Advertisement
ಗುರುವಾರ ರಾತ್ರಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವರನ್ನು 6-3, 6-1 ಅಂತರದಿಂದ ಸುಲಭದಲ್ಲಿ ಮಣಿಸಿದರು. ಬಿಯಾಂಕಾ ಆ್ಯಂಡ್ರಿಸ್ಕಾ ಮತ್ತು ಸ್ವಿಜರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್ ನಡುವಿನ ಇನ್ನೊಂದು ಸೆಮಿಫೈನಲ್ ಭಾರೀ ಹೋರಾಟದಿಂದ ಕೂಡಿತ್ತು. ಇಬ್ಬರ ಪಾಲಿಗೂ ಇದು ಮೊದಲ ಗ್ರ್ಯಾನ್‌ಸ್ಲಾಮ್ ಉಪಾಂತ್ಯವಾಗಿತ್ತು. ಇದನ್ನು ಆ್ಯಂಡ್ರಿಸ್ಕಾ 7-6 (7-3), 7-5 ಅಂತರದಿಂದ ಗೆದ್ದರು.
ಮರಿಯಾ ಶರಪೋವಾ ಅವರನ್ನು ಮಣಿಸಿ ಈ ಕೂಟದಲ್ಲಿ ಗೆಲುವಿನ ಓಟ ಆರಂಭಿಸಿದ ಸೆರೆನಾ ವಿಲಿಯಮ್ಸ್, ಈಗ ಸರ್ವಾಧಿಕ 24 ಗ್ರ್ಯಾನ್‌ಸ್ಲಾಮ್ ಗೆಲುವಿನ ದಾಖಲೆಯನ್ನು ಸರಿದೂಗಿಸುವ ಹಾದಿಯಲ್ಲಿದ್ದಾರೆ. ಆದರೆ ಮಾಜಿ ನಂ.1 ಆಟಗಾರ್ತಿ ಸೆರೆನಾರ ಟಾಪ್ ಕ್ಲಾಸ್ ಆಟವೀಗ ಕಂಡುಬರುತ್ತಿಲ್ಲ. ಆದರೆ ನಿರ್ದಿಷ್ಟ ಹಂತದಲ್ಲಿ ಯಾವ ರೀತಿಯ ಟೆಕ್ನಿಕ್ ತೋರಬೇಕೆಂಬ ಜಾಣ್ಮೆಯ ಆಟಕ್ಕೇನೂ ಅಡ್ಡಿಯಾಗಿಲ್ಲ.
Related Articles
Advertisement
ಇದು ಸೆರೆನಾ ವಿಲಿಯಮ್ಸ್‌ಗೆ ಯುಎಸ್ ಓಪನ್‌ನಲ್ಲಿ ಒಲಿದ 101ನೇ ಗೆಲುವು. ಇದರೊಂದಿಗೆ ಕ್ರಿಸ್ ಎವರ್ಟ್ ದಾಖಲೆಯನ್ನು ಅವರೀಗ ಸರಿದೂಗಿಸಿದ್ದಾರೆ. ಚಾಂಪಿಯನ್ ಆದರೆ ನೂತನ ದಾಖಲೆ ಸ್ಥಾಪಿಸಲಿದ್ದಾರೆ. ಬಿಯಾಂಕಾ ಅದೃಷ್ಟದ ಆಟ
ಬಿಯಾಂಕಾ ಆ್ಯಂಡ್ರಿಸ್ಕಾ ಯುಎಸ್ ಓಪನ್ ಮುಖ್ಯ ಸುತ್ತಿನಲ್ಲಿ ಆಡಿದ್ದು ಇದೇ ಮೊದಲು ಎಂಬುದು ವಿಶೇಷ. ಕೂಟದುದ್ದಕ್ಕೂ ಕೈಹಿಡಿದ ಅದೃಷ್ಟ, ಅವರಿಗೆ ಸೆಮಿಫೈನಲ್‌ನಲ್ಲೂ ಸಾಥ್ ಕೊಟ್ಟಿತು. ಮೊದಲ ಸೆಟ್ ಟೈ-ಬ್ರೇಕರ್‌ಗೆ ಎಳೆಯಲ್ಪಟ್ಟಾಗ, ದ್ವಿತೀಯ ಸೆಟ್ ವೇಳೆ 2-5ರ ಹಿನ್ನಡೆ ಅನುಭವಿಸಿದಾಗಲೆಲ್ಲ ಬಿಯಾಂಕಾ ಮೇಲೆದ್ದು ಬಂದರು. ರೋಜರ್ ಕಪ್
ಫೈನಲ್ ರೀ-ಮ್ಯಾಚ್
ಸೆರೆನಾ ವಿಲಿಯಮ್ಸ್-ಬಿಯಾಂಕಾ ಆ್ಯಂಡ್ರಿಸ್ಕಾ ಕೇವಲ 3 ವಾರಗಳ ಅಂತರದಲ್ಲಿ ಎರಡನೇ ಫೈನಲ್ ಆಡುತ್ತಿರುವುದು ವಿಶೇಷ. ಆ. 11ರಂದು ಇವರಿಬ್ಬರೂ ಟೊರಂಟೊದಲ್ಲಿ ನಡೆದ “ರೋಜರ್ ಕಪ್’ ಪ್ರಶಸ್ತಿ ಸಮರದಲ್ಲಿ ಪರಸ್ಪರ ಎದುರಾಗಿದ್ದರು. ಆದರೆ ಮೊದಲ ಸೆಟ್ ವೇಳೆ 3-1ರ ಮುನ್ನಡೆಯಲ್ಲಿದ್ದಾಗ ಬೆನ್ನುನೋವಿನಿಂದಾಗಿ ಸೆರೆನಾ ಕೂಟದಿಂದ ಹಿಂದೆ ಸರಿದ ಕಾರಣ ತವರಿನ ಬಿಯಾಂಕಾ ಪ್ರಶಸ್ತಿ ಎತ್ತಿದ್ದರು. ನ್ಯೂಯಾರ್ಕ್‌ನಲ್ಲಿ ಏನು ಸಂಭವಿಸೀತೆಂಬುದು ಟೆನಿಸ್ ಅಭಿಮಾನಿಗಳ ಕಾತರ, ಕುತೂಹಲ. ಆರಂಭ: ಶನಿವಾರ ನಡುರಾತ್ರಿ ಬಳಿಕ 1.30