Advertisement

ನಾಲ್ಕು ದಶಕಗಳ ಸೇತುವೆಗೆ ಕುಸಿತದ ಭೀತಿ!

10:18 AM Jul 28, 2018 | Team Udayavani |

ಆಲಂಕಾರು: ಪೆರಾಬೆ ಗ್ರಾಮದ ಸುರುಳಿ ಎನ್ನುವಲ್ಲಿ 40 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕಿರು ಸೇತುವೆ ಕುಸಿತದ ಭೀತಿ ಎದುರಿಸುತ್ತಿದೆ. ಮೈಸೂರು-ಧರ್ಮಸ್ಥಳ ರಸ್ತೆಗೆ ಸಂಪರ್ಕಿತ ರಸ್ತೆಯಲ್ಲಿ ಈ ಕಿರು ಸೇತುವೆ ಇದೆ. ಆಲಂಕಾರು- ನೆಲ್ಯಾಡಿ ಸಂಪರ್ಕದ ಪ್ರಮುಖ ರಸ್ತೆಯೂ ಇದಾಗಿದೆ. ಆಲಂಕಾರಿನಿಂದ 2 ಕಿ.ಮೀ. ದೂರದಲ್ಲಿರುವ ಈ ಕಿರು ಸೇತುವೆ ಕುಸಿದು ಬಿದ್ದಲ್ಲಿ ನೆಲ್ಯಾಡಿ, ಸುರುಳಿ, ಮಾಪಲ, ಕೆಮ್ಮಿಂಜೆ, ಮೊದಲಾದ ಪ್ರಮುಖ ಸ್ಥಳಗಳ ಸಂಪರ್ಕವನ್ನು ಕಳೆದುಕೊಳ್ಳಲಿದೆ. 

Advertisement

ಅಪಾಯದ ಮುನ್ಸೂಚನೆ
ಸೇತುವೆಯ ತಡೆಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಕಾಂಕ್ರೀಟ್‌ ಒಳಗಿನ ಕಬ್ಬಿಣದ ರಾಡ್‌ಗಳು ತುಕ್ಕು ಹಿಡಿದಿವೆ. ಒಂದು ಬದಿಯ ತಡೆಗೋಡೆ ಕೂಡ ವಾಲಿಕೊಂಡಿದೆ. ಸೇತುವೆಯ ಅಗಲವು ಬಹಳಷ್ಟು ಕಿರಿದಾಗಿದ್ದು, ಏಕಕಾಲದಲ್ಲಿ ಎರಡೂ ಕಡೆ ಯಿಂದ ಬರುವ ವಾಹನಗಳಿಗೆ ಸಂಚಾರ ಕಷ್ಟಕರ. ವಾಹನಗಳು ಸೇತುವೆಯ ಬದಿಗೆ ಸರಿದಲ್ಲಿ ಅಪಾಯ ಗ್ಯಾರಂಟಿ ಎನ್ನು ವಂತಿದೆ. 5 ವರ್ಷಗಳ ಹಿಂದೆ ಗ್ರಾಮ ಸಡಕ್‌ ಯೋಜನೆಯಡಿ ಆಲಂಕಾರಿನಿಂದ ಆರ್ಲದವರೆಗೆ ರಸ್ತೆ ದುರಸ್ತಿಗೊಳಿಸಿ ಮರುಡಾಮರು ಕಾಮಗಾರಿ ಮಾಡಲಾಗಿತ್ತು. ಆ ಸಮಯದಲ್ಲಿ ಸುರುಳಿ ಕಿರು ಸೇತುವೆಯನ್ನು ದುರಸ್ತಿ ಮಾಡಿಲ್ಲ. ಸೇತುವೆ ವಿಸ್ತರಿಸುವ ಕಾರ್ಯವನ್ನೂ ಮಾಡಿಲ್ಲ.

ಈ ರಸ್ತೆಯ ಮುಂದಕ್ಕೆ ಸಿಗುವ ಮಾಪಲ ಸಂಪರ್ಕ ಸೇತುವೆಯೂ ತೀರಾ ಅವೈಜ್ಞಾನಿಕವಾಗಿದೆ. ಈ ಸೇತುವೆಯನ್ನು ತಿರುವಿನಲ್ಲಿಯೇ ನಿರ್ಮಾಣ ಮಾಡಿದ್ದಾರೆ ಎನ್ನುವ ಆರೋಪವಿದೆ. ಕೆಲವು ವರ್ಷಗಳ ಹಿಂದೆ ಈ ಸೇತುವೆಯ ಸಂಪರ್ಕ ರಸ್ತೆಯ ಬಳಿ ಕುಸಿತ ಕಂಡುಬಂದಿತ್ತು. ಅದನ್ನು ಜಿ.ಪಂ. ಅನುದಾನದಲ್ಲಿ ದುರಸ್ತಿ ಮಾಡಲಾಗಿತ್ತು. 2013ರಲ್ಲಿ ರಸ್ತೆ ಮರು ಡಾಮರು ಕಾಮಗಾರಿ ನಡೆ ಸುವ ಸಂದರ್ಭ ಮಗ ದೊಮ್ಮೆ ಸೇತುವೆ ದುರಸ್ತಿ ಮಾಡಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಶಮನ ಮಾಡಲಾಗಿದೆ. ಅಪಾಯ ಸಂಭವಿಸುವ ಮುನ್ನ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಶೀಘ್ರವಾಗಿ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬಸ್‌ ಸಂಚಾರವೂ ರದ್ದು 
ಕಿರು ಸೇತುವೆ ಅಪಾಯಕಾರಿಯಾಗಿರುವ ಪರಿಣಾಮ ಬಸ್‌ ಸಂಚಾರ ಕಷ್ಟ ಎಂದು ಹೇಳಿ 5 ವರ್ಷಗಳ ಹಿಂದೆ ಉಪ್ಪಿನಂಗಡಿಯಿಂದ ಆಲಂಕಾರಿನ ಮೂಲಕ ಬೆಳಗ್ಗೆ ಮತ್ತು ಸಂಜೆ ಸುರುಳಿ ಕಡೆಗಿದ್ದ ಸರಕಾರಿ ಬಸ್‌ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

ಗಮನಕೆಕ್ಕೆ ಬಂದಿಲ್ಲ
ಸೇತುವೆ ಮುರಿದು ಬೀಳುವ ಹಂತ ತಲುಪಿದ್ದು ನಮ್ಮ ಗಮನಕ್ಕೆ ಬಂದಿಲ್ಲ. ಶೀಘ್ರವೇ ಸೇತುವೆ ಪರಿಶೀಲನೆ ಮಾಡಲಾಗುವುದು. ದುರಸ್ತಿ ಕಾಮಗಾರಿಯನ್ನು ಪಂಚಾಯತ್‌ ಅನುದಾನದಿಂದ ಮಾಡಲು ಅಸಾಧ್ಯ. ಈ ವಿಚಾರವಾಗಿ ಶಾಸಕರು, ತಾ. ಪಂ., ಜಿ. ಪಂ.ಗೆ ಮನವಿ ಮಾಡಲಾಗುವುದು. ಗ್ರಾಮಸ್ಥರ ಸಹಿವುಳ್ಳ ಬೇಡಿಕೆ ಪತ್ರವನ್ನು ಶಾಸಕ ರಿಗೆ ಕಳುಹಿಸಲಾಗುವುದು. 
ಬೇಬಿ ಸಿ. ಪಾಟಾಲಿ
ಪೆರಾಬೆ ಗ್ರಾ.ಪಂ. ಅಧ್ಯಕ್ಷೆ

Advertisement

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next