ಚಿಕ್ಕಬಳ್ಳಾಪುರ: ಪ್ರತಿ ವರ್ಷ ಬೆಳೆ ವಿಮೆ ನೋಂದಣಿ ಯಲ್ಲಿ ಹಿಂದೆ ಬೀಳುತ್ತಿದ್ದ ಜಿಲ್ಲೆಯು ಈ ವರ್ಷ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿ ದಿರುವ ಪರಿಣಾಮ ಆತಂಕಕ್ಕೀಡಾಗಿ ರುವ ರೈತರು, ಬೆಳೆ ನಷ್ಟದಿಂದ ಪಾರಾ ಗಲು ಬೆಳೆ ವಿಮೆ ಆಸರೆ ಪಡೆಯಲು ಮುಂದಾಗಿದ್ದಾರೆ.
ಅತೀ ಹೆಚ್ಚು: ಜಿಲ್ಲೆಯಲ್ಲಿ ಆ.4 ರ ಅಂತ್ಯಕ್ಕೆ ಬರೋಬ್ಬರಿ 42,075 ಮಂದಿ ರೈತರು ಬೆಳೆ ವಿಮೆ ನೋಂದಣಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬೆಳೆ ವಿಮೆಗೆ ಅತಿ ಹೆಚ್ಚು ರೈತರು ನೋಂದಣಿ ಮಾಡಿಸಿಕೊಂಡಾಂತಾಗಿದೆ.
ಕಳೆದ ವರ್ಷ ಬೆಳೆ ವಿಮೆ ನೋಂದಣಿ ಅವಧಿ ಮುಗಿ ಯುವ ವೇಳೆ ಜಿಲ್ಲೆಯಲ್ಲಿ ಒಟ್ಟು 39,837 ಮಂದಿ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದರು. ಆದರೆ, ಈ ವರ್ಷ ಆ.4 ರ ವೇಳೆಗೆ 42,075 ಮಂದಿ ಬೆಳೆ ವಿಮೆಗೆ ನೋಂದಾಯಿಸುವ ಮೂಲಕ ನೋಂದಣಿ ಅವಧಿ ಕೊನೆ ವೇಳೆಗೆ ಬೆಳೆ ವಿಮೆ ನೋಂದಣಿ ಸಂಖ್ಯೆ ಬರೋಬ್ಬರಿ 50 ಸಾವಿರ ಗಡಿ ದಾಟುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಬೆಳೆ ವಿಮೆಗೆ ಅವಧಿ ಮುಗಿದರೂ ಸರ್ಕಾರ ಆ.16 ರ ವರೆಗೂ ಮತ್ತೆ ಕಾಲಾವಕಾಶ ನೀಡಿದೆ. ಹೀಗಾಗಿ ಜಿಲ್ಲೆಯಲ್ಲಿ ಈ ವರ್ಷ ನಿರೀಕ್ಷೆಗೂ ಮೀರಿ ಬೆಳೆ ವಿಮೆ ನೋಂದಣಿ ಆಗುವ ಆಶಾಭಾವನೆ ಕೃಷಿ ಇಲಾಖೆ ಹೊಂದಿದೆ.
ಪರಿಹಾರ ಬಂದಷ್ಟು ಬರಲಿ: ಈ ಬಾರಿ ಜಿಲ್ಲೆಯಲ್ಲಿ ಬಿತ್ತನೆ ಸಮಯಕ್ಕೆ ಸರಿಯಾಗಿ ಮಳೆ ಕೈ ಕೊಟ್ಟ ಪರಿಣಾಮ ನೆಲಗಡಲೆ, ತೊಗರಿ, ಮುಸುಕಿನ ಜೋಳ ಮತ್ತಿತರ ಮಳೆ ಆಶ್ರಿತ ಬೆಳೆಗಳು ಸಮರ್ಪಕವಾಗಿ ಬಿತ್ತನೆ ಆಗಿಲ್ಲ. ಕೃಷಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕೇವಲ ಶೇ.50 ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದ್ದು, ಈಗ ಮಳೆಯ ಅನಿಶ್ಚಿತತೆಯಲ್ಲಿರುವ ರೈತರು ತಾವು ಇಟ್ಟಿರುವ ಬೆಳೆ ನಷ್ಟವಾದರೂ ಕೈಗೆ ಬಂದಷ್ಟು ಪರಿಹಾರ ಸಿಗಲಿ ಎನ್ನುವ ಉದ್ದೇಶದಿಂದ ಜಿಲ್ಲೆಯಲ್ಲಿ ಈ ವರ್ಷ ಬೆಳೆ ವಿಮೆ ನೋಂದಣಿಗೆ ಉತ್ಸಾಹ ತೋರಿ ದಾಖಲೆ ಪ್ರಮಾಣದಲ್ಲಿ ನೋಂದಣಿ ಮಾಡಿಸಿದ್ದಾರೆ.
ಗೌರಿಬಿದನೂರು, ಬಾಗೇಪಲ್ಲಿ ಪ್ರಥಮ: ಬೆಳೆ ವಿಮೆ ನೋಂದಣಿಯಲ್ಲಿ ಜಿಲ್ಲೆಯ ಮಾಜಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಅವರ ತವರು ತಾಲೂಕು ಗೌರಿಬಿದನೂರು (19,622) ಪ್ರಥಮ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ ಅತಿ ಹಿಂದುಳಿದ ಹಾಗೂ ಮಳೆ ಕೊರತೆ ಆಗಿರುವ ಬಾಗೇಪಲ್ಲಿ ತಾಲೂಕು (11,429) ಬೆಳೆ ವಿಮೆ ನೋಂದಣಿಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ ಶಿಡ್ಲಘಟ್ಟ 3,323, ಗುಡಿಬಂಡೆ 4,498, ಚಿಕ್ಕಬಳ್ಳಾಪುರ 2,092 ಮಂದಿ ಹಾಗೂ ಚಿಂತಾಮಣಿಯಲ್ಲಿ ಬರೀ 1,111 ಮಂದಿ ರೈತರು ಮಾತ್ರ ಬೆಳೆ ವಿಮೆ ನೋಂದಣಿ ಮಾಡಿಸಿ ಕೊನೆ ಸ್ಥಾನದಲ್ಲಿದೆ. ಇನ್ನೂ ಬೆಳೆ ವಿಮೆ ನೋಂದಣಿ ಬಗ್ಗೆ ಗ್ರಾಮೀಣ ಭಾಗದಲ್ಲಿ ರೈತರಿಗೆ ಸಮರ್ಪಕ ಅರಿವು, ಮಾಹಿತಿ ಇಲ್ಲ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ.
ರೈತರ ಮನವೊಲಿಕೆಯಲ್ಲಿ ಕೃಷಿ ಅಧಿಕಾರಿಗಳು:
ಈ ಬಾರಿ ಮಳೆ ಕೈ ಕೊಡುವ ಸಾಧ್ಯತೆ ಇದೆ. ಆದ್ದರಿಂದ ಬೆಳೆ ವಿಮೆ ಮಾಡಿಸಿಕೊಳ್ಳಬೇಕೆಂದು ಕೃಷಿ ಅಧಿಕಾರಿಗಳು ರೈತರ ಬೆನ್ನು ಬಿದ್ದಿದ್ದಾರೆ. ಮಳೆ ಇಲ್ಲದೇ ಬೆಳೆ ನಷ್ಟ ಆಗಬಹುದು. ವಿಮೆ ಮಾಡಿಸಿದರೆ ಸರ್ಕಾರ ನಷ್ಟ ಪರಿಹಾರ ಕೊಡುತ್ತದೆ ಎಂದು ಹೇಳಿ ಸಾಕಷ್ಟು ರೈತರಿಗೆ ಖುದ್ದು ಅಧಿಕಾರಿಗಳೇ ದೂರವಾಣಿ ಕರೆ ಮಾಡಿ ವಿಮೆ ನೋಂದಣಿಗೆ ಮನವೊಲಿಸುತ್ತಿದ್ದಾರೆ. ಚಿಂತಾಮಣಿ ತಾಲೂಕಿನ ಕೃಷಿ ಅಧಿಕಾರಿಗಳು ಪ್ರೂಟ್ಸ್ ತಂತ್ರಾಂಶದಡಿ ರೈತರು ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗಳಿಗೆ ಸಾಮೂಹಿಕವಾಗಿ ಕಾನ್ಫರೆನ್ಸ್ ಕಾಲ್ ಮಾಡಿ ಬೆಳೆ ವಿಮೆ ನೋಂದಣಿ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಬೆಳೆ ವಿಮೆ ನೋಂದಣಿಗೆ ಈ ವರ್ಷ ರೈತರ ಸ್ಪಂದನೆ ಪರವಾಗಿಲ್ಲ. ಜಿಲ್ಲೆಗೆ ನಿರ್ದಿಷ್ಟವಾಗಿ ಗುರಿ ಅಂತ ಇಲ್ಲ. ಆಸಕ್ತ ರೈತರು ಬೆಳೆ ವಿಮೆ ನೋಂದಣಿ ಮಾಡಿಸಿಕೊಳ್ಳಬಹುದು. ಆ.16 ರ ವರೆಗೂ ರಾಗಿ ಬೆಳೆಗೆ ವಿಮೆ ನೋಂದಣಿಗೆ ಅವಕಾಶ ಇದೆ. ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಆ.4 ರ ಅಂತ್ಯಕ್ಕೆ 4,0,100 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದಾರೆ.
-ಜಾವೀದಾ ನಸೀಮಾ ಖಾನಂ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು.
– ಕಾಗತಿ ನಾಗರಾಜಪ್ಪ