Advertisement
ರಾಜ್ಯದ ಕರಾವಳಿ ಜಿಲ್ಲೆಗಳ ಲಕ್ಷಾಂತರ ಜನರು ನೇರ ಅಥವಾ ಪರೋಕ್ಷವಾಗಿ ಮೀನುಗಾರಿಕೆಯ ಮೇಲೆ ಅವಲಂಬಿತರಾಗಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮೀನು ಗಾರಿಕೆಯನ್ನು ಸರಕಾರ ಸದ್ಯದ ಮಟ್ಟಿಗೆ ನಿಷೇಧಿಸಿದೆ. ಈಗ ಸರ ಕಾರವೇ ಕೋಳಿ, ಕೋಳಿ ಮೊಟ್ಟೆ, ಮಾಂಸ, ಮೀನು, ಹಾಲು, ದ್ರವಸಾರಜನಕ ಮೊದಲಾದವುಗಳನ್ನು ಅಗತ್ಯ ವಸ್ತುಗಳೆಂದು ಘೋಷಿಸಿ, ಮೀನುಗಾರಿಕೆಗೆ ಅನುಮತಿ ನೀಡಿದೆಯಾದರೂ ಮೀನುಗಾರರಿಗೆ ಸಮುದ್ರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮೀನು ಗಾರರಿಗೆ ಸ್ವಲ್ಪ ಮಟ್ಟಿನ ಅವಕಾಶ ಮಾಡಿಕೊಡಲು ಸರಕಾರ ಚಿಂತನೆ ನಡೆಸುತ್ತಿದೆ.
ಮಂಗಳೂರಿನಿಂದ ಕಾರವಾರದವರೆಗೂ ಸಾವಿರಾರು ನಾಡ ದೋಣಿಗಳಿವೆ. ಸಮುದ್ರದ ತೀರ ಭಾಗದಲ್ಲಿ ನಡೆಸುವ ನಾಡದೋಣಿ ಮೀನುಗಾರಿಕೆಯಿಂದ ಹಿಡಿದು ತಂದ ಮೀನುಗಳನ್ನು ಬಹುತೇಕವಾಗಿ ಸ್ಥಳೀಯ ಮಾರು ಕಟ್ಟೆಗೆ ಪೂರೈಸಲಾಗುತ್ತದೆ. ಹೀಗಾಗಿ ನಾಡದೋಣಿ ಮೀನುಗಾರಿಕೆಗೆ ಅವಕಾಶ ಮಾಡಿಕೊಡುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎನ್ನುತ್ತಾರೆ ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು. ಕೇರಳದಿಂದ ಅಪಾಯ
ನಾಡದೋಣಿ ಮೀನುಗಾರಿಕೆಗೆ ಅವಕಾಶ ನೀಡಿದರೆ ಕೇರಳದಿಂದ ಬಹುದೊಡ್ಡ ಅಪಾಯ ಕರ್ನಾಟಕ್ಕೆ ಎದುರಾಗುವ ಸಾಧ್ಯತೆಯಿದೆ. ಸದ್ಯ ಕರ್ನಾಟಕ ಮತ್ತು ಕೇರಳ ನಡುವಿನ ಎಲ್ಲ ರಸ್ತೆಗಳನ್ನೂ ಬಂದ್ ಮಾಡಲಾಗಿದೆ. ಮೀನುಗಾರಿಕೆ ಆರಂಭವಾದರೆ ಕಾಸರಗೋಡು ಮೊದಲಾದ ಭಾಗದಿಂದ ದೋಣಿ ಮೂಲಕ ಸುಲಭವಾಗಿ ಅಲ್ಲಿನ ಜನರು ಕರ್ನಾಟಕದ ಬಂದರುಗಳನ್ನು ಪ್ರವೇಶಿಸುವ ಸಾಧ್ಯತೆ ಇದೆ. ಮಂಗಳೂರು, ಮಲ್ಪೆ ಅಥವಾ ಗಂಗೊಳ್ಳಿ ಮೊದಲಾದ ದೊಡ್ಡ ಬಂದರು ಪ್ರವೇಶಿಸಲು ಸಾಧ್ಯವಾಗದೇ ಇದ್ದರೂ ಕಿರು ಬಂದರು ಅಥವಾ ಸಮುದ್ರ ತೀವ್ರತೆ ಈಗ ಕಡಿಮೆ ಇರುವುದರಿಂದ ನೇರವಾಗಿ ನಿರ್ಜನ ಪ್ರದೇಶದ ಸಮುದ್ರ ತೀರವನ್ನು ಸುಲಭವಾಗಿ ಪ್ರವೇಶಿಸಬಹುದು. ಹೀಗಾಗಿ ನಾಡದೋಣಿ ಮೀನುಗಾರಿಕೆಗೆ ಅವಕಾಶ ನೀಡುವ ಜತೆಗೆ ಈ ಎಲ್ಲ ಅಂಶಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವ ಅಗತ್ಯವೂ ಇದೇ ಎಂದು ಮೂಲಗಳು ತಿಳಿಸಿವೆ.
Related Articles
-ಕೋಟ ಶ್ರೀನಿವಾಸ ಪೂಜಾರಿ,
ಮೀನುಗಾರಿಕೆ ಸಚಿವ
Advertisement