಇಡುತ್ತವೆ. ಆದ್ದರಿಂದ ಇಂತಹ ಪ್ರಾಣಿ – ಪಕ್ಷಿಗಳ ದಾಹ ನೀಗುವ ಕುರಿತು ಮನುಷ್ಯರಾದ ನಾವು ಸ್ವಲ್ಪ ಯೋಚಿಸಬೇಕಿದೆ.
ಅರಿವು ಮೂಡಿಸಲು ಮುಂದಾದ ಸಾಸ್ತಾನ ಮಿತ್ರರು
ಅನೇಕ ಸಮಾಜಮುಖೀ ಕಾರ್ಯ ಕ್ರಮಗಳ ಮೂಲಕ ಮಾನವೀಯ ಸೇವೆಗೈಯುತ್ತಿರುವ ಸಾಸ್ತಾನದ, ಸಾಸ್ತಾನ ಮಿತ್ರರು ಎನ್ನುವ ಸಂಘಟನೆ ಈ ಬಾರಿ ಪ್ರಾಣಿ – ಪಕ್ಷಿಗಳ ಜಲದಾಹದ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಸಂಘಟನೆಯ ಸದಸ್ಯರು ತಮ್ಮ ಮನೆಯ ತೆರೆದ ಸ್ಥಳಗಳಲ್ಲಿ ಹಕ್ಕಿ – ಪಕ್ಷಿಗಳಿಗೆ ನೀರನ್ನು ಇಡುವ ಮೂಲಕ ಅವುಗಳಿಗೆ ನೆರವಾಗಿದ್ದಾರೆ ಹಾಗೂ ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ನೀಡಿ ಜನ ಜಾಗೃತಿ ಮೂಡಿಸುತ್ತಿದ್ದಾರೆ.
ನಮ್ಮ ಜತೆ ಸ್ನೇಹ ಸಂಪಾದಿಸುತ್ತವೆ: ಪ್ರಾಣಿ – ಪಕ್ಷಿಗಳಿಗೆ ನೀರು, ಆಹಾರಗಳನ್ನು ನೀಡುತ್ತ ಬಂದರೆ ಅವು ಕ್ರಮೇಣ ನಮ್ಮ ಜತೆ ಸ್ನೇಹ ಸಂಪಾದಿಸುತ್ತವೆ. ಪ್ರತಿ ನಿತ್ಯ ಮನೆಗೆ ಭೇಟಿ ನೀಡಿ ನಮ್ಮ ಜತೆ ಸಲುಗೆ ಬೆಳೆಸಿಕೊಳ್ಳುತ್ತವೆ. ಒಂದು ವೇಳೆ ನೀರು ಖಾಲಿಯಾದರೆ ತಮ್ಮದೇ ಭಾಷೆಯಲ್ಲಿ ನಮಗೆ ತಿಳಿಸುತ್ತವೆ. ನಾವು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ನಾವು ಹೇಳಿದಂತೆ ಕೇಳತೊಡಗುತ್ತವೆ. ಒಟ್ಟಾರೆ ಬೇಸಗೆಯಲ್ಲಿ ಪ್ರಾಣಿ- ಪಕ್ಷಿಗಳ ಜಲದಾಹವನ್ನು ತೀರಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ ಹಾಗೂ ಹಸಿದವನಿಗೆ ಊಟ, ಬಾಯಾರಿಕೆಯಾದವನಿಗೆ ಕುಡಿಯಲು ನೀರು ನೀಡಿದರೆ ಪುಣ್ಯ ಲಭಿಸುತ್ತದೆ ಎನ್ನುವ ಮಾತಿನಂತೆ ಪ್ರಾಣಿ – ಪಕ್ಷಿಗಳು ಕುಡಿಯಲು ನೀರು-ಆಹಾರ ನೀಡಿದ್ದಕ್ಕಾಗಿ ಪುಣ್ಯ ಲಭಿಸುತ್ತದೆ.
ಹೀಗೆ ನೆರವಾಗಬಹುದು
ಮನೆಯ ಸಮೀಪ ಅಥವಾ ಇತರ ಸ್ಥಳಗಳಲ್ಲಿ ತೊಟ್ಟಿ ನಿರ್ಮಿಸಿ ಅಥವಾ ಪಾತ್ರೆಗಳಲ್ಲಿ ನೀರು ಸಂಗ್ರಹಿಸಿಟ್ಟರೆ ಪ್ರಾಣಿ – ಪಕ್ಷಿಗಳು ತಮ್ಮ ಜಲದಾಹ ತೀರಿಸಿಕೊಳ್ಳುತ್ತವೆ ಹಾಗೂ ಪಕ್ಷಿಗಳಿಗೆ ಮನೆಯ ಛಾವಣಿಯ ಮೇಲೆ, ಇತರ ತೆರೆದ ಸ್ಥಳಗಳಲ್ಲಿ ಬಾಟಲಿ, ಕುಂಡಗಳಲ್ಲಿ ನೀರು ಹಾಕಿಡಬಹುದು. ನೀರಿನ ಜತೆಗೆ ಸ್ವಲ್ಪ ಅಕ್ಕಿ ಮುಂತಾದ ಆಹಾರ ಧಾನ್ಯಗಳನ್ನು ಇಟ್ಟರೆ ಪಕ್ಷಿಗಳಿಗೆ ಅನುಕೂಲವಾಗುತ್ತದೆ.
ಬೇಸಗೆಯಲ್ಲಿ ಕುಡಿಯಲು ನೀರು ಸಿಗದೆ ಪ್ರಾಣಿ – ಪಕ್ಷಿಗಳು ಸಾವನ್ನಪ್ಪುತ್ತವೆ. ಪ್ರತಿ ಮನೆಗಳಲ್ಲೂ ಇವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಹಲವು ಜೀವಗಳನ್ನು ಕಾಪಾಡಬಹುದು. ಈ ಕುರಿತು ಸಾಸ್ತಾನ ಮಿತ್ರರು ಎನ್ನುವ ನಮ್ಮ ಸಂಘಟನೆ ಮೂಲಕ ಅಭಿಯಾನ ನಡೆಸುತ್ತಿದ್ದು, ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.
– ವಿನಯ ಚಂದ್ರ ಸಾಸ್ತಾನ, ಮುಖ್ಯಸ್ಥರು ಸಾಸ್ತಾನ ಮಿತ್ರರು ಸಂಘಟನೆ
– ರಾಜೇಶ ಗಾಣಿಗ ಅಚ್ಲಾಡಿ