ಹೈದರಾಬಾದ್ : ಪ್ರಾದೇಶಿಕ ಪಕ್ಷಗಳ ನಾಯಕರು ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು ಪ್ರಸ್ತಾವಿಸಿರುವ ಫೆಡರಲ್ ಫ್ರಂಟ್, ಕೇಂದ್ರದಲ್ಲಿ ಸರಕಾರ ರಚಿಸುವ ಅವಕಾಶ ಒದಗಿದಲ್ಲಿ ಕಾಂಗ್ರೆಸ್ ಬೆಂಬಲವನ್ನು ಪಡೆಯಲು ಮುಕ್ತವಿದೆ, ಆದರೆ ಅದು ಚಾಲಕನ ಸ್ಥಾನವನ್ನು ಕೇಳಬಾರದು ಎಂದು ಟಿಆರ್‌ಎಸ್ ಇಂದು ಮಂಗಳವಾರ ಹೇಳಿದೆ.
ಕೆಸಿಆರ್ ಕಳೆದ ವರ್ಷದಿಂದಲೇ ಬಿಜೆಪಿ ಮತ್ತು ಕಾಂಗ್ರೆಸ್ ರಹಿತವಾದ ಫೆಡರಲ್ ಫ್ರಂಟ್ ಸರಕಾರವನ್ನು ಕೇಂದ್ರದಲ್ಲಿ ರಚಿಸುವ ತಮ್ಮ ಯೋಜನೆಯ ಬೆನ್ನು ಹತ್ತಿಕೊಂಡು ಬರುತ್ತಿದ್ದಾರೆ.
ಟಿಆರ್‌ಎಸ್ ವಕ್ತಾರ ಅಬೀದ್ ರಸೂಲ್ ಖಾನ್ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಾ, “ಕೇಂದ್ರದಲ್ಲಿ ಫೆಡರಲ್ ಫ್ರಂಟ್ ಸರಕಾರ ರಚಿಸುವ ಅವಕಾಶ ಒದಗಿದಲ್ಲಿ, ನಮ್ಮ ಪಕ್ಷ ರಾಹುಲ್ ಗಾಂಧಿ ಅವರೊಂದಿಗೆ ವ್ಯವಹಾರ ಕುದುರಿಸಲು ಸಿದ್ಧವಿದೆ’ ಎಂದು ಮೇ 23ರಂದು ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುವ ಮುನ್ನವೇ ಹೇಳಿದ್ದಾರೆ.
ಕೇಂದ್ರದಲ್ಲಿನ ನೂತನ ಸರಕಾರವನ್ನು ಫೆಡರಲ್ ಫ್ರಂಟ್ ಡ್ರೈವರ್ ಸೀಟಿನಲ್ಲಿದ್ದುಕೊಂಡು ಸರಕಾರ ನಡೆಸಬೇಕು ಎಂಬ ದೃಢ ಅಭಿಪ್ರಾಯದ ರಾವ್ (ಕೆಸಿಆರ್) ಅವರದ್ದಾಗಿದೆ ಎಂದು ಖಾನ್ ಹೇಳಿದರು.