ಲಂಡನ್: ಖುಷಿಯನ್ನು ಸಂಭ್ರಮಿಸುವ ಪರಿ ಒಬ್ಬೊಬ್ಬರದು ಒಂದೊಂದು ರೀತಿ. ಕೆಲವರು ಕೇಕ್ ಕತ್ತರಿಸಿ ಖುಷಿಪಟ್ಟರೆ, ಇನ್ನು ಕೆಲವರು ಗುಂಡು – ತುಂಡು ಎಂದು ಖುಷಿಪಡುವವರೂ ಇರುತ್ತಾರೆ. ವಿಶ್ವದಾಖಲೆಯ 8ನೇ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಗೆದ್ದು ಟೆನಿಸ್ ಜಗತ್ತಿನಲ್ಲಿ ಮತ್ತೆ ಸಾಮ್ರಾಟರಾಗಿ ಕಂಗೊಳಿಸುತ್ತಿರುವ ರೋಜರ್ ಫೆಡರರ್ ಖುಷಿ ಸಂಭ್ರಮಿಸುವುದರ ಜತೆಜತೆಗೇ ವಿಶ್ವಾದ್ಯಂತ ಸುದ್ದಿಯಾಗಿದ್ದಾರೆ.
ಹೌದು, ಭಾನುವಾರ ರಾತ್ರಿ ವಿಂಬಲ್ಡನ್ ಫೈನಲ್ ಪಂದ್ಯ ಮುಗಿದ ನಂತರ ಬಾರೊಂದಕ್ಕೆ ತೆರಳಿದ ರೋಜರ್ ಫೆಡರರ್, ಸೋಮವಾರ ಮುಂಜಾನೆ 5 ಗಂಟೆವರೆಗೆ ಕುಡಿದಿದ್ದಾರೆ. ಈ ವೇಳೆ ಹಲವು ರೀತಿಯ ಮದ್ಯ ಸೇವಿಸಿ ಮತ್ತೇರಿಸಿಕೊಂಡಿದ್ದಾರೆ. ಇಷ್ಟೆಲ್ಲಾ ಕುಡಿದ ಮೇಲೆ ಲೋಕದ ಪರಿವೆಯೇ ಇಲ್ಲದೇ ಮಲಗಿರುವ ಫೆಡರರ್, ಮಾರನೇ ದಿನ ಹೇಳಿದ್ದು ಹೀಗೆ…
‘ಆದರೆ ಹಿಂದಿನ ರಾತ್ರಿ ಏನಾಯಿತೆಂದು ನನಗೆ ಗೊತ್ತಿಲ್ಲ. ಹಲವಾರು ರೀತಿ ಮದ್ಯ ಸೇವನೆ ಮಾಡಿದ್ದೆ. ಆಗ ನನ್ನೊಂದಿಗೆ 30ರಿಂದ 40 ಸ್ನೇಹಿತರಿದ್ದರು’ ಎಂದು ಹೇಳಿಕೊಂಡಿದ್ದಾರೆ. ಆ ರಾತ್ರಿ ನಡೆದ ಪಾರ್ಟಿಯಲ್ಲಿ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಚಾಂಪಿಯನ್ ಗಾರ್ಬಿನ್ ಮುಗುರುಜ, ಫೆಡರರ್ ಸ್ನೇಹಿತರು, ಕುಟುಂಬದವರು ಸೇರಿದಂತೆ ಹಲವು ಖ್ಯಾತನಾಮರು ಪಾಲ್ಗೊಂಡಿದ್ದರು. ಪಾರ್ಟಿ ಮುಗಿದ ಮೇಲೆ ನಾವೆಲ್ಲ ಬಹಳ ಸಂಭ್ರಮಿಸಿದೆವು. ಬೆಳಗ್ಗೆ 5 ಗಂಟೆಗೆ ನಾನು ಮಲಗಿದೆ. ಏಳುವಾಗ ನನಗೆ ಆರಾಮನಿಸಲಿಲ್ಲ. ಏನೋ ಸ್ವಲ್ಪ ಅಸ್ತವ್ಯಸ್ತವಾದಂತನಿಸಿತು. ಕೆಲವು ಗಂಟೆಗಳ ನಂತರ ಆರೋಗ್ಯ ಸುಧಾರಿಸಿದೆ ಎಂದನಿಸಿತು…’ ಎನ್ನುವುದು ಫೆಡರರ್ ಮಾತು.
ಸಾರ್ವಕಾಲಿಕ ಶ್ರೇಷ್ಠ ಆಟಗಾರ: ಫೆಡರರ್ ಅವರು ಸದ್ಯ ಸಾರ್ವಕಾಲಿಕ ಶ್ರೇಷ್ಠ ಆಟಗಾರರಾಗಿದ್ದಾರೆ. ಮೊನ್ನೆ ವಿಂಬಲ್ಡನ್‌ನಲ್ಲಿ 8ನೇ ಬಾರಿ ಪ್ರಶಸ್ತಿ ಗೆದ್ದರು. ಒಟ್ಟಾರೆ 19ನೇ ಗ್ರ್ಯಾನ್‌ಸ್ಲಾಮ್ ಜಯಿಸಿದರು.