ಬೆಂಗಳೂರು:ಆದಾಯ ತೆರಿಗೆ ಇಲಾಖೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಇ.ಡಿ. ಸಮನ್ಸ್ ನೀಡಿದ್ದು, ಮೇಲ್ಮನವಿ ಸಲ್ಲಿಸಲು ನಮಗೆ ಕಾಲಾವಕಾಶ ಬೇಕು. ಅಲ್ಲಿವರೆಗೆ ಡಿಕೆ ಶಿವಕುಮಾರ್ ಅವರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಬೇಕೆಂದು ಕೋರಿ ಡಿಕೆಶಿ ಪರ ವಕೀಲರಾದ ಬಿವಿ ಆಚಾರ್ಯ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಜಾರಿಗೊಳಿಸಿದ್ದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ನ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿತ್ತು.
ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ರಾತ್ರಿಯೇ ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಸಮನ್ಸ್ ನೀಡಿ, ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.
ಮಧ್ಯಂತರ ರಕ್ಷಣೆಗೆ ಇ.ಡಿ.ಆಕ್ಷೇಪ;
ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ನೀಡಿರುವ ಸಮನ್ಸ್ ಗೆ ಸಂಬಂಧಿಸಿದಂತೆ ಮಧ್ಯಂತರ ರಕ್ಷಣೆ ನೀಡುವಂತೆ ಕೋಡಿ ಡಿಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿಗೆ ಇ.ಡಿ.ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪ್ರಕರಣದ ತನಿಖೆ ನಡೆಯುತ್ತಿದೆ. ಸಮನ್ಸ್ ಜಾರಿಯಾಗಿದೆ. ಹೈಕೋರ್ಟ್ ಕೂಡಾ ಈ ಬಗ್ಗೆ ಆದೇಶ ನೀಡಿದೆ. ಮತ್ತೆ ಮಧ್ಯಂತರ ರಕ್ಷಣೆ ನೀಡಿದರೆ ತನಿಖೆಗೆ ಅಡ್ಡಿಯಾಗುತ್ತದೆ ಎಂದು ಇಡಿ ವಕೀಲರು ವಾದ ಮಂಡಿಸಿದ್ದು, ಈ ಬಗ್ಗೆ ಮಧ್ಯಾಹ್ನ ಆದೇಶ ನೀಡುವುದಾಗಿ ಹೈಕೋರ್ಟ್ ಪೀಠ ತಿಳಿಸಿದೆ.