ಕಿನ್ನಿಗೋಳಿ: ಇಲ್ಲಿನ ತಾಳಿಪಾಡಿಯ ತಾಳಿಪಾಡಿಗುತ್ತು ಹತ್ತಿರದ ಬೆದ್ರಡಿಯಿಂದ ಪಿಪಾದೆ ಸಮೀಪದಲ್ಲಿ ಸುಮಾರು 1.5 ಕಿ.ಮೀ ಉದ್ದದ ಹರಿಯುವ ನೀರಿನ ತೋಡಿನಲ್ಲಿ 5 ಅಡಿಯಷ್ಟು ಹೂಳು ತುಂಬಿದೆ. ಸ್ವಲ್ಪ ಮಳೆ ಬಂದರೂ ಸಾಕು, ನೀರು ಪರಿಸರದ ಗದ್ದೆಗಳಿಗೆ ನಷ್ಟ ಉಂಟು ಮಾಡುತ್ತದೆ.
ಎಳತ್ತೂರಿನಿಂದ ಶಿಮಂತೂರು ಮೂಲಕ ಮೂಲ್ಕಿ ಶಾಂಭವಿ ನದಿ ಸೇರುವ ಈ ಕಾಲುವೆಯು ತಾಳಿಪಾಡಿ ಭಾಗದಲ್ಲಿ 15 ವರ್ಷಗಳಿಂದ ತೋಡಿನ ಹೂಳು ಎತ್ತಿಲ್ಲ. ಎರಡು ವರ್ಷಗಳಲ್ಲಿ ಐದು ಬಾರಿ ನೆರೆ ಬಂದು ತಾಳಿಪಾಡಿ ಗುತ್ತು ಬೆದ್ರಡಿ, ಪಿಪಾದೆಯ ಸುಮಾರು 100 ಎಕ್ರೆ ಗದ್ದೆ ನಾಟಿ ಎಕರೆ ಗದ್ದೆಗಳಲ್ಲಿ ಭತ್ತದ ಕೃಷಿಗೆ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಮನವಿ ಮಾಡಿದರೂ ಪ್ರಯೋಜನವಾಗಿಲ್ಲ!
ಕಿನ್ನಿಗೋಳಿ ಗ್ರಾ.ಪಂ. ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲಿ ಈ ಬಗ್ಗೆ ಮನವಿ ಮಾಡಿದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಬೆಳೆ ಹಾನಿಯ ಪರಿಹಾರವೂ ಸಿಕ್ಕಿಲ್ಲ ಎಂಬುದು ಕೃಷಿಕರ ಅಳಲು.
ಕೆಲವು ವರ್ಷಗಳಿಂದ ನಾವು ಬೆಳೆದ ಭತ್ತ ಹಾಗೂ ಬೈಹುಲ್ಲು ಕೂಡ ನೆರೆಯಿಂದ ಹಾಳಾಗಿದೆ. ಜನಪ್ರತಿನಿಧಿಗಳು ಸ್ಥಳೀಯಾಡಳಿತ ಈ ಬಗ್ಗೆ ಕ್ರಮ ಕೈಗೊಂಡ ನಮ್ಮ ಸಮಸ್ಯೆಗೆ ಪರಿಹಾರ ನೀಡಬೇಕಿದೆ ಎಂದು ಕೃಷಿಕ ಗೋಪಾಲ ಭಂಡಾರಿ ಆಗ್ರಹಿಸಿದ್ದಾರೆ. ಆರು ತಿಂಗಳ ಹಿಂದೆ ಕಿನ್ನಿಗೋಳಿ ಮೂಲ್ಕಿ ರಾಜ್ಯ ಹೆದ್ದಾರಿಯ ಎಸ್. ಕೋಡಿಯಲ್ಲಿ ಜೆಜೆಎಂ ಕುಡಿಯುವ ನೀರಿನ ಪೈಪ್‌ಲೈನ್‌ಗಾಗಿ ಚರಂಡಿಗೆ ಗುಂಡಿ ತೋಡಲಾಗಿದ್ದು, ಈವರೆಗೆ ಆ ಗುಂಡಿ ಮುಚ್ಚಿಲ್ಲ. ಹೆಚ್ಚಿನ ಎಲ್ಲ ರಸ್ತೆಗಳಲ್ಲಿ ಪೈಪ್ ಲೈನ್‌ನವರು ಜೇಸಿಬಿ ಮೂಲಕವಾಗಿ ಚರಂಡಿಯಲ್ಲಿ ಪೈಪ್‌ಲೈನ್ ಹಾಕಿದ್ದು ಇದರ ಪರಿಣಾಮ ಮುಂದಿನ ಮಳೆಗಾಲದಲ್ಲಿ ಕೃತಕ ನೆರೆ ಭೀತಿ ಎದುರಾಗಲಿದೆ.
ಕಿನ್ನಿಗೋಳಿಯ ಮುಖ್ಯ ರಸ್ತೆಯಲ್ಲಿ ಮೆನ್ನಬೆಟ್ಟು ಬದಿಯಲ್ಲಿ ಸುಮಾರು 400 ಮೀ. ಚರಂಡಿ ಮಾಯವಾಗಿದೆ. ರಸ್ತೆಯಲ್ಲಿಯೇ ಮಳೆ ನೀರು ಹರಿಯುತ್ತದೆ. ಪಾರ್ಕಿಂಗ್ ರಸ್ತೆ ವಿಸ್ತರಣೆ ಮಾಡಿದರೂ ಚರಂಡಿ ನಿರ್ಮಿಸಿಲ್ಲ. ಈ ಭಾಗದಲ್ಲಿ ಸುಖಾನಂದ ಶೆಟ್ಟಿ ಸರ್ಕಲ್‌ನಿಂದ ರಾಜಾಂಗಣದ ಮುಂದಿನ ಭಾಗದ ವರೆಗೆ ಕಾಂಕ್ರೀಟ್ ಚರಂಡಿ ಕಾಮಗಾರಿ ಬಾಕಿಯಾಗಿ ಸಮಸ್ಯೆಯಾಗಿದೆ.
ತಾಳಿಪಾಡಿ ಗ್ರಾಮದ ಪುನರೂರು ವಾಪ್ತಿಯಲ್ಲಿ ರಾಜ ಕಾಲುವೆಯದ್ದು ಕೂಡ ಇದೇ ಪರಿಸ್ಥಿತಿ. ಕಿಂಡಿ ಅಣೆಕಟ್ಟು ಇರುವ ಜಾಗದಲ್ಲಿ ಸ್ವಲ್ಪ ಹೂಳು ತೆಗೆಯಲಾಗಿದೆ. ಉಳಿದ ಭಾಗದಲ್ಲಿ ಹೂಳು ಹಾಗೂ ಕಾಲುವೆಯ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದಿವೆ. ಇದರಿಂದ ಸರಾಗವಾಗಿ ನೀರು ಹರಿಯಲು ತೊಡಕಾಗಿದೆ. ಕಿನ್ನಿಗೋಳಿ – ಗೋಳಿಜೋರ ಮುಖ್ಯ ರಸ್ತೆ, ಕಾಂಕ್ರೀಟ್ ರಸ್ತೆ ಇದೆ. ಆದರೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ.
ಕಿನ್ನಿಗೋಳಿ ಗುತ್ತಕಾಡು ರಸ್ತೆಯಲ್ಲೂ ಚರಂಡಿ ಹೂಳು ತೆಗೆಯಬೇಕಾಗಿದೆ. ಕಿನ್ನಿಗೋಳಿ ತುಡಾಮ ರಸ್ತೆಯ ಬದಿಯಲ್ಲಿ ಚರಂಡಿ ಇದ್ದರೂ ಹಲ್ಲು ಕಸ ತುಂಬಿದೆ. ಕಟೀಲು ಪೇಟೆಯಲ್ಲಿ ನೀರು ಹರಿದು ಹೋಗಲು ಚರಂಡಿ ಕಾಮಗಾರಿ ನಡೆದಿದೆ. ಆದರೆ ಗಾಮೀಣ ಭಾಗದ ಸಿತ್ಲಬೈಲು, ನೀರು ಹರಿದು ಹೋಗಲು ಚರಂಡಿ ನಿರ್ಮಾಣವಾಗಬೇಕಿದೆ.