Advertisement
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದಲ್ಲಿ 2016ರಲ್ಲಿ ಅಸ್ತಿತ್ವಕ್ಕೆ ಬಂದ ಸಿಪಿಎಂ ಹತ್ತಾರು ಹಿಂದೂ ಕಾರ್ಯಕರ್ತರನ್ನು, ಬಿಜೆಪಿ ಪ್ರಮುಖರನ್ನು ಹತ್ಯೆ ಮಾಡುವ ಮೂಲಕ ಅತ್ಯಂತ ಕೆಟ್ಟ ರಾಜಕೀಯವನ್ನು ನಡೆಸುತ್ತಿದೆ. ಆದರೆ ದ.ಕ. ಜಿಲ್ಲೆ ರಾಜಕೀಯ ಸಹಬಾಳ್ವೆಯ ಜಿಲ್ಲೆಯಾಗಿದೆ. ಇಲ್ಲಿ ಎಲ್ಲ ಪಕ್ಷದವರು ಅತ್ಯಂತ ಪ್ರೀತಿಯ ಒಡನಾಟದಿಂದ ಬದುಕುತ್ತಿದ್ದಾರೆ. ಸಹಬಾಳ್ವೆ ಇಲ್ಲಿದೆ. ಹೀಗಾಗಿ ಇಂತಹ ಸ್ಥಳಕ್ಕೆ ಕೆಟ್ಟ ರಾಜಕೀಯ ನೀತಿಗಳನ್ನು ಅನುಸರಿಸುವ ಕೇರಳ ಮುಖ್ಯಮಂತ್ರಿ ಬಂದು ರ್ಯಾಲಿಯಲ್ಲಿ ಭಾಗವಹಿಸುವುದು ಸರಿಯಲ್ಲ. ಹೀಗಾಗಿ ಬಿಜೆಪಿ ಅವರ ಭೇಟಿಗೆ ವಿರೋಧಿಸುತ್ತದೆ ಎಂದರು.
ಕರಾವಳಿಯಲ್ಲಿ ಎಲ್ಲ ಕೋಮಿನ ಜನರು ಅತ್ಯುತ್ತಮವಾಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಯಾವುದೇ ಕೋಮು ವಿರೋಧಿ ಚಟುವಟಿಕೆಗಳು ಇಲ್ಲಿ ನಡೆದಿಲ್ಲ. ಆದರೂ ಇದೀಗ ಕೋಮು ಸೌಹಾರ್ದ ಎಂಬ ಹೆಸರಿನಲ್ಲಿ ಮಂಗಳೂರಿನಲ್ಲಿ ರ್ಯಾಲಿ ನಡೆಸುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದ ಮಠಂದೂರು ಅವರು, ಕೆಟ್ಟ ರಾಜಕೀಯ ನಡೆಸುತ್ತಿರುವ ಪಿಣರಾಯಿ ಅವರು ಇಲ್ಲಿಗೆ ಬಂದು ಸೌಹಾರ್ದತೆಯ ಪಾಠ ಹೇಳುವ ಅಗತ್ಯವಿಲ್ಲ ಎಂದರು. ಫೆ. 24ರಂದು ಬೆಳಗ್ಗೆ 10ಕ್ಕೆ ಮಂಗಳೂರಿನ ಅಂಬೇಡ್ಕರ್ ಸರ್ಕಲ್‌ನಿಂದ ಬೃಹತ್ ರ್ಯಾಲಿ ವಿಎಚ್‌ಪಿ/ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಕೇಂದ್ರ ಮೈದಾನಕ್ಕೆ ತೆರಳಲಿದೆ. ಅದಕ್ಕೂ ಬಿಜೆಪಿ ಪೂರ್ಣ ಬೆಂಬಲ ನೀಡಲಿದೆ. ಹಾಗೂ ಜಿಲ್ಲೆಯ ಮೂಲೆ ಮೂಲೆಗಳಿಂದ ಬಿಜೆಪಿ ಕಾರ್ಯಕರ್ತರು ಇದರಲ್ಲಿ ಭಾಗವಹಿಸಲಿದ್ದಾರೆ. ಫೆ. 25ರಂದು ಹರತಾಳ ನಡೆಯಲಿದೆ. ಅಮಾಯಕ ಮಹಿಳೆಯರನ್ನು ಸಮಾವೇಶಕ್ಕೆ ಕರೆತರುವ ತಂತ್ರಗಾರಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕರ್ತರು ಅರಿವು ಮೂಡಿಸುವ ಪ್ರಯತ್ನ ನಡೆಸಲಿದ್ದಾರೆ ಎಂದರು.
Related Articles
Advertisement