ಕುಂದಾಪುರ: ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ, ಪರಿ ಸಂಸ್ಥೆಯ ಮುಖ್ಯಸ್ಥ ಪಾಲಗುಮ್ಮಿ ಸಾಯಿನಾಥ್ ಅವರು ಫೆ.14ರಂದು ಕುಂದಾಪುರದ ಜೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಭಾರತದ ಕೃಷಿ ಬಿಕ್ಕಟ್ಟುಗಳು ಎಂಬ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ಸಮುದಾಯ ಕುಂದಾಪುರ ಇದರ ಕಾರ್ಯದರ್ಶಿ ಸದಾನಂದ ಬೈಂದೂರು ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಕೃಷಿ ಬಿಕ್ಕಟ್ಟುಗಳು ದಿನಗಳೆದಂತೆ ಹೆಚ್ಚುತ್ತ ಹೋಗುತ್ತಿರುವಾಗ ರೈತರು ಕೈ ಸೋತು ಆತ್ಮಹತ್ಯೆಯಂತಹ ಅತಿರೇಕಗಳತ್ತ ಮುಖ ಮಾಡಿರುವಾಗ ಸರಕಾರ ಕೃಷಿಕರ ಆದಾಯ ದುಪ್ಪಟ್ಟು ಮಾಡುವ ಉದ್ದೇಶ ಹೊಂದಿದೆ ಎಂಬ ಮಾತುಗಳಿವೆ. ಜತೆಗೇ ಕಾರ್ಪೊರೇಟ್ ಫಾರ್ಮಿಂಗ್‌ಗೆ ಪ್ರೋತ್ಸಾಹ ನೀಡುವ ಕ್ರಮಗಳೂ ವೇಗ ಪಡೆದುಕೊಳ್ಳುತ್ತಿವೆ.
ಇಂತಹ ಸನ್ನಿವೇಶದಲ್ಲಿ ರೈತನ ಪಾತ್ರವೇನು, ಈ ವಿಚಾರಗಳಿಗೆ ರೈತ ಹೇಗೆ ಮುಖಾಮುಖಿಯಾಗಬಹುದು ಎಂಬ ಪ್ರಶ್ನೆಗಳೊಂದಿಗೆ ರೈತ ಸಮುದಾಯದ ಜತೆ ಸಂವಾದ ನಡೆಸುವುದು, ಅದಕ್ಕೊಂದು ಉತ್ತರ ಕಂಡುಕೊಳ್ಳಲು ಪ್ರಯತ್ನಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ತಲ್ಲೂರು ಫ್ಯಾಮಿಲಿ ಟ್ರಸ್ಟಿನ ಟ್ರಸ್ಟಿ, ಸಾಯಿನಾಥ ಆವರ ಪರಿ ಸಂಸ್ಥೆಯ ಭಾಷಾಂತರ ತಂಡದ ಸ್ವಯಂಸೇವಕ ರಾಜಾರಾಮ್ ತಲ್ಲೂರು, ಕುಂದಾಪುರಕ್ಕೆ ಮೊದಲ ಬಾರಿಗೆ ಬರುತ್ತಿರುವ ಪಿ. ಸಾಯಿನಾಥ್ ಅವರು ಮಹಾರಾಷ್ಟ್ರದ ಮರಾಠವಾಡಾ, ವಿದರ್ಭ ಪ್ರಾಂತ್ಯಗಳಲ್ಲಿ ರೈತ ಸಮುದಾಯದ ಸಂಕಷ್ಟಗಳ ಅಧ್ಯಯನ ನಡೆಸುತ್ತಿದ್ದು ಅವರ ಪರಿ (ಪೀಪಲ್ಸ್ ಆ ಆರ್ಕೈವ್ ಆಫ್ ರೂರಲ್ ಇಂಡಿಯಾ) ಸಂಸ್ಥೆಯ ಮೂಲಕ ನಾಶವಾಗುತ್ತಿರುವ ಭಾರತದ ಗ್ರಾಮೀಣ
ಬದುಕು ಸಂಸ್ಕೃತಿಗಳನ್ನು ದಾಖಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಇಂದಿಗೂ ವರ್ಷದ 365 ದಿನಗಳಲ್ಲಿ 270 ದಿನಗಳನ್ನು ಭಾರತದ ಬಡ ರೈತಾಪಿ ವರ್ಗದ ಜತೆಗೆ ಕಳೆಯುತ್ತಿದ್ದಾರೆ. 1996ರಲ್ಲಿ 1 ಲಕ್ಷ ಕಿ.ಮೀ. ಗಳನ್ನು ರಸ್ತೆ, ದೋಣಿ ಎಂದು ಸುಮಾರು 16 ಬಗೆಯ ಸಂಚಾರ ಸಾಧನಗಳನ್ನು ಬಳಸಿ ಸಂಚರಿಸಿ ಅಂದಾಜು 5 ಸಾವಿರ ಕಿ.ಮೀ. ಕಾಲುನಡಿಗೆಯಲ್ಲಿ ಕ್ರಮಿಸಿ ಗ್ರಾಮೀಣ ಭಾರತದ ಕಣ್ಣು ತೆರೆಸುವ ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ ಎಂಬ
ಪುಸ್ತಕ ಬರೆದಿದ್ದರು ಎಂದರು.
ಸಮುದಾಯ ಕುಂದಾಪುರ ಆಶ್ರಯ ದಲ್ಲಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂಜೆ 5.30ರಿಂದ ಉಪನ್ಯಾಸ, ಸಂವಾದ ನಡೆಯಲಿದ್ದು ಮುಕ್ತ ಪ್ರವೇಶವಿದೆ. ಗೋಷ್ಠಿಯಲ್ಲಿ ಪತ್ರಕರ್ತ ರಾಮಕೃಷ್ಣ ಹೇರ್ಳೆ ಉಪಸ್ಥಿತರಿದ್ದರು.