ಟಿ.ದಾಸರಹಳ್ಳಿ: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಲಕ್ಕಸಂದ್ರ ಸೇರಿ ಹಲವೆಡೆ ಮನೆಗಳು ಧರೆಗೆ ಉರುಳಿವೆ. ಕ್ಷೇತ್ರದ ಬಾಗಲ ಗುಂಟೆ ವಾರ್ಡ್‌ನ ಗುಂಡಪ್ಪ ಬಡಾವಣೆಯ ಒಂದು ಮನೆ ಹಾಗೂ ಸೌಂದರ್ಯ ಬಡಾ ವಣೆಯ ಎರಡು ಮನೆಗಳು ಕುಸಿಯುವ ಆತಂಕ ಎದುರಾಗಿದೆ.
ಪೂರ್ಣಿಮಾ, ರಂಗಸ್ವಾಮಿ ಭಾಗ್ಯಮ್ಮ ಎಂಬುವರ ಮನೆಗಳು ಯಾವುದೇ ಕ್ಷಣದಲ್ಲಿ ಬಿದ್ದುಹೋಗುವ ಸಾಧ್ಯತೆಯಿದ್ದು ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ. ಬಡಾವಣೆಯ ಮಾಲೀಕರ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಸಾಲ ಮಾಡಿ ನಿರ್ಮಿಸಿರುವ ಮನೆಗಳು ಕುಸಿಯುವ ಹಂತ ತಲುಪಿವೆ.
ಪ್ರಾಣ ರಕ್ಷಣೆಗಾಗಿ ಮನೆ ಖಾಲಿ ಮಾಡಿದ್ದೇವೆ ಎಂದು ಮನೆ ಮಾಲೀಕರಾದ ಪೂರ್ಣಿಮಾ ಅಳಲು ತೋಡಿಕೊಂಡರು. ಯಜಮಾನರು ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ನಾನು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರೂ ಜೀವನ ನಿರ್ವಹಣೆ ದುಸ್ತರವಾಗಿದೆ. ಮನೆ ಕುಸಿಯುವ ಭೀತಿಯಿಂದಾಗಿ ಮನೆ ಖಾಲಿ ಮಾಡುವ ಅನಿವಾರ್ಯ ಪರಿಸ್ಥಿತಿಯಿಂದಾಗಿ ಬೀದಿಗೆ ಬೀಳುವಂತಾಗಿದೆ.
ಇದನ್ನೂ ಓದಿ;- ಕೋಟಿಗೊಬ್ಬ ಕಿರಿಕ್: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಜೀವ ಬೆದರಿಕೆ ಆರೋಪ! FIR ದಾಖಲು
ಸರ್ಕಾರ, ಬಿಬಿಎಂಪಿ ಹಾಗೂ ಸಂಬಂಧಪಟ್ಟವರು ಕೂಡಲೇ ನೆರವಿಗೆ ಧಾವಿಸಬೇಕೆಂದು ಮಳೆಹಾನಿ ಸಂತ್ರಸ್ತೆ ಭಾಗ್ಯಮ್ಮ ಮನವಿ ಮಾಡಿದರು. ಮತ್ತೂಂದೆಡೆ ಮಲ್ಲಸಂದ್ರ ವಾರ್ಡ್‌ನ ಕೆಂಪೇಗೌಡ ಉದ್ಯಾನದಲ್ಲಿ ಬೃಹತ್ ಪ್ರಮಾಣದ ನೀರು ಸಂಗ್ರಹವಾಗಿ ಕೋಟೆಯ ಗೋಡೆಯ ಭಾಗವೊಂದು ಕುಸಿದಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಮಳೆ ಹಾನಿ ಪ್ರದೇಶಗಳಿಗೆ ದಾಸರಹಳ್ಳಿ ವಲಯ ಜಂಟಿ ಆಯುಕ್ತ ನರಸಿಂಹಮೂರ್ತಿ ಭೇಟಿ ಪರಿಶೀಲನೆ ನಡೆಸಿ ಅನಾಹುತ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.