ಕಲಬುರಗಿ: ನೌಕರಿ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಮತ್ತು ವಿವಿಧೋದ್ದೇಶ (ಎಂಆರ್‌ಡಬ್ಲ್ಯು) ಹಾಗೂ ಗ್ರಾಮೀಣ ಪುನರ್ವಸತಿ (ವಿಆರ್‌ಡಬ್ಲ್ಯು) ಕಾರ್ಯಕರ್ತರ ಒಕ್ಕೂಟದಿಂದ ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಇಲ್ಲಿನ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ನೂರಾರು ಅಂಗವಿಕಲರು, ವಿವಿಧೋದ್ದೇಶ, ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ (ನೌಕರರ) ಅಧಿನಿಯಮ ಜಾರಿಗೊಳಿಸಬೇಕು. ಎಂಆರ್‌ಡಬ್ಲ್ಯುಗಳನ್ನು ತಾಲೂಕು ಅಂಗವಿಕಲರ ಅಧಿಕಾರಿಯನ್ನಾಗಿ, ವಿಆರ್‌ಡಬ್ಲ್ಯುಗಳನ್ನು ಗ್ರಾಮ ಮಟ್ಟದ ಅಭಿವೃದ್ಧಿ ಸಹಾಯಕರನ್ನಾಗಿ ಹಾಗೂ ಯುಆರ್ ಡಬ್ಲ್ಯುಗಳನ್ನು ನಗರ ವಿಕಲಚೇತನರ ಅಬಿವೃದ್ಧಿ ಸಹಾಯಕರನ್ನಾಗಿ ಹುದ್ದೆಗಳನ್ನು ಸೃಜಿಸಿ, ನೌಕರಿ ಕಾಯಂ ಮಾಡಬೇಕೆಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಅಂಗವಿಕಲರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ತಲುಪಿಸಬೇಕೆಂಬ ನಿಟ್ಟಿನಲ್ಲಿ ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕ್ರಮದಡಿ ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿ 169 ಎಂಆರ್‌ಡಬ್ಲ್ಯುಗಳು, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಲ್ಲಿ 75 ಯುಆರ್‌ಡಬ್ಲ್ಯುಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ 4,906 ವಿಆರ್‌ಡಬ್ಲ್ಯುಗಳು ಹೀಗೆ ಒಟ್ಟು 5,150 ಕಾರ್ಯಕರ್ತರು ಕಳೆದ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ.
ಕಳೆದ ವರ್ಷ ಗೌರವಧನ ಹೆಚ್ಚಿಸಲಾಗಿತ್ತು. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಯುಡಿಯೂರಪ್ಪ ಮತ್ತು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಹಾಗೆ, ನಮ್ಮನ್ನು ಕಾಯಂಗೊಳಿಸಬೇಕೆಂಬ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
2011ರ ಜನಗಣತಿಯಂತೆ 13.24 ಲಕ್ಷ ಅಂಗವಿಕಲರು ಇದ್ದು, 2016ರ ಅಂಗವಿಕಲರ ಕಾಯ್ದೆಯಂತೆ 21 ರೀತಿಯ ವಿಕಲಚೇತನರನ್ನು ಸಮೀಕ್ಷೆ ಮಾಡಿದಾಗ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಇಷ್ಟು ದೊಡ್ಡ ಸಂಖ್ಯೆಯ ಅಂಗವಿಕಲರ ಸಮಸ್ಯೆಗಳು, ಅಗತ್ಯತೆಗಳನ್ನು ಪರಿಹರಿಸಲು ಸರ್ಕಾರಿ ನೌಕರರಿಗಿಂತಲೂ ಹೆಚ್ಚಾಗಿ ಶ್ರಮಿಸುತ್ತಿದ್ದೇವೆ. ಈಗಾಗಲೇ ಕಾರ್ಯಕರ್ತರ ನಿವೃತ್ತಿ ವಯಸ್ಸನ್ನು ನಿಗದಿಗೊಳಿಸಲಾಗಿದೆ. ಇದರಿಂದ ನಿವೃತ್ತಿ ನಂತರ ಬೀದಿ ಬೀಳುವ ಸಾಧ್ಯತೆ ಇದೆ. ಆದ್ದರಿಂದ ವಯೋ ನಿವೃತ್ತಿ ಹೊಂದಿದ ನೌಕರರಿಗೆ ಹುದ್ದೆಗೆ ಅನುಸಾರ ಇಡುಗಂಟಾಗಿ 25 ಲಕ್ಷ ರೂ. ನೀಡಬೇಕು. ಕೊರೊನಾ ಸಂದರ್ಭದಲ್ಲಿ ಇತರ
ವಾರಿರ್ಯಸ್‌ಗಳಂತೆ ನಾವೂ ಕೆಲಸ ಮಾಡಿದ್ದು, ಕೊರೊನಾದಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಆಕಸ್ಮಿಕ ದುರ್ಘಟನೆಗಳಿಂದ ಮೃತಪಟ್ಟಾಗ ನೀಡುವ ಪರಿಹಾರ ಧನವನ್ನು 50 ಸಾವಿರದಿಂದ 30 ಲಕ್ಷ ರೂ.ಗೆ ಹೆಚ್ಚಿಸಬೇಕು. ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತರ ಹುದ್ದೆಗೆ ಅರ್ಹ ಅಂಗವಿಕಲರನ್ನೇ ನೇಮಿಸಬೇಕು. ಸರ್ಕಾರಿ ನೌಕರರಿಗೆ ನೀಡುವ ಎಲ್ಲ ಸೌಲಭ್ಯ ನೀಡಬೇಕು. ವಿಕಲಚೇತನರ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಅಂಗವಿಕಲರ ಮಾಸಾಶನವನ್ನು 5 ಸಾವಿರ ರೂ. ಗೆ ಹೆಚ್ಚಿಸಬೇಕೆಂದು ಮನವಿ ಮಾಡಿದರು. ಒಕ್ಕೂಟದ ರಾಜ್ಯ ನಿರ್ದೇಶಕ ಬಸವರಾಜ ಹಡಪದ, ಜಿಲ್ಲಾಧ್ಯಕ್ಷ ಶ್ರೀಮಂತ ಮಳಖೇಡ್, ಮುಖಂಡರಾದ ಖಾಸಿಂಸಾಬ ಡೊಂಗರಗಾಂವ, ಮಲ್ಲಿಕಾರ್ಜುನ, ಹಣಮಂತ್ರಾಯ,
ಶರಣಬಸಪ್ಪ, ಶಿವಪುತ್ರ, ನಾಗರಾಜ, ವಿಜಯಕುಮಾರ, ಲಕ್ಷ್ಮಣ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.