Advertisement

ಅಂತರ್ಜಲ ಕುಸಿಯುವ ಭೀತಿ; ಜಿಲ್ಲೆಯ 68 ಗ್ರಾಮದಲ್ಲಿ ನೀರಿನ ಕೊರತೆ ಸಾಧ್ಯತೆ

12:28 PM Feb 22, 2024 | Team Udayavani |

ಉದಯವಾಣಿ ಸಮಾಚಾರ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಯಲು ಸೀಮೆಯಾಗಿರುವುದರಿಂದ ಈ ಪ್ರದೇಶದಲ್ಲಿ ಯಾವುದೇ ನದಿ ಮೂಲಗಳು, ನಾಲೆಗಳು ಇಲ್ಲ. ಮಳೆ ಆಶ್ರೀತ ಪ್ರದೇಶವಾಗಿರುವುದರಿಂದ ಮಳೆಯನ್ನೇ ನಂಬಿದ್ದಾರೆ ಜನರು. ಮಳೆ ಕೈ ಕೊಟ್ಟಿದ್ದು, ಬೇಸಿಗೆ ಬರುತ್ತಿರುವುದರಿಂದ ಕೆರೆಗ ಳಲ್ಲಿ ನೀರಿನ ಮಟ್ಟ ಕುಸಿದಿದೆ. ಈ ಹಿನ್ನೆಲೆಯಲ್ಲಿ ಜನ ರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುವ ಆತಂಕ ಎದುರಾಗಿದೆ.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಈಗಾಗಲೇ ಬರಪೀಡಿತ ಪ್ರದೇಶದ ಎಂದು ಸರ್ಕಾರ ಘೋಷಣೆ ಮಾಡಿದೆ. ಬೆಂ.ಗ್ರಾ ಜಿಲ್ಲೆಯ 68 ಹಳ್ಳಿಗಳನ್ನು ಮುಂಬರುವ ಬೇಸಿಗೆ ವೇಳೆಯಲ್ಲಿ ನೀರಿನ ಸಮಸ್ಯೆ ಬರಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ. ಈ ಹಳ್ಳಿಗಳಲ್ಲಿ ನೀರಿನ ಪೂರೈಕೆಗಾಗಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ನೀರಿಗಾಗಿ ಹಳ್ಳಿಗಳ ಸುತ್ತಮುತ್ತಲಿನ ಹಳ್ಳಿಗಳಲ್ಲಿ 180 ಕೊಳವೆ ಬಾವಿಗಳನ್ನು ಗುರುತಿಸಲಾಗಿದ್ದು, ಅವುಗಳ ಮಾಲಿಕರೊಂದಿಗೆ ಮಾತುಕತೆ ನಡೆಸಲಾಗಿದೆ.

ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಜೊತೆಗೆ ದಿನಬಳಕೆಯ ನೀರಿನ ಸಮಸ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್‌ ಗಳಲ್ಲಿ ದಿನ ಬಳಕೆಯ ನೀರಿನ ಸಮಸ್ಯೆ ಶುರುವಾ ಗಿದೆ. ಅನೇಕ ವಾರ್ಡ್‌ಗಳಿಗೆ ವಾರಕ್ಕೊಮ್ಮೆ ಒಂದು ಗಂಟೆ ಕಾಲ ಮಾತ್ರ ದಿನಬಳಕೆ ನೀರು ಬಿಡಲಾಗುತ್ತಿದೆ.ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ, ವಿಜಯಪುರ ಪಟ್ಟಣ ಪ್ರದೇಶಗಳಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಕಂಡು ಬಂದಿಲ್ಲ.

ಜಲಾಶಯ ಭರ್ತಿಯಾಗಿಲ್ಲ: ದೊಡ್ಡಬಳ್ಳಾಪುರ ಜನರಿಗೆ ಕುಡಿಯುವ ನೀರಿನ ಆಧಾರವಾಗಿದ್ದ ಜಕ್ಕಲ ಮಡಗು ಜಲಾಶಯ ಈ ಬಾರಿ ಮಳೆಗಾಲದಲ್ಲಿ ಭರ್ತಿಯಾಗಿಲ್ಲ. ಈ ಜಲಾಶಯದಲ್ಲಿ ಎರಡು ತಿಂಗಳಿಗೆ ಆಗುವಷ್ಟು ಮಾತ್ರ ನೀರು ಇದೆ. ನಂತರ ನೀರಿನ
ಅಭಾವ ಸೃಷ್ಟಿಯಾಗಿ ಪದದಾಡುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ.

ನೀರಿನ ಪೂರೈಕೆಯಲ್ಲಿ ವ್ಯತ್ಯಾಸ: ಬೇಸಿಗೆ ಬಿಸಿಲಿನ ಧಗೆ ಏರುತ್ತಿದ್ದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ತಲೆದೂಗುವಂತೆ ಆಗಿದೆ. ಬೇಸಿಗೆ ನಂತರ ಈ ನೀರಿನ ಪೂರೈಕೆ ಮತ್ತಷ್ಟು ವ್ಯತ್ಯಾಸವಾಗಲಿದ್ದು, ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿ ವರ್ಷವೂ ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲಿ ಬೇಸಿಗೆ ಇರುವುದರಿಂದ ನೀರಿನ ಕೊರತೆ ಕಂಡುಬರುತ್ತದೆ. ಕೆಲವೇ ದಿನಗಳಲ್ಲಿ ಬಿಸಿಲಿನ ಪ್ರಭಾವ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಈ ಸಮಸ್ಯೆ ಬೇಸಿಗೆಯಲ್ಲಿ ಜನರನ್ನು ಕಾಡುತ್ತದೆ. ಬೆಂ.ಗ್ರಾ ಜಿಲ್ಲೆಯಲ್ಲಿ 770 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ
ನಾಲ್ಕು ಕಡೆ ದುರಸ್ತಿಯಾದರೆ, ಮೂರು ಕಡೆ ಸರಿಪಡಿಸುವ ಕೆಲಸವಾಗಿದೆ.

Advertisement

ಕೆಲ ಕೆರೆಗಳಲ್ಲಿ ತ್ಯಾಜ್ಯ ನೀರು ಸಂಗ್ರಹ: ಜಿಲ್ಲೆಯ 4 ತಾಲೂಕುಗಳು ಸೇರಿದಂತೆ ಒಟ್ಟು 700ಕ್ಕೂ ಹೆಚ್ಚು ಕೆರೆಗಳಿವೆ. ಇದರಲ್ಲಿ ಜಿಲ್ಲಾ ಪಂಚಾಯಿತಿ ಸಣ್ಣ ನೀರಾವರಿ, ಮೀನುಗಾರಿಕೆ ಇಲಾಖೆಯ ಕೆರೆಗಳು ಸಹ ಇವೆ. ಜಿಲ್ಲೆಯ ನೆಲಮಂಗಲದ ಕೆಲಕೆರೆಗಳಲ್ಲಿ ಸ್ವಲ್ಪಮಟ್ಟಿಗೆ ನೀರಿದೆ. ಅದನ್ನು ಹೊರತುಪಡಿಸಿ, ಕೈಗಾರಿಕಾ ಪ್ರದೇಶದ ಕೆಲ ಕೆರೆಗಳಲ್ಲಿ ತ್ಯಾಜ್ಯ ನೀರಿದೆ.

ಇದರ ಹೊರತುಪಡಿಸಿ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿಯಾಗಿವೆ. ಕೆಲವೊಂದರಲ್ಲಿ ಶೇ.30-40ರಷ್ಟು ಮಾತ್ರ ನೀರಿದ್ದರೆ, ಕೆಲವೊಂದರಲ್ಲಿ ಈ ನೀರು ಇಲ್ಲ ವಾಗಿದೆ. ಬೆಟ್ಟದ ಅಂಚಿನ ಕೆರೆಗಳಾ ದ ದೊಡ್ಡಬಳ್ಳಾಪುರದ ಗುಂಡ್ಮಗೆರೆ, ದೇವನಹಳ್ಳಿ ತಾಲೂಕಿನ ಆವತಿ, ದೇವನಹಳ್ಳಿ ದೊಡ್ಡ ಕೆರೆ ಮತ್ತು ಚಿಕ್ಕಕೆರೆಗಳಿಗೆ ಎಚ್‌ ಎನ್‌ ವ್ಯಾಲಿ ನೀರು ಬಿಡುತ್ತಿರುವುದರಿಂದ ಕೆರೆಗಳಲ್ಲಿ ನೀರಿದೆ. ಉಳಿದಂತೆ ಯಾವುದೇ ಕೆರೆಗಳಲ್ಲಿ ನೀರಿಲ್ಲದೆ ಮೈದಾನದಂತೆ ಕಾಣುತ್ತಿವೆ. ಇದೀಗ ಬೇಸಿಗೆ ಪ್ರಾರಂಭದಲ್ಲೇ ಮತ್ತಷ್ಟು ನೀರಿನ ಕೊರತೆ ಕೆರೆಗಳಲ್ಲಿ ಕಾಣಬಹುದಾಗಿದೆ.

ಕೆರೆಗೆ ಶುದ್ಧೀಕರಿಸಿದ ತ್ಯಾಜ್ಯ ನೀರು: ಹೊಸಕೋಟೆ ಮತ್ತು ದೇವನಹಳ್ಳಿಗಳಲ್ಲಿ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ
ಬಿಡುತ್ತಿರುವುದರಿಂದ ಕೆರೆಗಳಲ್ಲಿ ನೀರು ಇರುವಂತೆ ಕಾಣುತ್ತಿದೆ. ಜಿಲ್ಲೆಯ ಎರಡು ತಾಲೂಕಿಗೆ ಮಾತ್ರ ಎಚ್‌ಎನ್‌ ವ್ಯಾಲಿ ಮತ್ತು ಕೆ.ಸಿ. ವ್ಯಾಲಿ ನೀರು ಬರುತ್ತಿದೆ. ದೇವನಹಳ್ಳಿ ತಾಲೂಕಿಗೆ 9 ಕೆರೆಗೆ ಎಚ್‌ಎನ್‌ ವ್ಯಾಲಿ, ಹೊಸಕೋಟೆಯ 5 ಕೆರೆಗೆ ಕೆ.ಸಿ. ವ್ಯಾಲಿ ನೀರು
ತುಂಬಿಸಲಾಗುತ್ತಿದೆ. ಈ ಕೆರೆಗಳು ಅಂತರ್ಜಲ ಮಟ್ಟ, ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಾಪಾಡಲು ಮುಖ್ಯವಾಗಿದೆ.

ಕೊಳವೆಬಾವಿಯೇ ನೀರಿನ ಮೂಲ: ಜಿಲ್ಲೆಯಲ್ಲಿ ಕೊಳವೆ ಬಾವಿಗಳೇ ನೀರಿನ ಪ್ರಮುಖ ಮೂಲವಾಗಿದೆ. ಪ್ರತಿ ಮನೆಗೂ ನಲ್ಲಿ ಮೂಲಕ ನೀರು ಕೊಡುವ ಜಲಜೀವನ್‌ ಮಿಷನ್‌ ಯೋಜನೆಯಡಿ ಕೊರೆಯುತ್ತಿರುವ ಹೊಸ ಕೊಳವೆ ಬಾವಿಗಳು ಬೇಸಿಗೆಯಲ್ಲಿ ನೀರಿನ ಸಮಸ್ಯೆಗೆ ಪರಿಹಾರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಳವೆ ಬಾವಿಗಳು ಮಾರ್ಚ್‌ನಲ್ಲಿಕೈಕೊಟ್ಟರೆ ಪರಿಸ್ಥಿತಿ ನಿಭಾಯಿಸಲು ಸಿದ್ಧತೆ ಕೈಗೊಂಡಿರುವ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ.

ನೀರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ: ಡೀಸಿ

ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆಯಾಗಿ, ಅಗತ್ಯ ಸಿದ್ಧತೆ ಕೈಗೊಳ್ಳ ಬೇಕು ಎಂದು ಅಧಿಕಾರಿಗಳಿಗೆ ಬೆಂಗ್ರಾ ಜಿಲ್ಲಾ ಧಿಕಾರಿ ಡಾ.ಎನ್‌.ಶಿವಶಂಕರ್‌ ಸೂಚಿಸಿದರು. ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತ ನಾಡಿ, ಕುಡಿಯುವ ನೀರು ಸಮಸ್ಯೆಯಾಗದಂತೆ ಮುಂಗಡವಾಗಿ ಖಾಸಗಿ ಕೊಳವೆ ಬಾವಿಗಳನ್ನು ಕಾಯ್ದಿರಿಸಿ, ಕ್ರಮವಹಿಸಬೇಕು. ಜಾನುವಾರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗದಂತೆ ಮುಂಗಡ ಮೇವು ಸಂಗ್ರಹಿ ಸ ಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಗರಾಭಿವೃದ್ಧಿ ಇಲಾಖೆ ಯೋಜನಾ ನಿರ್ದೇಶಕಿ ಶಾಲಿನಿ, ಕೃಷಿ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ, ಪಶುಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಜಗದೀಶ್‌, ರೇಷ್ಮೆ ಇಲಾಖೆ ಉಪ ನಿರ್ದೇಶಕ ಪ್ರಭಾಕರ್‌ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂ.ಗ್ರಾ ಜಿಲ್ಲೆಯ 68 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬೇಸಿಗೆಯಲ್ಲಿ ಬರಬಹುದು ಎಂದು ಗುರುತಿಸಲಾಗಿದೆ. ಗ್ರಾಮಗಳಲ್ಲಿ
ಕುಡಿಯುವ ನೀರಿನ ಸಮಸ್ಯೆ ಬರದಂತೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮಗಳ ಲ್ಲಿರುವ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ, ಅವುಗಳ ಮೂಲಕ ಜನರಿಗೆ ನೀರು ಕಲ್ಪಿಸುವ ಕಾರ್ಯ ಮಾಡಲಾಗುವುದು.
●ಸುಬಾನ್‌ ಸಾಹೇಬ್‌, ಇಇ, ಗ್ರಾಮೀಣ
ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಬೆಂಗ್ರಾ ಜಿಲ್ಲೆ

ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪ್ರತಿ ವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಜನರನ್ನು ಮತ್ತು ರೈತರನ್ನು ಕಾಡುತ್ತದೆ. ಈ ವೇಳೆಯೇ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಮತ್ತೆ ನೀರನ್ನು ಬರುವವರೆಗೂ ಬಳಸಬೇಕಾಗಿದೆ.
●ರತ್ನಮ್ಮ, ಸ್ಥಳೀಯರು

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಬೇಸಿಗೆ ಆರಂಭಕ್ಕೂ ಮುನ್ನ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ಅಗತ್ಯವಿದ್ದರೆ ನೀರಿನ ಟ್ಯಾಂಕರ್‌ ವ್ಯವಸ್ಥೆ ಕಲ್ಪಿಸಲು ಅನುದಾನದ ಕೊರತೆ ಇಲ್ಲ.
●ಶ್ರೀನಾಥ್‌ ಗೌಡ, ಇಒ, ತಾಪಂ, ದೇವನಹಳ್ಳಿ

■ ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next