Advertisement
ಶುಲ್ಕ ನಿಗದಿಗೆ ಸಂಬಂಧಿಸಿ ಕರ್ನಾಟಕ ಸರಕಾರ ಹಾಗೂ ಖಾಸಗಿ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಗಳ ನಡುವೆ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲೂ ಹಗ್ಗಜಗ್ಗಾಟ ನಡೆದೇ ಇರುತ್ತದೆ. ಸ್ನೇಹಿತರ ನಡುವಿನ ಕುಸ್ತಿಯಂತೆ ಕಾಣುವ ಈ ಜಗಳದಲ್ಲಿ ಬಹುಪಾಲು ಸರಕಾರವೇ ಶರಣಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳೇ ಗೆಲುವಿನ ನಗೆ ಬೀರುವುದು.
Related Articles
Advertisement
ಅನುದಾನರಹಿತ ಖಾಸಗಿ ವೃತ್ತಿಪರ ಕಾಲೇಜುಗಳ ಆದಾಯ ಹಾಗೂ ಖರ್ಚುಗಳ ವಿವರವಾದ ಪರಿಶೀಲನೆಯ ಬಳಿಕ ಈ ಸಮಿತಿ ಈ ಶೈಕ್ಷಣಿಕ ವರ್ಷದ ಶುಲ್ಕದಲ್ಲಿ ಶೇ. 8ರಷ್ಟು ಏರಿಕೆ ಮಾಡಲು ಶಿಫಾರಸ್ಸು ಮಾಡಿದೆ. ಆದರೆ ಈಗಿರುವ ಶುಲ್ಕ ರಚನೆಯಲ್ಲಿ ಶೇ. 15ರಿಂದ ಶೇ. 30ರಷ್ಟು ಏರಿಕೆ ಮಾಡಬೇಕು ಎಂಬುದು ಖಾಸಗಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಸಂಘದ ಬೇಡಿಕೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದಾಗ ಖಾಸಗಿ ವೈದ್ಯಕೀಯ ಕಾಲೇಜುಗಳು ಶೇ. 50ರಷ್ಟು ಶುಲ್ಕ ಏರಿಕೆ ಮಾಡುವಂತೆ ಕೇಳಿದ್ದವು.
ಸಹಮತದ ಒಪ್ಪಂದದ ಸಿಂಧುತ್ವನ್ಯಾಯಸಮ್ಮತವಾದ ಶುಲ್ಕ ನಿಗದಿಯನ್ನು ಶಿಫಾರಸ್ಸು ಮಾಡುವ ಜತೆಗೆ, 2006ರ ಕರ್ನಾಟಕ ವೃತ್ತಿ ಶಿಕ್ಷಣ ಕಾಯ್ದೆ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಅನುಸಾರ, ಸಹಮತದ ಒಪ್ಪಂದಗಳಲ್ಲಿ ಸರಕಾರ ಒಳಗೊಳ್ಳುವಂತಿಲ್ಲ ಎಂದು ಸೂಚಿಸಿದೆ. “ಸುಪ್ರೀಂ ಕೋರ್ಟಿನ ನಿರ್ದೇಶನದಂತೆ, ಸರಕಾರದೊಂದಿಗೆ ವ್ಯವಹರಿಸಿ, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳು ಲಾಭ ಮಾಡಿಕೊಳ್ಳುವುದನ್ನು ತಡೆಗಟ್ಟಲು ಈ ಕಾಯ್ದೆ ರಚನೆಯಾಗಿದೆ. ವಿದ್ಯಾರ್ಥಿಗಳ ಹಿತ ಕಡೆಗಣಿಸಿ ಸರಕಾರ ಹಾಗೂ ಶಿಕ್ಷಣ ಸಂಸ್ಥೆಗಳು ಯಾವುದೇ ಖಾಸಗಿ ಒಪ್ಪಂದಗಳನ್ನು ಮಾಡಿಕೊಳ್ಳುವಂತಿಲ್ಲ’ ಎಂದು ಸ್ಪಷ್ಟ ನುಡಿಗಳಲ್ಲಿ ತಿಳಿಸಿದೆ. ವಿದ್ಯಾರ್ಥಿಗಳ ಹಿತ ಹಾಗೂ ಅರ್ಹತೆಯನ್ನು ಬಲಿಗೊಟ್ಟು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಲಾಭ ಮಾಡಿಕೊಳ್ಳುವುದನ್ನು ತಡೆಯುವುದೇ ಕಾಯ್ದೆಯ ಉದ್ದೇಶ. ಇದು ಅಲ್ಪಸಂಖ್ಯಾಕ ಹಾಗೂ ಅಲ್ಪಸಂಖ್ಯಾಕವಲ್ಲದ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಹಾಗಿದ್ದರೂ, ಸರಕಾರಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಶುಲ್ಕ ನಿಯಂತ್ರಣ ಸಮಿತಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಸರಕಾರ ಹಾಗೂ ಖಾಸಗಿ ಕಾಲೇಜುಗಳು ಸಹಿ ಮಾಡಿರುವ ಸಹಮತದ ಒಪ್ಪಂದದ ಸಿಂಧುತ್ವವನ್ನು ಪ್ರಶ್ನಿಸಿ ನಾಗರಿಕರೊಬ್ಬರು ಹೈಕೋರ್ಟ್ ಮೊರೆಹೋಗಿದ್ದು ಗಮನಾರ್ಹ. ಮೂಲ ಕಾಯ್ದೆಗೆ ಸರಕಾರ ಹಲವು ತಿದ್ದುಪಡಿಗಳನ್ನು ತಂದಿರುವುದನ್ನು ಸಮಿತಿ ಉಲ್ಲೇಖೀಸಿದೆ. 2015ರಲ್ಲಿ ತಂದಿರುವ ಪ್ರಮುಖ ತಿದ್ದುಪಡಿಯೊಂದು ಸಹಮತದ ಒಪ್ಪಂದಕ್ಕೆ ಒಳಪಡಲು ಸರಕಾರಕ್ಕೆ ಅವಕಾಶ ನೀಡುವ ಅಂಶವನ್ನು ಒಳಗೊಂಡಿದೆ. ಮಹಾರಾಷ್ಟ್ರ ಸರಕಾರದ ವಿರುದ್ಧ ಪಿ.ಎ. ಇನಾಮ್‌ದಾರ್ ಹಾಗೂ ಇತರರು ಹೂಡಿರುವ 2005ರ ದಾವೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಈ ತಿದ್ದುಪಡಿಯು ವಿರುದ್ಧವಾಗಿದೆ ಹಾಗೂ ಕಾಯ್ದೆಯ ಮೂಲ ಉದ್ದೇಶಕ್ಕೇ ವ್ಯತಿರಿಕ್ತವಾಗಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ, ಯಾವುದೇ ವೃತ್ತಿಪರ ಶಿಕ್ಷಣ ಸಂಸ್ಥೆಗೆ ಪ್ರವೇಶ, ಅದು ಅಲ್ಪಸಂಖ್ಯಾಕ ಸಂಸ್ಥೆಯಾಗಿರಲಿ ಇಲ್ಲದಿರಲಿ ಸರಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮೂಲಕವೇ ನಡೆಯಬೇಕು. ಅರ್ಹತೆಯ ಮಾನದಂಡದಲ್ಲಿ ಪ್ರವೇಶ ಪ್ರಕ್ರಿಯೆ ನ್ಯಾಯಸಮ್ಮತವಾಗಿ ನಡೆಯಬೇಕು. ಶುಲ್ಕ ನಿಗದಿಯನ್ನು ನಿಯಂತ್ರಣ ಸಮಿತಿ ಮಾಡುತ್ತದೆ. ಆದರೆ, ಸಹಮತದ ಒಪ್ಪಂದದ ಮೂಲಕ ಶುಲ್ಕ ನಿಗದಿ ಮಾಡಿಕೊಳ್ಳುವ ಕುರಿತಾಗಿ ಕಾಯ್ದೆಯಲ್ಲಿ ಎಲ್ಲಿಯೂ ಏನನ್ನೂ ಹೇಳಿಲ್ಲ. ವೃತ್ತಿಪರ ಕಾಲೇಜುಗಳ ಹಿತಾಸಕ್ತಿ ಕಾಯಲು ಬದ್ಧರಾಗಿರುವ ಕೆಲವು ಹಿರಿಯ ಅಧಿಕಾರಿಗಳು ಶುಲ್ಕ ನಿಗದಿ ಸಮಿತಿಯಿಂದ ದೂರವುಳಿಯಲು ಯತ್ನಿಸುತ್ತಿದ್ದಾರೆ. ಸಾಲದೆಂಬಂತೆ, ಶುಲ್ಕ ನಿಗದಿಗೆ ಸಂಬಂಧಿಸಿ ಕಾಲೇಜುಗಳ ಆಡಳಿತ ಮಂಡಳಿಗಳೊಂದಿಗೆ ಸಹಮತದ ಒಪ್ಪಂದ ಮಾಡಿಕೊಳ್ಳುವಂತೆ ಪ್ರತಿಪಾದಿಸುತ್ತಿರುವುದು ಬೆರಗು ಮೂಡಿಸುತ್ತಿದೆ. ಅಂತಹ ಒಪ್ಪಂದಗಳ ಕುರಿತಾಗಿ ಸಮಿತಿಯು ನಕಾರಾತ್ಮಕ ಭಾವನೆ ತಾಳಿರುವುದನ್ನು ತಿಳಿದೂ ಅವರು ಅದನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೂ ಶುಲ್ಕ ನಿಗದಿ ಸಮಿತಿಯ ಶಿಫಾರಸುಗಳ ಪರವಾಗಿ ನಿಲ್ಲುವ ಬದಲು ಅದರಲ್ಲಿ ಕಾರ್ಯ ವಿಧಾನದ ಲೋಪಗಳನ್ನು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸರಕಾರದ ಪ್ರಕಾರ, ಸಮಿತಿ ತನ್ನ ಶಿಫಾರಸುಗಳನ್ನು ಸರಕಾರಕ್ಕೆ ಕಳುಹಿಸಬೇಕು, ನೇರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗಲ್ಲ. ಅಷ್ಟಲ್ಲದೆ, ಶುಲ್ಕ ರಚನೆ ಕುರಿತಾಗಿ ಸಮಿತಿ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ನೀಡಿರುವುದನ್ನು ಪ್ರಶ್ನಿಸಿ ಸರಕಾರ ಹೈಕೋರ್ಟ್ ಮೆಟ್ಟಿಲೇರಲೂ ಪ್ರಯತ್ನಿಸುತ್ತಿದೆ. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶ ನೀಡುವ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗಳು ಅಧಿಕ ಶುಲ್ಕ ವಿಧಿಸಿ ವಿದ್ಯಾರ್ಥಿಗಳ ಸುಲಿಗೆ ಮಾಡುವ ಸಮಸ್ಯೆ ನಿಭಾಯಿಸುವ ನಿಟ್ಟಿನಲ್ಲಿ ಸಮಿತಿಯು ಶ್ಲಾಘನೀಯ ಕೆಲಸ ಮಾಡಿದೆ. ಈ ಸಂಸ್ಥೆಗಳು ಬೋಧನಾ ಶುಲ್ಕದ ಹೆಸರಿನಲ್ಲಿ ಕ್ಯಾಪಿಟೇಶನ್ ಶುಲ್ಕ ಸಂಗ್ರಹಿಸಿ ಲಾಭ ಮಾಡಿಕೊಳ್ಳುತ್ತಿದ್ದವು. ಖಾಸಗಿ ದಂತ ವೈದ್ಯಕೀಯ ಕಾಲೇಜೊಂದು 2018-19ನೇ ಶೈಕ್ಷಣಿಕ ವರ್ಷಕ್ಕೆ 19.30 ಲಕ್ಷ ರೂ. ಬೋಧನಾ ಶುಲ್ಕ ನಿಗದಿಗೊಳಿಸುವಂತೆ ಸಮಿತಿಯ ಮುಂದೆ ಪ್ರಸ್ತಾವನೆಯಿಟ್ಟಿದೆ. ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ವೆಚ್ಚ ತೀವ್ರವಾಗಿ ಹೆಚ್ಚುತ್ತಿರುವುದರಿಂದಲೇ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯೂ ದುಬಾರಿಯಾಗುತ್ತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಚಾರಿಟೆಬಲ್ ಆಸ್ಪತ್ರೆಗಳಲ್ಲಿ ವಾರ್ಡುಗಳ ದರ ಪಂಚತಾರಾ ಹೊಟೇಲ್‌ಗಳನ್ನೂ ಮೀರಿಸುವಂತಿದೆ. ಇಂತಹ ಆಸ್ಪತ್ರೆಗಳಿಗೆ ಸ್ಥಳೀಯ ಸಂಸ್ಥೆಗಳೂ ವಾರ್ಷಿಕ ಲೆಕ್ಕದಲ್ಲಿ ತೀರಾ ಕನಿಷ್ಠ ಬಾಡಿಗೆಗೆ ಜಾಗ ಕೊಟ್ಟಿವೆ. ಏರಿಕೆಗೆ ನಿಜವಾದ ಕಾರಣ ಏನೆಂಬುದನ್ನು ಅರಿಯಲು ಪ್ರಯತ್ನಿಸದೆ ಸರಕಾರ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚದ ಮೇಲೆ ನಿಯಂತ್ರಣ ಹೇರುವ ಕಾಯ್ದೆ ರೂಪಿಸಲು ಸಿದ್ಧತೆ ನಡೆಸಿದೆ. ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳ ಶುಲ್ಕ
ಖಾಸಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಶುಲ್ಕ ನಿಗದಿಪಡಿಸುವ ಅಧಿಕಾರ ತನಗಿದೆ ಎಂದು ಸಮಿತಿ ಹೇಳಿರುವುದನ್ನು ಗಮನಿಸಬೇಕು. ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳು ಸ್ನಾತಕೋತ್ತರ ಕೋರ್ಸ್‌ಗಳಿಗಿಂತ ಹೆಚ್ಚೇನೂ ಇಲ್ಲ. ಈ ಕೋರ್ಸ್‌ಗಳಿಗೆ ಶುಲ್ಕ ನಿಗದಿಪಡಿಸುವ ವಿಚಾರದಲ್ಲಿ ಖಾಸಗಿ ಸಂಸ್ಥೆಗಳು ತಮ್ಮದೇ ನೀತಿ ಅನುಸರಿಸುತ್ತಿವೆ. ಯಾವ ಸರಕಾರ ಅಥವಾ ಉನ್ನತಾಧಿಕಾರ ಸಮಿತಿ ಈ ಕೋರ್ಸುಗಳಿಗೆ ಈವರೆಗೂ ಶುಲ್ಕ ನಿಗದಿಪಡಿಸಿದ ನಿದರ್ಶನಗಳಿಲ್ಲ. ಈ ವಿಚಾರ ಆಯಾ ಸಂಸ್ಥೆಗಳಿಗೆ ಸಂಬಂಧಿಸಿದ್ದು ಎಂಬಂತಿದೆ. ತಾವೆಷ್ಟು ಶುಲ್ಕ ಸ್ವೀಕರಿಸುತ್ತೇವೆ ಎಂಬ ಕುರಿತು ಶಿಕ್ಷಣ ಸಂಸ್ಥೆಗಳು ಸರಕಾರಕ್ಕೂ ಮಾಹಿತಿ ನೀಡುತ್ತಿಲ್ಲ. ಒಂದು ಶಿಕ್ಷಣ ಸಂಸ್ಥೆಯ ವಿಚಾರದಲ್ಲಿ, ಸಮಿತಿಯು ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗೆ 7.6 ಲಕ್ಷ ಹಾಗೂ ಸ್ನಾತಕೋತ್ತರ ಶಿಕ್ಷಣಕ್ಕೆ 3.8 ಲಕ್ಷ ರೂ. ಶುಲ್ಕ ನಿಗದಿಗೊಳಿಸಿದೆ. ಸ್ಥಳೀಯ ವಿದ್ಯಾರ್ಥಿಗಳಿಗಿಂತ ಅನಿವಾಸಿ ಭಾರತೀಯ (ಎನ್‌ಆರ್‌ಐ) ವಿದ್ಯಾರ್ಥಿಗಳಿಗೆ ಹತ್ತು ಪಟ್ಟು ಹೆಚ್ಚು ಶುಲ್ಕ ವಿಧಿಸಲು ಸಮಿತಿ ಅವಕಾಶ ಮಾಡಿಕೊಟ್ಟಿದೆ. 2006ರ ಕಾಯ್ದೆ ಪ್ರಕಾರ, ಅನಿವಾಸಿ ಭಾರತೀಯ ವಿದ್ಯಾರ್ಥಿಗಳಿಂದ ಸ್ವೀಕರಿಸುವ ಹೆಚ್ಚುವರಿ ಶುಲ್ಕವನ್ನು ಇಲ್ಲಿನ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲು ಬಳಸಬೇಕು ಎಂಬ ಅಂಶ ಹಲವರಿಗೆ ಗೊತ್ತಿಲ್ಲ. ಖಾಸಗಿ ಕಾಲೇಜುಗಳು ಅರ್ಹ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ನೀಡುತ್ತಿವೆಯೇ ಎಂಬುದನ್ನು ಹೊಸ ಸರಕಾರ ಗಮನಿಸಬೇಕು. ಇಲ್ಲದಿದ್ದರೆ, ದುರ್ಬಲ ವರ್ಗಗಳ ಹಿತ ಕಾಯುವ ಸರಕಾರದ ಹಾಗೂ ಮಂತ್ರಿಗಳ ಉದ್ದೇಶ ಈಡೇರುವುದಿಲ್ಲ.
ಹೊಸ ಸರಕಾರ ವಿದ್ಯಾರ್ಥಿಗಳ ಪರ ನಿಲ್ಲುವುದೇ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳ ಜತೆ ಕೈಜೋಡಿಸುವುದೇ ಎಂಬುದನ್ನು ನೋಡಬೇಕಿದೆ. ಜಸ್ಟೀಸ್ ಶೈಲೇಂದ್ರ ಕುಮಾರ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಲೂ ಇದು ಸಕಾಲ. – ಅರಕೆರೆ ಜಯರಾಮ್