ಹೂವಿನಹಿಪ್ಪರಗಿ: ನರಸಲಗಿ ಗ್ರಾಮದಲ್ಲಿ ಏಳನೆಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳವನ್ನು ಅದ್ಧೂರಿಯಾಗಿ ಫೆ. 17ರಂದು ನಡೆಸಲು ನಾವೆಲ್ಲಾ ಸನ್ನದ್ಧರಾಗಬೇಕಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ , ಮುಖ್ಯಗುರು ರೇವಣಸಿದ್ದಪ್ಪ ಅಳ್ಳಗಿ ತಿಳಿಸಿದರು.
ನರಸಲಗಿ ಗ್ರಾಮದ ಪವಾಡಬಸವೇಶ್ವರ ಮಠದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಗ್ರಾಮಸ್ಥರ ಹಾಗೂ ಕಸಾಪ ಪದಾಧಿಕಾರಿಗಳ ಸರ್ವ ಸಮ್ಮತದಿಂದ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಫೆ. 17ರಂದು ಸಮ್ಮೇಳನ ನಡೆಯುವುದಾಗಿ ಸಭೆಯಲ್ಲಿ ಘೋಷಣೆ ಮಾಡಿ ಅವರು ಮಾತನಾಡಿದರು.
ಜಿಲ್ಲೆ ಅಲ್ಲದೇ ರಾಜ್ಯ ಪದಾಧಿಕಾರಿಗಳು ಸೇರಿದಂತೆ ತಾಲೂಕಿನ ಅನೇಕ ಕಡೆಗಳಿಂದ ಐದು ಸಾವಿರಕ್ಕೂ ಅಧಿಕ ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಬರುವ ನಿರೀಕ್ಷೆಯಿದೆ. ಸಮ್ಮೇಳನ ಯಶಸ್ವಿಗೆ ಮುಖ್ಯವಾಗಿ ಪ್ರಸಾದ ಹಾಗೂ
ಕುಡಿಯುವ ನೀರಿನ ಕೊರತೆಯಾಗದಂತೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಕೆಲಸ ಬಹಳ ಮುಖ್ಯವಾಗಿದೆ. ಸಮಿತಿಯಲ್ಲಿರುವ ಮುಖಂಡರು ಶಿಸ್ತುಬದ್ಧವಾಗಿ ಜವಾಬ್ದಾರಿ ನೀಡಿದ ಕೆಲಸಗಳನ್ನು ಮಾಡಿ ಕನ್ನಡಾಂಬೆ ತೇರನ್ನು ಗ್ರಾಮದಲ್ಲಿ ಎಳೆಯಬೇಕಾಗಿದೆ ಎಂದು ಕರೆ ನೀಡಿದರು.
ಆಮಂತ್ರಣ ಪತ್ರಿಕೆ, ವೇದಿಕೆ, ಹಣಕಾಸು, ಪ್ರಚಾರ, ಆಹಾರ, ಧ್ವಜ ಪಾಲನೆ, ಮೆರವಣಿಗೆ, ಶಿಸ್ತುಪಾಲನೆ,ಅತಿಥಿ ವ್ಯವಸ್ಥೆ, ಜಾಹೀರಾತು, ಮೆರವಣಿಗೆ ನೀರು ಮತ್ತು ಸ್ವತ್ಛತೆ ಸೇರಿದಂತೆ 15ಕ್ಕೂ ಅಧಿಕ ಸಮಿತಿ ರಚಿಸಿ ಒಂದೊಂದು ಸಮಿತಿಯಲ್ಲಿ ಹತ್ತು ಜನ ಸದಸ್ಯರನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡಲಾಯಿತು.
ಸ್ಥಳೀಯ ಗ್ರಾಪಂ ಸದಸ್ಯರಿಗೆ ಸಿಗಬೇಕಾಗಿದ್ದ ಒಂದು ಲಕ್ಷಕ್ಕಿಂತಲೂ ಅಧಿಕ ಗೌರವಧನ ಹಣ ಗ್ರಾಪಂನಲ್ಲಿ ಜಮೆ ಇದೆ. ಈ ಹಣವನ್ನು ಸರ್ವ ಸದಸ್ಯರು ಚರ್ಚಿಸಿ ಸ್ಮರಣ ಸಂಚಿಕೆಗೆ ವ್ಯಯಿಸಬೇಕಾಗಿದೆ ಎಂದು ದೇವೆಂದ್ರ ಗೋನಾಳ ಸಭೆಯ ಮುಂದಿಟ್ಟಾಗ ಸದಸ್ಯರು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಲ್ಲಿ ಸೇರಿದ್ದ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಒಪ್ಪಿಗೆ ನೀಡಿದರು.
ಸಭೆಯಲ್ಲಿ ಶಾಂತಗೌಡ ಹೊಸಳ್ಳಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುರಾಜ ಕನ್ನೂರ, ತಾಲೂಕಾ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ದೇವೆಂದ್ರ ಗೋನಾಳ, ಬಸವ ಸಮಿತಿ ಅಧ್ಯಕ್ಷ ರಾಜುಗೌಡ ಚಿಕ್ಕೊಂಡ, ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ದತ್ತಿ ಸಂಚಾಲಕ ಎಸ್.ಐ. ಮನಗೂಳಿ, ಪ್ರಗತಿಪರ ರೈತ ಗಿರಿಧರಗೌಡ ಪಾಟೀಲ, ಬಾಬು ವಾಡೇದ, ನಾಗೇಶ ನಾಗೂರ, ಕೋಶಾಧ್ಯಕ್ಷ ಎಸ್.ಬಿ. ಮುತ್ತಗಿ, ಕೆ.ಎಸ್. ಬಾಗೇವಾಡಿ, ಸಮೂಹ ಸಂಪನ್ಮೂಲ ವ್ಯಕ್ತಿ ವೈ. ಕೆ. ಪತ್ತಾರ, ರಮೇಶ ಹಾಲಿಹಾಳ, ಹನುಮಂತ ಹಾಲಿಹಾಳ, ಶ್ರೀಶೈಲಗೌಡ ಹೊಸಳ್ಳಿ, ಅಲ್ಲಾಭಕ್ಷ ಮಕಾನದಾರ, ಕರವೇ ಮುಖಂಡ ಮಹಾಂತೇಶ ಚಕ್ರವರ್ತಿ, ಮಹಾಂತಪ್ಪ ಹಾಲಿಹಾಳ, ಗ್ರಾಪಂ ಸದಸ್ಯರಾದ ನಾಗರಾಜ ಓದಿ, ಹಾಗೂ ಬಸನಗೌಡ ಬಿರಾದಾರ ಇದ್ದರು. ಕಸಾಪ ಗೌರವ ಕಾರ್ಯದರ್ಶಿ ಯುವರಾಜ ಮಾದನಶೆಟ್ಟಿ ನಿರೂಪಿಸಿದರು. ದೇವೇಂದ್ರ ಗೋನಾಳ ವಂದಿಸಿದರು.