ಬೆಂಗಳೂರು: ರಾಜ್ಯದಲ್ಲಿ ಬಿಟ್ಟು-ಬಿಟ್ಟು ಮಳೆಯಾಗುತ್ತಿರುವುದರಿಂದ ಡೆಂಘೀ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಇದುವರೆಗೆ 4,926 ಡೆಂಘೀ ಪ್ರಕರಣಗಳು, 8 ಶಂಕಿತ ಡೆಂಗಿ ಮರಣ ಪ್ರಕರಣಗಳು ವರದಿಯಾಗಿದೆ.
ಈಡೀಸ್ ಸೊಳ್ಳೆಗಳ ಉತ್ಪತ್ತಿ ತಾಣಗಳು ಹೆಚ್ಚಾಗಿ ಕಂಡ ಬುರುತ್ತಿರುವುದರಿಂದ ಡೆಂಘೀ ಪ್ರಕರಣಗಳು ನಿಯಂತ್ರಿಸುವುದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ, ನಗರಾಡಳಿತ, ಸ್ಥಳೀಯಾಡಳಿತ ಹಾಗೂ ಜಿಲ್ಲಾಡಳಿತ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸಮರ್ಪಕ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮತ್ತು ನಿರ್ವಹಣೆ, ನಿರುಪಯುಕ್ತ ಹಾಗೂ ಘನತ್ಯಾಜ್ಯಗಳ ಶೀಘ್ರ ವಿಲೇವಾರಿ ಹಾಗೂ ನಿರ್ವಹಣೆ, ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ಮತ್ತು ನಿರ್ಮೂಲನಾ ಕಾರ್ಯಕ್ರಮ, ತುತು ಸಂದರ್ಭದಲ್ಲಿ ಅನುಮೋದಿತ ರಾಸಾಯನಿಕವನ್ನು ಬಳಸಿ ಒಳಾಂಗಣ ಧೂಮೀಕರಣ, ಸೊಳ್ಳೆ ಕಡಿತದಿಂದ ಪಾರಾಗಲು ಸುರಕ್ಷಿತ ವಿಧಾನ ಅನುಕರಣೆ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆಗೆ ಆದೇಶ ನೀಡಲಾಗಿದೆ.
ರಾಜ್ಯದ ಬಹುತೇಕ ಕಡೆ ವಿಪರೀತ ಮಳೆ ಮತ್ತು ವಾತಾವರಣ ಬದಲಾವಣೆ ಹಿನ್ನೆಲೆಯಲ್ಲಿ ಸೊಳ್ಳೆಗಳಿಂದ ಹರಡುವ ಡೆಂಘೀ, ಚಿಕುನ್ ಗುನ್ಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ವತಿಯಿಂದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾಡಳಿತಗಳಿಗೆ ಜಂಟಿ ಸುತ್ತೋಲೆ ಹೊರಡಿಸಲಾಗಿದೆ. ಇದುವರೆಗೆ 8 ಶಂಕಿತ ಡೆಂಘೀ ಮರಣ ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.