Advertisement

ಸಮಾನತೆ ಸಾರುವ ವೈಶಿಷ್ಟ್ಯಪೂರ್ಣ ಹಬ್ಬ ಹೋಳಿ

03:43 PM Mar 09, 2017 | |

ಉಡುಪಿ: ಅನಾದಿ ಕಾಲದಿಂದಲೂ ಜಾನಪದ ಕಲೆಗಳು ನಮ್ಮಲ್ಲಿ ಬೇರೂರಿ ಕರಾವಳಿಯಾದ್ಯಂತ ಹಸಿರಾಗಿ ನಿಂತಿವೆ. ಸಾಂಸ್ಕೃತಿಕ ಹಿನ್ನೆಲೆಯ ಅನೇಕ ಕಲೆಗಳು, ಆಚರಣೆಗಳಿವೆ. ಅಂತಹ ಆಚರಣಾತ್ಮಕ ಕಲೆಗಳಲ್ಲಿ ಹೋಳಿಯು ಒಂದಾಗಿದೆ.

Advertisement

ಕಣ್ಮನ ಸೂರೆ
ನವಂಬರ್‌ ತಿಂಗಳಿನಿಂದ ಪ್ರಾರಂಭಗೊಂಡು ಮೇ ತಿಂಗಳ ತನಕ ಕರಾವಳಿಯ ಉದ್ದಕ್ಕೂ ಪ್ರವಾಸ ಕೈಗೊಂಡರೆ ಕಣ್ಮನ ಸೂರೆಗೂಳ್ಳುವ ಅನೇಕ ಆಚರಣೆಗಳ ಸಂಪ್ರದಾಯಗಳು, ಜನಪದ ಕಲೆಗಳು ಕಾಣಸಿಗುತ್ತವೆ. ಅಂತಹ ಆಚರಣೆಗಳಲ್ಲಿ ಮರಾಟಿಗರ ಹೋಳಿಯೂ ಕೂಡ ಪ್ರಮುಖವಾದುದು.

ತಿಂಗಳ ಬೆಳಕಿನಲ್ಲಿ
ಫಾಲ್ಗುಣದ ದಶಮಿಯಂದು ಕೂಡುವಳಿಯ ಕುಟುಂಬದ ಸದಸ್ಯರೆಲ್ಲ ಯಜಮಾನನ ಮನೆಯಲ್ಲಿ ಸೇರಿ ಮೊದಲೇ ನಿರ್ಣಯಿಸಿದಂತೆ ಹತ್ತರಕಟ್ಟೆಯಲ್ಲಿ  ಶ್ರೀ ದೇವಿಯ ಆವಾಸಸ್ಥಾನವಾದ ಪವಿತ್ರ ತುಳಸಿ ಕಟ್ಟೆಯನ್ನು ಸಿಂಗರಿಸಿ ಸಿಪ್ಪೆ  ಸೌತೆಕಾಯಿಯನ್ನು ಆರೋಹಣ ಮಾಡಿ, ಹೂಗಳಿಂದ ಅಲಂಕರಿಸಿ ಫಾಲ್ಗುಣ ಮಾಸದ ತನಕ (ಈ ಬಾರಿಯ ಹೋಳಿಯೂ ಮಾರ್ಚ್‌ 7ರಿಂದ ಪ್ರಾರಂಭಗೊಂಡು 12ರ ತನಕ ನಡೆಯುತ್ತದೆ) ಖೇತಿಯವರು ಗುಮ್ಮಟೆ, ತಾಳ, ಕೋಲು, ಜಾಗಟೆ ಮುಂತಾದ ಕಲಾ ಸಾಮಗ್ರಿಗಳೊಂದಿಗೆ ತಿಂಗಳ ಬೆಳಕಿನಲ್ಲಿ ಮನೆಮನೆ ತಿರುಗಿ ಆ ಮನೆಗಳಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ತುಳುಕಾಡಲಿ ಎಂದು ದೇವಿಯನ್ನು ಸ್ತುತಿಸುತ್ತ ಸಾಮೂಹಿಕವಾಗಿ ಆಚರಿಸುವ ಹಾಲುಹಬ್ಬವೇ ಹೋಳಿ ಹುಣ್ಣಿಮೆ.

ಬಣ್ಣದೋಕುಳಿ
ಹೋಳಿ  ಮರಾಟಿಗರ ಸುಗ್ಗಿ ಕುಣಿತ ದೇಶದಾದ್ಯಂತ ಜಾತಿ-ಮತ, ಭೇದ-ಭಾವವಿಲ್ಲದೆ ಬಣ್ಣದೋಕುಳಿಯನ್ನು ಮೈಮೇಲೆ ಎರಚಿಕೊಂಡು ಸಂಭ್ರಮ ಪಟ್ಟರೆ ಕರಾವಳಿಯ ಹೋಳಿ ಮಾನಸಿಕ ಸಮಾನತೆಯನ್ನು ತರುವ ವೈಶಿಷ್ಟ್ಯಪೂರ್ಣವಾದ ಹಬ್ಬ. ಕರಾವಳಿಯಾದ್ಯಂತ ಹೋಳಿಯನ್ನು ಆಚರಿಸುವ ಇತರ ಜನಾಂಗಗಳೆಂದರೆ ಖಾರ್ವಿಯವರು, ಚಪ್ಟೆಗಾರರು ಹಾಗೂ ಕುಡುಬಿಗಳು ಇತ್ಯಾದಿ.

ಸಂಕೀರ್ಣ ಕ್ರಿಯೆ
ಪ್ರತಿಯೊಂದು ಆರಾಧನೆ, ಆಚರಣೆ ಒಂದಲ್ಲ ಒಂದು ವಿಶಿಷ್ಟ ಕ್ರಿಯೆಗಳನ್ನೊಳಗೊಂಡಿರುತ್ತದೆ. ಮಾತ್ರವಲ್ಲದೆ ಈ ಕ್ರಿಯೆಗಳೇ ಮುಂದೆ ನಾಟ್ಯಾಂಶವನ್ನು ಪಡೆದು ಕಲೆಗಳಾಗಿವೆ. ಆರಾಧನೆ ಎನ್ನುವುದು, ದೇವರ ಸ್ತುತಿ ಮಾಡುವುದು, ಕೈ ಮುಗಿಯುವುದು, ಧ್ಯಾನಿಸುವುದು ಅರಿಕೆ ಮಾಡಿಕೊಳ್ಳುವುದು ಇತ್ಯಾದಿಗಳನ್ನು ಒಳಗೊಂಡ ಸಂಕೀರ್ಣ ಕ್ರಿಯೆ. 

Advertisement

ಮರಾಟಿಗರು ಆಚರಿಸುವ ಹೋಳಿ ದೇಹವನ್ನು ದಂಡಿಸುತ್ತಾ ಕುಣಿದು ದೇವಿಯನ್ನು ಆರಾಧಿಸುವ ಪದ್ಧತಿ ಅನನ್ಯವಾದುದು. ಹೋಳಿ ಆಚರಣೆ ಭಾಗವತ ಪುರಾಣದಷ್ಟು ಪ್ರಾಚೀನವಾದುದು. ಕ್ರಿ.ಶ. 7ನೇ ಶತಮಾನದ ಶ್ರೀ ಹರ್ಷನ “ನಾಗಾನಂದ’ ನಾಟಕದಲ್ಲಿ ಇದರ ಪ್ರಸ್ತಾಪವಿದೆ. 

ನಾರದ ಪುರಾಣದಲ್ಲಿ ಹೋಳಿಯ ಬಗ್ಗೆ ಸುಳಿವು ಸಿಗುತ್ತದೆ. ಹಿರಣ್ಯಕಶಿಪುವಿಗೆ “ಪೋಲಿಕಾ’ ಎಂಬ ತಂಗಿ ಇದ್ದಳು. ಅವಳಿಗೆ ಅಗ್ನಿಯಿಂದ ಮರಣ ಎಂಬ ಶಾಪವಿತ್ತು, ಹಿರಣ್ಯಕಶಿಪುವಿನ ಮಗ ಪ್ರಹ್ಲಾದ ಅನನ್ಯ ಹರಿಭಕ್ತ ಅಸುರೀ ವೃತ್ತಿಯ ಹಿರಣ್ಯಕಶಿಪುವಿಗೆ ಹರಿಯೆಂದರೆ ಆಗದು. ಮಗನ ಹರಿನಾಮ ಸ್ಮರಣೆ ತಂದೆಗೆ ಹಿಡಿಸಲಿಲ್ಲ. ಆಗ ಆತನು ಮಗನನ್ನು ಬೆಂಕಿಗೆ ಹಾಕಿ ಸುಡಲು ತಂಗಿಗೆ ಆಜ್ಞೆ ಮಾಡುತ್ತಾನೆ. ಅವನ ಜತೆಗೆ ಅಗ್ನಿಗೆ ಹಾರಿ ಪ್ರಾಣ ನೀಗುತ್ತಾಳೆ. ಆದರೆ ಪ್ರಹ್ಲಾದ ಮಾತ್ರ ಹರಿನಾಮ ಸ್ಮರಣೆಯಿಂದ ಬದುಕಿ ಬಂದ.

ಆ ಪೋಲಿಕಾ ದಹನದ ನೆನಪಿನ ಫಾಲ್ಗುಣ ಶುದ್ಧ ಹುಣ್ಣಿಮೆಯ ಹೋಳಿ ಹುಣ್ಣಿಮೆಯಾಗಿ ಪ್ರಚಲಿತಕ್ಕೆ ಬಂತು. ಇನ್ನೊಂದು ಮಹತ್ವದ ಕುರುಹು “ಕಾಮದಹನ’ ವೃತ್ತಾಂತ. ಇದು ಶಿವಪುರಾಣ, ವಿಷ್ಣುಪುರಾಣ, ಕಾಳಿದಾಸನ ಕುಮಾರಸಂಭವ, ಹರಿಹರನ ಗಿರಿಜಾ ಕಲ್ಯಾಣ ಗ್ರಂಥಗಳಲ್ಲಿ ಸಿಗುತ್ತದೆ. ಲೋಕ ಕಲ್ಯಾಣಾರ್ಥವಾಗಿ ಶಿವನ ತಪೋಭಂಗ ಮಾಡಲು ಪ್ರಯತ್ನಿಸಿ ಶಿವನ ಹಣೆಗಣ್ಣಿಗೆ ತುತ್ತಾಗಿ ಭಸ್ಮವಾದ ಕಾಮನ ಅನನ್ಯ ಸ್ಮರಣೆಗಾಗಿ ಫಾಲ್ಗುಣ ಶುದ್ಧ ಹುಣ್ಣಿಮೆಯಂದು ಕಾಮದಹನ ಅಥವಾ ಹೋಳಿ ಹುಣ್ಣಿಮೆಯಾಗಿ ಆಚರಣಿ ಬಂತು.

ಹೋಳಿಯ ವಿಧಾನ, ವೇಷಭೂಷಣ, ನಾಟ್ಯ, ವಾದ್ಯಪರಿಕರಗಳು ವೈಶಿಷ್ಟé ಪೂರ್ಣ ಹಾಗೂ ವೈವಿಧ್ಯಮಯ. ಆದರೆ ಇತ್ತೀಚೆಗಿನ ದಿನಗಳಲ್ಲಿ ಕರಾವಳಿಯ ಯಕ್ಷಗಾನದ ಪ್ರಭಾವವಾಗಿರುವುದು ಅದರ ವೇಷಭೂಷಣಗಳಿಂದ ತಿಳಿದುಬರುತ್ತದೆ. ಒಂದು ಸಾಮಾಜಿಕ ಸಮುದಾಯವನ್ನು ಗಮನಿಸುವಾಗ ಕೆಲವೇ ಕೆಲವು ಸಮುದಾಯಗಳಿಗೆ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಇದೆ. ಹಾಗಾಗಿ ಪೂರ್ವಿಕರು ಕಲ್ಪಿಸಿಕೊಟ್ಟ ಸಾಂಸ್ಕೃತಿಕ ಪರಂಪರೆಯ ಹೋಳಿ ಕುಣಿತವು ನಮ್ಮ ಜನಾಂಗದ ಹೆಮ್ಮೆಯ ಪ್ರತೀಕವಾಗಿದೆ.

 ಸಮಾಜದ ಪ್ರತಿಯೊಂದು ಚಟುವಟಿಕೆ ಲಾಭದ ದೃಷ್ಟಿಯಲ್ಲೇ ಉಳಿಯುವ ಬೆಳೆಯುವ ಕಾಲ ಘಟ್ಟದಲ್ಲಿದ್ದೇವೆ. ಅಂತಹ ಯಾವುದೇ ಉದ್ದೇಶಗಳಿರದೆ ಶ್ರದ್ಧಾ ಭಕ್ತಿಯ ಧಾರ್ಮಿಕ ಆಚರಣೆಯಾಗಿ, ಅತ್ಯಂತ ಕಲಾತ್ಮಕವಾಗಿ ಮತ್ತು ನಿಜರೂಪದಲ್ಲಿ ಉಳಿಸಿಕೊಂಡು ಬಂದಲ್ಲಿ ಮಾತ್ರ ಅದರ ಪಾವಿತ್ರ್ಯ ಕಾಪಾಡಲು ಸಾಧ್ಯ.

ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ ಎಂಬಂತಹ ಪರಿಸ್ಥಿತಿ ಇದ್ದಾಗ ಸಂಸ್ಕೃತಿ ಬೆಳೆಯಲಾರದು. ಗ್ರೀಕ್‌ ಚಿಂತಕ ಲಾಂಜೈನಸ್‌ನ ವಿಚಾರಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಒಂದು ಜನಾಂಗದಲ್ಲಿ ಸಂಸ್ಕೃತಿ ದೊಡ್ಡದಾಗಿ ಬೆಳೆಯಲಾರದು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆದರೆ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಸಂಪ್ರದಾಯಗಳನ್ನು ಕಾಪಾಡಿಕೊಂಡು ಬರುವ ಕೆಲಸವನ್ನು ನಮ್ಮ ಹಿರಿಯರು ಮಾಡಿ ಸೈ ಎನಿಸಿಕೊಂಡಿದ್ದರು. ಆದರೆ ಆಧುನಿಕ ಭರಾಟೆಯಲ್ಲಿ ನಮ್ಮವರ ಪಾಲ್ಗೊಳ್ಳುವಿಕೆ ಇಲ್ಲದೆ ಈ ಸಂಸ್ಕೃತಿ ನಶಿಸಿ ಹೋಗುವ ಆತಂಕ ಕಾಡುತ್ತಿದೆ.

ಚಿತ್ರ: ಗಣೇಶ್‌ ಕಲ್ಯಾಣಪುರ

Advertisement

Udayavani is now on Telegram. Click here to join our channel and stay updated with the latest news.

Next