ರಾಯಚೂರು: ರಾಜ್ಯದಲ್ಲಿ ಹಲವು ರೈಸ್ ಮಿಲ್‌ಗಳು ಕೆಲಸವಿಲ್ಲದೆ ಬಾಗಿಲು ಮುಚ್ಚುತ್ತಿವೆ. ಹೀಗಾಗಿ, ಅನ್ನಭಾಗ್ಯ ಯೋಜನೆಯಡಿ ಭತ್ತ ಹಲ್ಲಿಂಗ್ ಕೆಲಸ ನೀಡುವ ಮೂಲಕ ಅಸ್ತಿತ್ವ ಕಳೆದುಕೊಳ್ಳುತ್ತಿರುವ ರೈಸ್ ಮಿಲ್‌ಗಳ ಬಲವರ್ಧನೆಗೆ ಮಾಲೀಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕಳೆದ ಐದು ವರ್ಷದಲ್ಲಿ ಒಂದು ಸಾವಿರಕ್ಕೂ ಅಧಿಕ ಮಿಲ್‌ಗಳು ಅಸ್ತಿತ್ವ ಕಳೆದುಕೊಂಡಿದ್ದು, ಸಾಕಷ್ಟು ಮಿಲ್‌ಗಳು ಸಂಕಷ್ಟದಲ್ಲಿವೆ. 2014ರಲ್ಲಿ 2500ಕ್ಕೂ ಅಧಿಕ ಇದ್ದ ಮಿಲ್‌ಗಳ ಸಂಖ್ಯೆ 2018ರ ವೇಳೆಗೆ 1500ರ ಆಸುಪಾಸಿಗೆ ಕುಸಿದಿದೆ ಎನ್ನುತ್ತವೆ ಮೂಲಗಳು. ಹೀಗಾಗಿ, ರೈಸ್ ಮಿಲ್ಲರ್ ಅಸೋಸಿಯೇಷನ್ ಸರ್ಕಾರದ ಕದ ತಟ್ಟಿದ್ದು, ಅನ್ನಭಾಗ್ಯಕ್ಕಾಗಿ ಖರೀದಿಸುತ್ತಿರುವ ಭತ್ತವನ್ನು ನಮ್ಮ ಮಿಲ್‌ಗಳಲ್ಲೇ ಹಲ್ಲಿಂಗ್ ಮಾಡಿಸಬೇಕು ಎಂಬ ಬೇಡಿಕೆ ಇಟ್ಟಿದೆ.
ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರ ಪಂಜಾಬ್, ಸೀಮಾಂಧ್ರ, ಛತ್ತೀಸ್‌ಘಡ್ ಸೇರಿ ಬೇರೆ ರಾಜ್ಯಗಳಿಂದ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ, ಈಗ ಎರಡು ಕೆಜಿ ಅಕ್ಕಿ ಹೆಚ್ಚು ನೀಡುವ ಭರವಸೆ ನೀಡಿದ್ದರಿಂದ 2 ಲಕ್ಷ ಮೆಟ್ರಿಕ್ ಟನ್‌ಗೂ ಅ ಧಿಕ ಅಕ್ಕಿ ಬೇಕಾಗಬಹುದು ಎನ್ನಲಾಗುತ್ತಿದೆ. ರಾಜ್ಯದ ರೈತರ ಹಿತದೃಷ್ಟಿಯಿಂದ ಸರ್ಕಾರ 1750 ರೂ.ಬೆಂಬಲ ನೀಡಿ ಭತ್ತ ಖರೀದಿಸಲು ಮುಂದಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಮಿಲ್‌ಗಳನ್ನು ಬಲವರ್ಧನೆಗೊಳಿಸುವಂತೆ ಮನವಿ ಮಾಡಲಾಗುತ್ತಿದೆ.
ಒಂದು ಸುತ್ತಿನ ಮಾತುಕತೆ:ಈ ಕುರಿತು ಈಗಾಗಲೇ ಸರ್ಕಾರದೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿರುವ ರೈಸ್ ಮಿಲ್ಲರ್ ಅಸೋಸಿಯೇಷನ್, ಕೆಲ ಷರತ್ತುಗಳ ಆಧಾರದಡಿ ಈ ಯೋಜನೆ ಜಾರಿಗೆ ಮನವಿ ಮಾಡಿದೆ. ಮುಖ್ಯವಾಗಿ ಈಗ ಹಲ್ಲಿಂಗ್‌ಗೆ ಸರ್ಕಾರ ನಿಗದಿ ಮಾಡಿದ ದರ ಪರಿಷ್ಕರಣೆ ಮಾಡಬೇಕು. ಹಲ್ಲಿಂಗ್ ಮಾಡಿದ ಮರುಕ್ಷಣವೇ ದಾಸ್ತಾನು ಖಾಲಿ ಮಾಡಬೇಕು. ಹಳೇ ಚೀಲಗಳಲ್ಲಿ ಅಕ್ಕಿ ತುಂಬಲು ಅವಕಾಶ ಕೊಡಬೇಕು. ಇಲ್ಲವೇ ಹೊಸ ಚೀಲದ ಖರ್ಚನ್ನು ಸರ್ಕಾರವೇ ಭರಿಸಬೇಕು. ಏಳು ದಿನದೊಳಗೆ ಹಲ್ಲಿಂಗ್ ಮಾಡಿದ ವೆಚ್ಚ ಭರಿಸಬೇಕು ಎಂಬಿತ್ಯಾದಿ ವಿಚಾರಗಳನ್ನು ಪ್ರಸ್ತಾಪಿಸಿದೆ.
ದಕ್ಷಿಣ ಕರ್ನಾಟಕದಲ್ಲೇ ಹೆಚ್ಚು: ಅನ್ನಭಾಗ್ಯದ ಅಕ್ಕಿ ದಪ್ಪವಾಗಿರುವ ಕಾರಣ ಅಂಥ ಅಕ್ಕಿಯನ್ನು ಮಂಡ್ಯ, ಮೈಸೂರು, ಹಾಸನ, ಚನ್ನಪಟ್ಟಣ ಭಾಗದಲ್ಲೇ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಹೈ-ಕ ಭಾಗದಲ್ಲಿ ಹೆಚ್ಚಾಗಿ ಸೋನಾ ಮಸೂರಿ, ಆರ್‌ಎನ್‌ಆರ್ ಹಾಗೂ ಬಾಸುಮತಿ ಬೆಳೆಯುವುದರಿಂದ ದರ ದುಬಾರಿಯಾಗಲಿದೆ. ಹೀಗಾಗಿ ಸರ್ಕಾರ ವಿ ಧಿಸಿದ ಬೆಂಬಲ ಬೆಲೆಗೆ ಅಕ್ಕಿ ನೀಡುವುದು ಕಷ್ಟ ಎಂದು ಈ ಭಾಗದ ರೈತರು, ರೈಸ್‌ಮಿಲ್‌ಗಳ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಇಷ್ಟು ದಿನ ಸರ್ಕಾರ ಬೇರೆಡೆಯಿಂದ ಅಕ್ಕಿ ತರುತ್ತಿದ್ದ ಕಾರಣ ಇಲ್ಲಿನ ರೈತರು ಕೇರಳ, ತಮಿಳುನಾಡಿಗೆ ಅಕ್ಕಿ ಸಾಗಿಸುತ್ತಿದ್ದರು. ಇದರಿಂದ ರೈತರಿಗೂ ಅನಗತ್ಯ ಖರ್ಚು ಎದುರಾಗಿ ನಿರೀಕ್ಷಿತ ಲಾಭ ಕಂಡಿರಲಿಲ್ಲ. ಈ ಬಾರಿ ಸರ್ಕಾರವೇ ಖರೀದಿಗೆ ಮುಂದಾಗಿರುವುದರಿಂದ ರೈತರು, ರೈಸ್‌ಮಿಲ್ ಮಾಲೀಕರಿಗೂ ಅನುಕೂಲವಾಗಲಿದೆ. ಅಲ್ಲದೆ, ಆಯಾ ಜಿಲ್ಲೆಗಳ ಅಕ್ಕಿ ಅಲ್ಲಿಯೇ ಸಿದ್ಧಗೊಳ್ಳುವುದರಿಂದ ಸರ್ಕಾರಕ್ಕೆ ಸಾರಿಗೆ ವೆಚ್ಚವೂ ಉಳಿಯಲಿದೆ.
ರಾಜ್ಯದಲ್ಲಿ ಸಣ್ಣಪುಟ್ಟ ರೈಸ್ ಮಿಲ್‌ಗಳು ಸಾಕಷ್ಟು ಸಂಕಷ್ಟ ಎದುರಿಸುತ್ತಿವೆ. ನಿರೀಕ್ಷಿತ ಮಟ್ಟದ ವಹಿವಾಟು ನಡೆಸಲಾಗದೆ ನಷ್ಟ ಮೈಮೇಲೆ ಎಳೆದುಕೊಳ್ಳುವ ಸನ್ನಿವೇಶ ಇದೆ. ಹೀಗಾಗಿ ಅನ್ನಭಾಗ್ಯಕ್ಕಾಗಿ ಖರೀದಿಸುತ್ತಿರುವ ಭತ್ತವನ್ನು ರಾಜ್ಯದ ರೈಸ್‌ಮಿಲ್‌ಗಳಲ್ಲೇ ಹಲ್ಲಿಂಗ್ ಮಾಡಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರದಿಂದಲೂ ಪೂರಕ ಪ್ರತಿಕ್ರಿಯೆ ಬಂದಿದೆ.
– ಸಾವಿತ್ರಿ ಪುರುಷೋತ್ತಮ್, ರಾಜ್ಯ ಕಾರ್ಯಾಧ್ಯಕ್ಷ, ರೈಸ್ ಮಿಲ್ಲರ್ ಅಸೋಸಿಯೇಷನ್
– ಸಿದ್ಧಯ್ಯಸ್ವಾಮಿ ಕುಕನೂರು